ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಿದರೆ ಹೋರಾಟ

ತುಮಕೂರು

     ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರನ್ನು ಬದಲಾಯಿಸಲಾಗುತ್ತದೆ ಎಂಬ ವದಂತಿಗಳು ಹರಡಿದ್ದು, ದಲಿತ ಎಂಬ ಕಾರಣಕ್ಕೆ ಕೇವಲ ಎರಡೇ ವರ್ಷಗಳಿಗೆ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದರೆ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ಒಕ್ಕೂಟದ ಕಾರ್ಯದರ್ಶಿ ನಾಗರಾಜು ಗೂಳರಿವೆ ಹಾಗೂ ಇತರೆ ಮುಖಂಡರು ಎಚ್ಚರಿಸಿದರು.

    ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಈ ಹಿಂದೆ ಲಿಂಗಾಯಿತ ಸಮುದಾಯದ ಜಿ.ಎಸ್. ಬಸವರಾಜು 20 ವರ್ಷ, ಒಕ್ಕಲಿಗ ಸಮುದಾಯದ ಎಸ್.ಪಿ.ಮುದ್ದಹನುಮೇಗೌಡರು 10 ವರ್ಷ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಎಸ್.ಷಫಿ ಅಹಮ್ಮದ್ 10 ವರ್ಷಗಳ ಅಧಿಕಾರ ನಡೆಸಿದ್ದಾರೆ. ಕೇವಲ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿರುವ ಆರ್.ರಾಮಕೃಷ್ಣ ಅವರನ್ನು ಬದಲಾಯಿಸುವ ಕುರಿತು ವದಂತಿಗಳು ಹರಡಿದ್ದು, ದಲಿತರನ್ನು ಅಧಿಕಾರದಿಂದ ವಂಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

      ಒಂದು ವೇಳೆ ಜಿಲ್ಲಾ ಮುಖಂಡರ ಚಿತಾವಣೆಗೆ ಒಳಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಿದರೆ ಮುಂದಿನ ದಿನಗಳಲ್ಲಿ ದಲಿತ ಸಮುದಾಯದ ಎಡ ಮತ್ತು ಬಲಗೈ ಸಮುದಾಯಗಳು ಪ್ರತಿ ಕಾಲೋನಿಗಳಲ್ಲಿಯೂ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರಕ್ಕೆ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 35 ರಿಂದ 40 ಸಾವಿರ ಮತಗಳು ದಲಿತ ಸಮುದಾಯಕ್ಕೆ ಸೇರಿವೆ. ಒಂದು ವೇಳೆ ದಲಿತರನ್ನು ಅಧಿಕಾರದಿಂದ ವಂಚಿಸಿದರೆ ಮುಂದಿನ ಚುನಾವಣೆಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಆರ್.ರಾಮಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ 10 ವರ್ಷಗಳವರೆಗೆ ಮುಂದುವರೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

   ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ, ರಾಜ್ಯ ಮತ್ತು ರಾಷ್ಟ್ರ ವರಿಷ್ಠರಿಗೆ ಪತ್ರದ ಮುಖೇನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ ಅವರನ್ನು ಮುಂದುವರೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

   ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ದಲಿತರು ಅದರಲ್ಲೂ ಎಡ ಮತ್ತು ಬಲಗೈ ಸಮುದಾಯಗಳನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಉದ್ಯೋಗದಲ್ಲಿ ಅತ್ಯಂತ ಕೆಳಕ್ಕೆ ತುಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ವರ್ಗಾವಣೆ ಎಂಬ ಅಸ್ತ್ರವನ್ನು ಚಲಾಯಿಸುತ್ತಿರುವುದು ಖಂಡನೀಯ. ಕೇವಲ ಆರೋಪ ಬಂದ ತಕ್ಷಣ ಅದನ್ನು ಪರಿಶೀಲಿಸದೆ ಏಕಾಏಕಿ ವರ್ಗಾವಣೆ ಮಾಡುವ ಮೂಲಕ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗಿಸುವ ಕೆಲಸ ನಡೆಯುತ್ತಿದೆ ಎಂದರು.

    ರಾಜ್ಯ ಸರ್ಕಾರ ಇತ್ತೀಚೆಗೆ 24 ನಿಗಮ ಮಂಡಳಿಗಳು ಹಾಗೂ ಕೆಲ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರನ್ನು ನೇಮಕ ಮಾಡಿದೆ. ಆದರೆ ಇವರಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಪಕ್ಷಕ್ಕಾಗಿ ಹಗಲಿರುವಳು ದುಡಿಯುತ್ತಿರುವ ಅನೇಕ ಮುಖಂಡರುಗಳನ್ನು ಅಧಿಕಾರದಿಂದ ವಂಚಿಸಲಾಗಿದೆ. ಎಲ್ಲಾ ಪಕ್ಷಗಳು ದಲಿತರನ್ನು ಕೇವಲ ಮತಬ್ಯಾಂಕಾಗಿ ಪರಿಗಣಿಸಿವೆ. ಇಂದು ಖಂಡನೀಯ ಎಂದರು.

   ದಲಿತಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಎಂ.ರಾಮಯ್ಯ ಮಾತನಾಡಿ, ಒಳಮೀಸಲಾತಿ ವರ್ಗೀಕರಣಕ್ಕೆ ನಮ್ಮ ವಿರೋಧವಿಲ್ಲ, ನಮ್ಮೆಲ್ಲರ ಬೆಂಬಲವಿದೆ. ಹಲವು ವರ್ಷಗಳಿಂದ ಒಳಮೀಸಲಾತಿ ವರ್ಗೀಕರಣಕ್ಕೆ ಹೋರಾಟಗಳು ನಡೆಯುತ್ತಲೇ ಇವೆ. ಎಲ್ಲರಿಗೂ ಸಮಾನತೆ ಸಿಗಬೇಕು ಎಂಬುದು ಎಲ್ಲರ ಆಶಯ. ಇದಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ತಿಳಿಸಿದರು.

   ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರನ್ನು ಬದಲಾಯಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಿಂದ ದಲಿತರನ್ನು ರಾಜಕೀಯವಾಗಿ ತಿಳಿಯುವ ಹುನ್ನಾರಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಬಾರದು. ಕನಿಷ್ಠ 10 ವರ್ಷಗಳ ಅವಧಿವರೆಗಾದರೂ ಮುಂದುವರೆಸಬೇಕು, ಒಂದು ವೇಳೆ ಬದಲಾಯಿಸಿದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯಲದಬಾಗಿ ರಾಜಣ್ಣ, ಹಬ್ಬತ್ತನಹಳ್ಳಿ ಶ್ರೀನಿವಾಸ್, ನಿಂಗಕಟ್ಟೆ ಗಂಗಣ್ಣ, ನಾಗೇಶ್, ತಿಮ್ಮೇಗೌಡ, ರವೀಶ್ ಕುಂದರನಹಳ್ಳಿ, ಲಕ್ಷ್ಮಯ್ಯ, ಸುರೇಶ್, ಸಿದ್ಧರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link