ಚಿತ್ರದುರ್ಗ:
ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಕಳೆದ ಐದು ತಿಂಗಳಿನಿಂದ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಸಂಚಾರವನ್ನು ಇಂದಿನಿಂದ ಮತ್ತೆ ಪ್ರಾರಂಭಿಸಲಾಗಿದೆ.ಕೇಂದ್ರ ಸರ್ಕಾರದಿಂದ ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟಗೊಂಡ ಹಿನ್ನೆಲೆ ಸೆಪ್ಟೆಂಬರ್ 1 ರಿಂದ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭಿಸಲಾಯಿತು. ಬರೋಬ್ಬರಿ ಐದು ತಿಂಗಳ ಬಳಿಕ ಖಾಸಗಿ ಬಸ್ ಗಳು ರಸ್ತೆಗೆ ಇಳಿದಿವೆ.
ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಾಗಿದ್ದು, ಇಲ್ಲಿಂದ ಶಿವಮೊಗ್ಗ, ಬಳ್ಳಾರಿ, ಬೆಂಗಳೂರು, ದಾವಣಗೆರೆ, ಅನಂತಪುರ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಮಾಡಲಿವೆ.ರಾಜ್ಯದಲ್ಲಿನ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದಂತೆ ಉಳಿದ ಪ್ರದೇಶಗಳಲ್ಲಿ ಕೆಲವು ಚಟುವಟಿಕೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ.
ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಸಂಚರಿಸಲು ಮುಕ್ತ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಆದರೆ ಶಾಲಾ-ಕಾಲೇಜು, ಸಿನಿಮಾ ಮಂದಿರ, ಈಜುಕೊಳ, ರಂಗಮಂದಿರ ಮತ್ತು ಪಾರ್ಕ್ ಗಳು ಎಂದಿನಂತೆ ಬಂದ್ ಆಗಿರಲಿವೆ. ಕಂಟೈನ್ಮೆಂಟ್ ವಲಯಗಳಲ್ಲಿ ಮೊದಲಿನಂತೆ ನಿರ್ಬಂಧಗಳು ಮುಂದುವರಿಯಲಿದೆ.
ರಾಜ್ಯದೊಳಗೆ ಹಾಗೂ ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಹಾಗೂ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇಂತಹ ಓಡಾಟಕ್ಕೆ ಯಾವುದೇ ಪ್ರತ್ಯೇಕ ಅನುಮತಿ, ಅನುಮೋದನೆ ಅಥವಾ ಇ-ಪರ್ಮಿಟ್ ಅಗತ್ಯವಿರುವುದಿಲ್ಲ. ಆದರೆ ಕರ್ನಾಟಕಕ್ಕೆ ಅನ್ಯ ರಾಜ್ಯಗಳಿಂದ ಆಗಮಿಸುವವರು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
