ಧರ್ಮದ ವೈರಸ್ ಅಂಟಿದವರಿಗೆ ಟಿಪ್ಪು ವಿರೋಧಿಯಾಗಿಯೂ ಕಾಣುತ್ತಾನೆ..!

ಬೆಂಗಳೂರು     ಹೃದಯ ವೈಶಾಲ್ಯವುಳ್ಳವರಿಗೆ ಟಿಪ್ಪು ಉತ್ತಮನಾಗಿಯೂ, ಜಾತಿ, ಧರ್ಮದ ವೈರಸ್ ಅಂಟಿದವರಿಗೆ ಟಿಪ್ಪು ವಿರೋಧಿಯಾಗಿಯೂ ಕಾಣುತ್ತಾನೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

      ನಗರದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಮೈಸೂರಿನವರಾದ ಎಚ್.ವಿಶ್ವನಾಥ್ ಪುಸ್ತಕ ಬರೆದವರು, ಇತಿಹಾಸ ಅರಿತವರು. ವಿಶ್ವನಾಥ್ ಯಾವ ಪಕ್ಷದಲ್ಲಿದ್ದಾರೆ ಎನ್ನುವುದೀಗ ಮುಖ್ಯವಲ್ಲ. ಯಡಿಯೂರಪ್ಪನವರೆ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿಗಳು ಸಹ ಟಿಪ್ಪು ಗುಣಗಾನ ಮಾಡಿದ್ದರು. ಟಿಪ್ಪುವನ್ನು ಕಾಂಗ್ರೆಸ್‍ನ ವೋಟ್ ಬ್ಯಾಂಕ್ ಎಂದು ಬಿಜೆಪಿಗರು ದೂರುತ್ತಿದ್ದರು.

     ಶೃಂಗೇರಿ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿದರೆ ಹೇಳುತ್ತಾರೆ. ನಂಜನಗೂಡು ದೇಗುಲದ ಬಗ್ಗೆ ಟಿಪ್ಪು ಹೇಗೆ ನಡೆದುಕೊಂಡಿದ್ದ ಎನ್ನುವುದು ಗೊತ್ತಾಗುತ್ತದೆ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಇಂದಿಗೂ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಮಂಗಳಾರತಿ ನಡೆಯುತ್ತದೆ. ಶೃಂಗೇರಿಯಲ್ಲಿ ಸಾವಿರಾರು ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದಲೆ ಹಣ ಹೋಗುತ್ತಿತ್ತು. ಮಲಗಿದವರನ್ನು ಎಬ್ಬಿಸಬಹುದು. ಆದರೆ ಸುಮ್ಮನೆ ಕಣ್ಣು ಮುಚ್ಚಿ ಕುಳಿತವರನ್ನು ಎಬ್ಬಿಸುವುದು ಕಷ್ಟ. ವಿಶ್ವನಾಥ್ ಅವರು ಇರುವ ಸತ್ಯವನ್ನು ಹೊರಗೆ ಹಾಕಿದ್ದಾರೆ. ಯಾವುದೇ ಭಯವಿಲ್ಲದೇ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

     ಹುತಾತ್ಮರಾದವರನ್ನು ಏಕೆ ವಿರೋಧಿಸಬೇಕು. ಯಾವುದೋ ಕಾಯಿಲೆ ಬಂದು ಟಿಪ್ಪು ಸತ್ತಿದ್ದರೆ ಹುತಾತ್ಮರಾಗುತ್ತಿರಲಿಲ್ಲ. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಿಂದ ಅವರು ವೀರ ಮರಣವನ್ನು ಅಪ್ಪಿದ್ದಾರೆ. ಟಿಪ್ಪು ವಿಚಾರದಲ್ಲಿ ಬಿಜೆಪಿ ಮತ್ತೆ ರಾಜಕೀಯ ಮಾಡುವುದು ಬೇಡ ಎಂದು ಆಗ್ರಹಿಸಿದರು.

    ಎಚ್.ವಿಶ್ವನಾಥ್ ಸಚಿವರಾಗಬೇಕೆಂಬುದು ತಮ್ಮ ಆಸೆಯೂ ಆಗಿದೆ. ಅವರು ಬಿಜೆಪಿ ಸೇರಿದ್ದಾರೆ ಎಂದು ಸುಖಾಸುಮ್ಮನೆ ಅವರನ್ನು ವಿರೋಧ ಮಾಡುವುದಿಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಜೈಲ್‍ಮೇಟ್. ಸುರೇಶ್ ಕುಮಾರ್ ಬಗ್ಗೆಯೂ ಪ್ರೀತಿಯಿದೆ. ತಮ್ಮದು ಪಕ್ಷಾತೀತ ರಾಜಕಾರಣ. ಸುರೇಶ್ ಕುಮಾರ್ ಮೇಲೆ ಪಠ್ಯದಿಂದ ಟಿಪ್ಪು ವಿಚಾರ ಕೈ ಬಿಡಬೇಕೆಂಬ ಒತ್ತಡವಿದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

    ಕಿಡಿಗೇಡಿಗಳು ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಮರಲ್ಲೂ ಇದ್ದಾರೆ. ಯಾರೋ ಒಬ್ಬರು ತಪ್ಪು ಮಾಡಿದ್ದರೆ ಅದನ್ನು ಇಡೀ ಸಮಾಜಕ್ಕೆ ಅಂಟಿಸುವುದು ಸರಿಯಲ್ಲ. ಡಿ.ಜೆ ಹಳ್ಳಿ ಪ್ರಕರಣವನ್ನು ಕೂಡ ಜಾತಿಗೆ ಬಿಜೆಪಿ ನಾಯಕರು ತಳಕು ಹಾಕಲೆತ್ನಿಸಿದರು. ಆದರೆ ಆ ಘಟನೆ ನಡೆದಿರುವುದು ಡ್ರಗ್ ಮಾಫಿಯಾದಿಂದ ಎನ್ನುವುದು ಗೊತ್ತಾಗಿದೆ. 326 ಜನರನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಿಡಿದಿದ್ದಾರೆ. ಡಿ.ಜೆಹಳ್ಳಿ ಗಾಂಜಾ, ಅಫೀಮು ತಾಣ. ಅಲ್ಲಿ ಮೂರು ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಡಿ.ಜೆ ಹಳ್ಳಿ ಗಲಭೆಗೆ ಡ್ರಗ್ಸ್ ಮಾಫಿಯಾ ನಡುವಿನ ಘರ್ಷಣೆ ಕಾರಣ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಪಾದರಾಯನಪುರದಲ್ಲಿಯೂ ಇಂತಹದ್ದನ್ನೇ ಕಾಣಬಹುದು. ಈಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಪೊಲೀಸರು ಮನಸ್ಸು ಮಾಡಿದರೆ ಪ್ರಕರಣವನ್ನು ಮೂರು ದಿನಕ್ಕೆ ಮುಗಿಸಬಹುದು ಎಂದು ಮಾರ್ಮಿಕವಾಗಿ ಹೇಳಿದರು.

    ಡಿ.ಜೆ.ಹಳ್ಳಿ ಘಟನೆ ಬಗ್ಗೆ ಬಿಜೆಪಿಯವರು ಹೇಳಿಕೆ ಕೊಡುವ ಅವಶ್ಯಕತೆಯಿಲ್ಲ. ಆ ನಡ್ಡಾ ಪಡ್ಡಾ ಮುಂದೆ ಮಾತನಾಡಲಿ. ಕೆರೆಯಲ್ಲಿ ಈಜುವುದು ಬೇಡ, ಸಮುದ್ರದಲ್ಲಿ ಈಜಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಇಬ್ರಾಹಿಂ ಸವಾಲು ಹಾಕಿದರು.ಶೃಂಗೇರಿಯಲ್ಲಿ ಅನ್ಯ ಧರ್ಮಕ್ಕೆ ಸೇರಿದ ಧ್ವಜ ಹಾರಾಟ ವಿಚಾರದಲ್ಲಿಯೂ ಬಿಜೆಪಿಯವರು ಮುಸ್ಲಿಮರ ಮೇಲೆ ಗೂಬೆ ಕೂರಿಸಲು ಹೋಗಿದ್ದರು. ಬಳಿಕ ಅದು ಮದ್ಯ ವ್ಯಸನಿಯ ಕೃತ್ಯ ಎಂಬುದು ತಿಳಿದ ಮೇಲೆ ಸುಮ್ಮನಾದರು ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಡಿ.ಜೆ.ಹಳ್ಳಿ ಘಟನೆಗೆ ಕಾಂಗ್ರೆಸ್ ಕಾರಣ ಎಂಬ ಮಾಜಿ ಸಚಿವ ರೋಷನ್ ಬೇಗ್ ಆರೋಪ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಎಂ.ಇಬ್ರಾಹಿಂ, ಹೀಗೆ ಹೇಳಿಕೆ ನೀಡಲು ರೋಷನ್ ಬೇಗ್ ಯಾರು ಎನ್ನುವುದನ್ನು ಮೊದಲು ಹೇಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಏಕೆ? ರೋಷನ್ ಬೇಗ್ ಈಗ ಕಾಂಗ್ರೆಸ್‍ನಲ್ಲೂ ಇಲ್ಲ, ಬಿಜೆಪಿಯಲ್ಲೂ ಇಲ್ಲ. ಅವರೀಗ ಸ್ವತಂತ್ರರು ಎಂದು ಸೂಚ್ಯವಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap