ತುಮಕೂರು
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಾಮಗಾರಿ ನಡೆಯುತ್ತಿರುವ ರಸ್ತೆಗಳು ಕೆಸರುಮಯವಾಗಿ ಜನ, ವಾಹನ ಸಂಚಾರಕ್ಕೆ ಕಿರಿಕಿರಿಯಾಗಿದೆ.
ಗುರುವಾರ ಮಧ್ಯಾಹ್ನ ಬಿದ್ದ ಮಳೆಯಿಂದ 23ನೇ ವಾರ್ಡಿನ ಎ.ಕೆ.ಕಾಲೋನಿಯಲ್ಲಿ ಮನೆಯೊಂದು ಕುಸಿದುಬಿದ್ದಿದೆ. ನಾಗರಾಜು ಎಂಬುವವರಿಗೆ ಸೇರಿದ ಹೆಂಚಿನ ಮನೆ ಮಳೆಯಲ್ಲಿ ನೆನೆದು ಕುಸಿಯಿತು. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿದ್ದ ಮಂಚ, ಬೀರು, ಟಿವಿ ಪಾತ್ರೆ, ದಿನಸಿ ಪದಾರ್ಥಗಳು ಮಣ್ಣಿನಡಿ ಮುಚ್ಚಿ ಹೋಗಿವೆ. ಮನೆಯಿಲ್ಲದೆ ಬೀದಿಪಾಲಾಗಿದ್ದು ಮನೆ ಕಟ್ಟಿಸಿಕೊಳ್ಳಲು ಸರ್ಕಾರ ತಮ್ಮ ಕುಟುಂಬಕ್ಕೆ ನೆರವು ನೀಡಬೇಕು ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಬೇಕು ಎಂದು ನಾಗರಾಜು ಮನವಿ ಮಾಡಿದ್ದಾರೆ.ವಿವಿಧ ಬಡಾವಣೆಗಳಲ್ಲಿ ಚರಂಡಿಯ ಕಸ ಮಳೆ ನೀರಿನಿಂದ ಕೊಚ್ಚಿ ರಸ್ತೆಮೇಲೆ ಸಂಗ್ರಹವಾಗಿದೆ. ಬಿರುಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ನುಗ್ಗಿ ಫಜೀತಿ ಉಂಟಾಗಿದೆ. ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ರಸ್ತೆ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಸಮಸ್ಯೆ ನಿವಾರಿಸಬೇಕು ಎಂದು ನಾಗರೀಕರು ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ