ತುಮಕೂರು:
ಚಂದನವನದಲ್ಲಿ ತಲ್ಲಣ ಸೃಷ್ಟಿಸಿರುವ ಡ್ರಗ್ಸ್ ದಂಧೆ ಬೆನ್ನಲ್ಲೇ ಜಿಲ್ಲೆಯಲ್ಲೂ ಗಾಂಜಾ ಅಫೀಮ್, ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ದೂರು ವ್ಯಾಪಕವಾಗಿದೆ. ಅದರಲ್ಲೂ ಸ್ಮಾರ್ಟ್‍ಸಿಟಿಯಾಗಿ ರೂಪುಗೊಳ್ಳುತ್ತಿರುವ ತುಮಕೂರು ನಗರದ ಯುವಜನರು ಗಾಂಜಾ ನಶೆಗೆ ದಾಸರಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.
ತುಮಕೂರು ನಗರದ ಶಿರಾಗೇಟ್, ಹೊನ್ನೇನಹಳ್ಳಿ ರಸ್ತೆ, ನಾಗಣ್ಣನ ಪಾಳ್ಯ ಸುತ್ತಮುತ್ತಲಿನ ಬಡಾವಣೆಗಳು, ಮೆಳೆಕೋಟೆಯ ಅಬ್ದುಲ್ ಕಲಾಂ ಪಾರ್ಕ್, ರಿಂಗ್ ರಸ್ತೆ, ಮರಳೂರು ದಿಣ್ಣೆ, ಹೆಗ್ಗೆರೆ, ಬೆಂಗಳೂರು ರಸ್ತೆ,್ರ ಕ್ಯಾತ್ಸಂದ್ರ ಟೋಲ್‍ಫ್ಲಾಜಾ, ಅಮಾನಿಕೆರೆ, ನಾಮದ ಚಿಲುಮೆ ಸುತ್ತಮುತ್ತಲ ಅರಣ್ಯ ಪ್ರದೇಶ ಮತ್ತಿತೆರೆಡೆ ಗಾಂಜಾ ಮಾರಾಟ ಜಾಲ ನಿರಂತರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ವ್ಯಾಪಕವಾಗಿದ್ದು. ಗಾಂಜಾ ಸುಳಿಗೆ ಸಿಲುಕಿದ ಯುವಜನರು ಮಾನಸಿಕರೋಗಿಗಳಾಗಿ ಕುಟುಂಬಕ್ಕೂ, ಸಮಾಜಕ್ಕೂ ಮಾರಕವಾಗುತ್ತಿರುವುದು ಕಂಡುಬಂದಿದೆ.
ಕಾಲೇಜು, ಪಾರ್ಕ್, ಬಯಲು ಪ್ರದೇಶದಲ್ಲಿ ದಂಧೆ: ಕೊರೊನಾಗೆ ಮುಂಚೆ ಶಾಲಾ ಕಾಲೇಜು ತೆರೆದಿದ್ದ ಸಂದರ್ಭದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಪಾಲೆಟೆಕ್ನಿಕ್, ಪದವಿ ಕಾಲೇಜು ಸುತ್ತಮುತ್ತಲ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಯುವಜನರನ್ನು ಗಾಂಜಾ ನಶೆಗೆ ಬೀಳಿಸುತ್ತಿದ್ದ ಅಕ್ರಮ ಮಾರಾಟ ಜಾಲ, ಸದ್ಯ ಶಾಲಾ ಕಾಲೇಜು ಪುನರಾರಂಭವಾಗದಿರುವುದರಿಂದ ಸಾರ್ವಜನಿಕ ಉದ್ಯಾನವನ, ಗ್ರಾಮಾಂತರ ಪ್ರದೇಶಗಳ ಬಳಿಗೆ ಯುವಕರನ್ನು ಕರೆಸಿಕೊಂಡು ಅಕ್ರಮ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಅಸಹಜ ವರ್ತನೆ, ಖಿನ್ನತೆಯ ಸ್ವರೂಪ: ಡ್ರಗ್ಸ್‍ನಂತೆ ಗಾಂಜಾ ಚಟ ಅಂಟಿಸಿಕೊಂಡ ಯುವಜನರಲ್ಲಿ ಅಸಹಜ ವರ್ತನೆ, ಸದಾ ನಶೆಯಲ್ಲಿರುತ್ತಿದ್ದು, ಪೋಷಕರ ಮಾತು ಕೇಳದೆ ಸರಿಯಾಗಿ ಆಹಾರವನ್ನು ಸೇವಿಸದೆ ಖಿನ್ನತೆಗೊಳಗಾದವರಂತೆ ಇರುತ್ತಾರೆ. 12 ರಇಂದ 22 ವರ್ಷದೊಳಗಿನವರು ಹೆಚ್ಚಾಗಿ ಗಾಂಜಾ ಚಟ ಬೆಳೆಸಿಕೊಳ್ಳುತ್ತಿದ್ದು, ಸಿಗರೇಟ್ ಒಳಗಿನ ತಂಬಾಕು ತೆಗೆದು ಗಾಂಜಾ ಹೊಡೆಯುವ ಚಾಳಿ ಬೆಳೆಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಸಾಮಾನ್ಯವಾಗಿ ಹುಳುಕಲು,್ಲ ದಂತಕ್ಷಯ ಮೊದಲಾದ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ದಂತ ವೈದ್ಯರ ಬಳಿಯೂ ಹೋಗಲು ಹಿಂಜರಿಯುತ್ತಾರೆ. ಪೋಷಕರ ಬಲವಂತದ ಮೇರೆಗೆ ವೈದ್ಯರ ಬಳಿ ಬಂದಾಗಲೂ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಮುಚ್ಚಿಡುವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಹೀಗೆ ಬಿಟ್ಟರೆ ಯುವಜನತೆ ಮಾನಸಿಕ ರೋಗಿಗಳಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಪಾಯವಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ.
5 ವರ್ಷದಲ್ಲಿ 49 ಪ್ರಕರಣ, 75 ಮಂದಿ ಬಂಧನ: ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 49 ಪ್ರಕರಣಗಳು ಎನ್‍ಡಿಪಿಎಸ್ ಕಾಯ್ದೆಯಡಿ ಗಾಂಜಾ ಅಫೀಮ್ ಮಾರಾಟದ ವಿರುದ್ಧ ದಾಖಲಾಗಿದ್ದು, 75 ಮಂದಿಯನ್ನು ಗಾಂಜಾ ಅಕ್ರಮ ಸಾಗಾಟ, ಮಾರಾಟ, ಬೆಳೆ ಬೆಳೆದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಗಾಂಜಾ ಖರೀದಿಗೆ ಮನೆಯಲ್ಲಿ ಹಣ ಸಿಗದಿದ್ದಾಗ ಕಳ್ಳತನ, ದರೋಡೆ ಮಾಡಿಯಾದರೂ ಗಾಂಜಾ ಸೇವನೆ ಮಾಡಬೇಕೆಂಬ ಕೆಟ್ಟ ಖಯಾಲಿಗೆ ಬೀಳುತ್ತಿದ್ದಾರೆ.
ದಾಳಿ ಸಾಂಕೇತಿಕವಾಗದಿರಲಿ:
ಆಂಧ್ರ ಮತ್ತು ಬೆಂಗಳೂರಿನ ನಂಟು ಜಿಲ್ಲೆಯಲ್ಲಿ ವಿಸ್ತರಿಸಿರುವ ಗಾಂಜಾ ಜಾಲಕ್ಕಿದ್ದು, ಪೊಲೀಸರು ಈ ಬಗ್ಗೆ ಕಠಿಣ ಕ್ರಮ ವಹಿಸಿ ಜಾಲವನ್ನು ಬೇಧಿಸಿ ಹಾದಿ ತಪ್ಪುತ್ತಿರುವ ಯುವಜನರನ್ನು ರಕ್ಷಿಸಬೇಕಿದೆ ಎಂಬ ಕೂಗು ಪ್ರಬಲವಾಗಿ ಕೇಳಿಬಂದಿದೆ. ಪೊಲೀಸರು ಸೈರನ್ ಹಾಕಿಕೊಂಡು ಬಂದು ದಾಳಿ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಆರೋಪಿಗಳು ಪರಾರಿಯಾಗುತ್ತಾರೆ. ಮಫ್ತಿಯಲ್ಲಿ ಜಾಲವನ್ನು ಪತ್ತೆ ಹಚ್ಚಿ ಸದೆಬಡೆಯಬೇಕಿದೆ. ನ್ಯಾಯಾಲಯದಲ್ಲೂ ಇಂತಹ ಪ್ರಕರಣದಲ್ಲಿ ಕಠಿಣ ಶಿಕ್ಷೆ ಜಾರಿಯಾಗಿ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ರವಾನೆಯಾಗಬೇಕು ಎಂಬ ಆಗ್ರಹಗಳು ಕೇಳಿಬಂದಿದೆ. ಎನ್‍ಡಿಪಿಎಸ್ (ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್ ಸಬ್‍ಸ್ಟ್ಯಾನ್ಸ್ ಆಕ್ಟ್) ಕಾಯ್ದೆ ಪ್ರಕಾರ ನಿಷಿದ್ಧವಾದ ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಕಂಡುಬಂದಲ್ಲಿ ವಿವಿಧ ಸೆಕ್ಷನ್‍ಗಳಡಿ 3 ವರ್ಷದಿಂದ 20 ವರ್ಷದವರೆಗೆ ಜೈಲು ವಾಸ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ