ಸ್ವಚ್ಛ ಭಾರತ್ ಅಡಿ ಪಂಚಾಯ್ತಿಗೊಂದು ಘನತ್ಯಾಜ್ಯ ಸಂಸ್ಕರಣಾ ಘಟಕ !

ತುಮಕೂರು

     ಸ್ವಚ್ಛ ಭಾರತ್ ಅಭಿಯಾನದಡಿ ಜಿಲ್ಲೆಯ 330 ಗ್ರಾಪಂ ವ್ಯಾಪ್ತಿಯಲ್ಲೂ ಘನತ್ಯಾಜ್ಯ ಘಟಕ ಆರಂಭಿಸಲು ತುಮಕೂರು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಅನುಮೋದನೆಗೊಂಡ 75 ಘಟಕಗಳಿಗೆ ಡಿಪಿಆರ್ ಅನುಮೋದನೆಗೊಂಡು 39 ಘಟಕಗಳು ಈಗಾಗಲೇ ಕಾರ್ಯಾರಂಭಗೊಂಡಿವೆ.

      255 ಪಂಚಾಯ್ತಿ ವ್ಯಾಪ್ತಿಯ ಘಟಕಗಳನ್ನು ಡಿಪಿಆರ್ ಅನುಮೋದನೆಗೆ ಸಲ್ಲಿಸಿದ್ದು, ರಾಜ್ಯದಲ್ಲಿ ಕೊಡಗು ಬಿಟ್ಟರೆ, ತುಮಕೂರು ಜಿಲ್ಲಾ ಪಂಚಾಯತ್ ಮಾತ್ರ ಪ್ರತೀ ಪಂಚಾಯ್ತಿಯಲ್ಲೂ ಘಟಕಸ್ಥಾಪನೆ ಸಂಬಂಧ ಸ್ಥಳಗುರುತಿಸಿ ಡಿಪಿಆರ್ ತಯಾರಿಸಿರುವ ಹಿರಿಮೆಗೆ ಪಾತ್ರವಾಗಿದೆ.

     ಪಂಚಾಯ್ತಿಗಳಲ್ಲಿ ಘಟಕ ಸ್ಥಾಪನೆ ಸಂಬಂಧ ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು (ಆಡಳಿತಾಧಿಕಾರಿ ನೇಮಕಗೊಳ್ಳುವುದಕ್ಕೂ ಮುಂಚೆ) , ಪಿಡಿಒಗಳಿಗೆ ತರಬೇತಿ ನಡೆಸಿ, ಘಟಕ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಉಡುಪಿ ಜಿಲ್ಲೆಗಳಿಗೂ ಪ್ರವಾಸ ಮಾಡಿಸಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ.

    145 ಕಡೆ ಸ್ವಂತ ಜಾಗ ಲಭ್ಯ: ಪ್ರತೀ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣಕ್ಕೆ ಹತ್ತು ಗುಂಟೆ ಜಾಗದ ಅವಶ್ಯಕತೆ ಇದ್ದು, ಈಗಾಗಲೇ 145 ಪಂಚಾಯ್ತಿಗಳಲ್ಲಿ ಘಟಕ ನಿರ್ಮಾಣಕ್ಕೆ ಜಾಗವನ್ನು ಜಿಲ್ಲಾಡಳಿತದ ಅನುಮೋದನೆಯೊಂದಿಗೆ ಪಂಚಾಯ್ತಿ ಸುಪರ್ದಿಗೆ ಪಡೆದುಕೊಂಡಿದೆ. ಜಿಪಂ ಸಿಇಒ ಶುಭಕಲ್ಯಾಣ್ ಅವರು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರೊಂದಿಗೆ ಜಾಗ ದೊರಕಿಸುವ ಸಂಬಂಧ ನಿರಂತರ ಸಮಾಲೋಚನೆಯಲ್ಲಿದ್ದು, ಜಾಗ ಇನ್ನೂ ಲಭ್ಯವಾಗದಿರುವ ಪಂಚಾಯ್ತಿಗಳಲ್ಲಿ ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಳೆಯ,ಬಳಕೆಯಾಗದ ಕಟ್ಟಡಗಳಲ್ಲಿ ತಾತ್ಕಾಲಿಕವಾಗಿ ಘಟಕ ಆರಂಭಿಸಲು ಕ್ರಮ ವಹಿಸಲಾಗಿದೆ.

ಅನುದಾನ ಲಭ್ಯತೆ ಹೇಗೆ:

    ಮೊದಲ ಹಂತದ 75 ಘಟಕ ನಿರ್ಮಾಣಕ್ಕೆ ಪ್ರತೀ ಘಟಕಕ್ಕೆ 20 ಲಕ್ಷ ಘಟಕ ವೆಚ್ಚ ಮಂಜೂರಾಗಿದ್ದು. ಪ್ರತೀ ಘಟಕ ನಿರ್ಮಾಣಕ್ಕೆ ಶೇ.70ರಷ್ಟು ಸ್ವಚ್ಛ ಭಾರತ್ ಅನುದಾನ, ಉಳಿದಂತೆ ಶೇ.30ರಷ್ಟು ಅನುದಾನವನ್ನು ಪಂಚಾಯ್ತಿಗೆ ಲಭ್ಯವಾಗುವ 15ನೇ ಹಣಕಾಸು ನಿಧಿಯಿಂದ ಬಳಸಲು ಅವಕಾಶ ಕಲ್ಪಿಸಲಾಗಿದೆ. ನರೇಗಾ ಅನುದಾನದಡಿ ಘಟಕಕ್ಕೆ ಹಾದುಹೋಗುವ ರಸ್ತೆ, ಎರೆಹುಳ್ಳುಗೊಬ್ಬರ ಗುಂಡಿ ನಿರ್ಮಾಣಕ್ಕೆ ಬಳಸಲು ಅನುಮತಿಸಲಾಗಿದೆ. ಗ್ರಾಮ ಪಂಚಾಯ್ತಿ ಆದಾಯದಲ್ಲಿ ಶೇ. 25ರಷ್ಟು ಗ್ರಾಮ ನೈರ್ಮಲ್ಯೀಕರಣಕ್ಕೆ ಮೀಸಲಿರಿಸಬೇಕಿದ್ದು, ಘಟಕ ನಿರ್ವಹಣೆಗೂ ವಿನಿಯೋಗಿಸಲು ಸೂಚಿಸಲಾಗಿದೆ. ಆಯಾ ಪಂಚಾಯತ್ ವ್ಯಾಪ್ತಿಯ ಜನಸಂಖ್ಯೆ ಆಧರಿಸಿ ಘಟಕ ವೆಚ್ಚ ನಿರ್ಧರಿಸಲು ಮಾನದಂಡ ವಿಧಿಸಲಾಗಿದೆ.

ಕಸ ಸಂಗ್ರಹ ವಾಹನ:

    ಯೋಜನೆಯಡಿ ಪ್ರತೀ ಗ್ರಾಮ ಪಂಚಾಯಿತಿಯೂ ಕಸ ಸಂಗ್ರಹ ವಾಹನವನ್ನು ಹೊಂದಲು ಅವಕಾಶವಿದ್ದು, ಈಗಾಗಲೇ 34 ಪಂಚಾಯ್ತಿಗಳು ವಾಹನ ಖರೀದಿಸಿವೆ. ಈ ವಾಹನಗಳು ನಗರದಲ್ಲಿರುವಂತೆ ಗ್ರಾಮದ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಿದ್ದಾರೆ. ಈ ಕಾರ್ಯಕ್ಕೆ ನಿಯೋಜಿತವಾಗುವ ಸಿಬ್ಬಂದಿಗೆ ವೇತನ, ಘಟಕ ನಿರ್ವಹಣೆಯ ವೆಚ್ಚಕ್ಕೆ ಅಗತ್ಯವಾದ ಹಣವನ್ನು ಪ್ರತೀ ಮನೆಯಿಂದ ತಿಂಗಳಿಗೆ 20-30ರೂ ಶುಲ್ಕ ವಸೂಲಿ ಮೂಲಕ ಸಂಗ್ರಹಿಸುವ ಮೂಲಕ ಕ್ರೂಢೀಕರಿಸಬೇಕಿದೆ. ಸಿಬ್ಬಂದಿಗೆ ವೈಯಕ್ತಿಕ ಸುರಕ್ಷಾ ಪರಿಕರಗಳು, ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಪಂಚಾಯ್ತಿಗಳ ಜವಾಬ್ದಾರಿಯಾಗಿದೆ.

ಆದಾಯಕ್ಕೂ ಕ್ರಮ:

    ಗ್ರಾಮ ಪಂಚಾಯ್ತಿಗಳ ಘನ ತ್ಯಾಜ್ಯ ಘಟಕಗಳಲ್ಲಿ ಸಂಸ್ಕರಣೆಗೊಂಡು ಉಳಿಯುವ ಪುನರ್‍ಬಳಕೆಯಾಗುವ ಒಣ ತ್ಯಾಜ್ಯ, ಉತ್ಪಾದನೆಯಾಗುವ ಗೊಬ್ಬರವನ್ನು ಮಾರುವ ಮೂಲಕ ಆದಾಯ ಗಳಿಕೆಗೂ ಅವಕಾಶವಿದ್ದು, ಸ್ವಚ್ಛ ಗ್ರಾಮದ ಪರಿಕಲ್ಪನೆಯಡಿ ಯೋಜನೆ ಸಾಕಾರಗೊಳಿಸಲಾಗುತ್ತಿದೆ. ತುಮಕೂರು ತಾಲೂಕು ಕೋರ ಗ್ರಾಮ ಪಂಚಾಯಿತಿಯವರು ಘಟಕದಲ್ಲಿನ ಒಣ ಕಸ ಮಾರಾಟದಿಂದ ಜುಲೈ ಮಾಹೆಯಲ್ಲಿ 8113 ರೂ. ಆದಾಯವನ್ನು ಗಳಿಸಿದ್ದಾರೆ.

ಧಾರ್ಮಿಕ ಕೇಂದ್ರಗಳಿರುವೆಡೆ ದ್ರವ ತ್ಯಾಜ್ಯ ಘಟಕ

     ಪಂಚಾಯ್ತಿಗೊಂದರಂತೆ ನಿರ್ಮಾಣವಾಗುವ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಇಲ್ಲ. ಈ ಹಿನ್ನೆಲೆಯಲ್ಲಿ ದ್ರವ ತ್ಯಾಜ್ಯಗಳು ಹೆಚ್ಚು ಉತ್ತತ್ತಿಯಾಗುವ ಧಾರ್ಮಿಕ, ಪ್ರವಾಸಿ ತಾಣಗಳಾದ ಎಡೆಯೂರು, ಸಿದ್ಧಗಂಗೆ, ಗೊರವನಹಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ದ್ರವತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ರಾಜ್ಯ ಮಟ್ಟದ ಉನ್ನತ ಸಮಿತಿ ಆಗಮಿಸಿ ಸ್ಥಳ ಪರಿಶೀಲನೆ ಸಹ ನಡೆಸಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಬಸವನಗೌಡ ಪ್ರಜಾಪ್ರಗತಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap