ಬೆಂಗಳೂರು
ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ನಾಟಕದಿಂದ ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ ಅಭಿಯಾನ ಆರಂಭಿಸುತ್ತಿರುವುದಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ? ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.
ದೇಶದದಲ್ಲಿ 65 % ಯುವಕರು ಬೀದಿಯಲ್ಲಿ ನಿರುದ್ಯೋಗಿಗಳಾಗಿ ಒದ್ದಾಡುತ್ತಿದ್ದಾರೆ.ಕೇಂದ್ರ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ.ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 6 ವರ್ಷಗಳಾಗಿದ್ದು, ಅವರು ಚುನಾವಣೆ ಪೂರ್ವ ವಾಗ್ದಾನ ನೀಡಿದಂತೆ 12 ಕೋಟಿ ಜನರಿಗೆ ಉದ್ಯೋಗ ಕೊಡಬೇಕಿತ್ತು. ಆದರೆ ಮೋದಿ ಸರ್ಕಾರ ಉದ್ಯೋಗ ಕೊಡುವುದಿರಲಿ, ಇರುವ ಕೆಲಸವನ್ನೇ ಕಿತ್ತುಕೊಳ್ಳುತ್ತಿದ್ದೆ .ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದೇ ಯುವಕರು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ ಎಂದರು.
ಕರ್ನಾಟಕದಲ್ಲಿಯೂ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಬಿಜೆಪಿ ಸರ್ಕಾರ ಲಕ್ಷ್ಯವಹಿಸಿಲ್ಲ. ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಕೇಂದ್ರದ ದುರಾಡಳಿತದಿಂದ ಯುವಕರು ಬೀದಿಗೆ ಬೀಳುವಂತಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ಬರೀ ಟೆಲಿವಿಷನ್ ಸರ್ಕಾರ ಎಂದು ಟೀಕಿಸಿದ ಶ್ರೀನಿವಾಸ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಕಿಡಿಕಾರಿದರು.ಜಿಡಿಪಿ ಕುಸಿಯಲು ನಿರ್ಮಲಾ ಸಿತರಾಮನ್ ಅವರೇ ಕಾರಣ. ಮುಂದಿನ ದಿನಗಳಲ್ಲಿ ಎಲ್ಲಾ ಸಂಸದರು ಮತ್ತು ಸಚಿವರ ನಿವಾಸದ ಮುಂಭಾಗ ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಡ್ರಗ್ಸ್ ಹಾವಳಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಂತೆ ಕರ್ನಾಟಕದಲ್ಲಿಯೂ ಕೂಡ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ. ದಂಧೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ