ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರದ ಕುಮ್ಮಕ್ಕು ..!

ಗುಬ್ಬಿ

   ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಂದ 250 ಕೋಟಿ ರೂಗಳ ಲಂಚ ಪಡೆದ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ತಿದ್ದುಪಡಿ ತರಲು ಮುಂದಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆರೋಪ ಮಾಡಿದರು.

   ಪಟ್ಟಣದ ಎಪಿಎಂಸಿ ಆವರಣದಲ್ಲಿನ ರೈತಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೈತರಿಗಷ್ಟೇ ಜಮೀನು ಮಾರಾಟದ ಕಾನೂನು ಸಡಿಲಗೊಳಿಸಿ ಹಣವಂತರ ಬಳಿ ಇರುವ ಕಪ್ಪುಹಣವನ್ನು ಬಳಸಿಕೊಂಡು ಜಮೀನು ಖರೀದಿಗೆ ಅವಕಾಶ ಮಾಡಿಕೊಟ್ಟ ರಾಜಕಾರಣಿಗಳು ತಮ್ಮ ಬಳಿ ಇರುವ ಭ್ರಷ್ಟ ಹಣವನ್ನು ಜಮೀನು ಕೊಳ್ಳಲು ಬಳಸಲಿದ್ದಾರೆ. ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಕೊಡುವ ಜತೆಗೆ ತಮ್ಮ ಷೇರುದಾರ ವ್ಯವಹಾರಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

    ಶೇ.70 ರಷ್ಟಿರುವ ರೈತಾಪಿ ವರ್ಗದಲ್ಲಿ ಬಹುತೇಕ ಸಣ್ಣ ರೈತರು ಈ ಕಾಯಿದೆ ತಿದ್ದುಪಡಿಗೆ ಬಲಿಯಾಗಿ ತಮ್ಮ ಜಮೀನು ಮಾರಾಟ ಮಾಡಿಕೊಂಡು ಪರ್ಯಾಯ ಉದ್ಯೋಗ ತಿಳಿಯದೇ ಪರದಾಡುವಂತಾಗುತ್ತದೆ. ಜಮೀನು ಕೊಳ್ಳುವ ಬಂಡವಾಳಶಾಹಿಗಳು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತಾರೆ. ಕೃಷಿ ತೊರೆದು ರೈತ ನಿರುದ್ಯೋಗಿಯಾಗಿ ನಗರಕ್ಕೆ ವಲಸೆ ಹೋಗುತ್ತಾನೆ. ಆದರೆ ದೇಶದಲ್ಲಿ ಆಹಾರ ಕೊರತೆಗೆ ಸರ್ಕಾರವೇ ಹೊಣೆಯಾಗಲಿದೆ. ಇಡೀ ಕೃಷಿ ಚಟುವಟಿಕೆ ಸಿರಿವಂತರ ಕೈ ಸೇರಿ ಮನಬಂದಂತೆ ವರ್ತಿಸಿ ಮಾರುಕಟ್ಟೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಕೆಲಸಕ್ಕೆ ಎಪಿಎಂಸಿ ಕಾಯಿದೆ ಕೂಡಾ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ದೂರಿದರು.

    ರೈತ ಕುಟುಂಬಕ್ಕೆ ಮೊದಲು 56 ಎಕರೆ ಸೀಮಿತ ಪ್ರದೇಶ ಎನ್ನುವಂತಿದ್ದ ಕಾನೂನು ತಿದ್ದುಪಡಿ ಮಾಡಿ ನಾಲ್ವರ ಕುಟುಂಬಕ್ಕೆ 105 ಎಕರೆ, 5 ಕ್ಕಿಂತ ಅಧಿಕ ಕುಟುಂಬಕ್ಕೆ 216 ಎಕರೆ ಪ್ರದೇಶಕ್ಕೆ ಅನುವು ಮಾಡಿರುವ ಜತೆಗೆ ವಿದ್ಯುತ್ ಕಾಯಿದೆಯನ್ನೂ ತಿದ್ದುಪಡಿ ಮಾಡಿ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಿದ್ದಾರೆ. ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಎಲ್ಲವನ್ನೂ ಮೀಟರ್ ಅವಳಡಿಸಿ ಹಣ ವಸೂಲಿ ಮಾಡಲಿದ್ದಾರೆ ಎಂದ ಆರೋಪಿಸಿದ ಅವರು ಹಸಿರು ಶಾಲು ಧರಿಸಿ ಅಧಿಕಾರ ಪಡೆದ ಯಡಿಯೂರಪ್ಪ ಅವರ ವಿರುದ್ದ ಸಮರ ಸಾರಲು ರೈತಸಂಘ ಮುಂದಾಗಿದೆ. ಈ ಜತೆಗೆ 27 ಸಂಘಟನೆಗಳು ಇದೇ ತಿಂಗಳ 21 ರಂದು ಒಗ್ಗೂಡಿ ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪ್ರತಿಭಟನೆ ನಡೆಯಲಿದೆ ಎಂದರು.

   ಈ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯಭವನದಲ್ಲಿ ಪರ್ಯಾಯ ಅಧಿವೇಶನ ಮೂಲಕ ತಿದ್ದುಪಡಿ ಪ್ರಕ್ರಿಯೆ ಹಿಂಪಡೆಯಲು ಆಗ್ರಹಿಸಲಾಗುವುದು. ಈ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದ ರೈತ ನಾಯಕರು ಆಗಮಿಸಲಿದ್ದಾರೆ. ಜಿಲ್ಲೆಯಿಂದ ಒಂದು ಸಾವಿರ ಮಂದಿ ರೈತರು ಭಾಗವಹಿಸಲಿದ್ದು, ಗುಬ್ಬಿ ತಾಲ್ಲೂಕಿನಿಂದ 300 ಮಂದಿ ರೈತರು ಈ ಚಳವಳಿಗೆ ಸಾಥ್ ನೀಡಲಿದ್ದಾರೆ ಎಂದ ಅವರು ಇದೇ ತಿಂಗಳ 16 ರಂದು ತಿದ್ದುಪಡಿ ಒತ್ತಾಯಪತ್ರ ನೀಡದ ರಾಜ್ಯದ ವಿವಿಧ ಕ್ಷೇತ್ರದ ಶಾಸಕರ ಮನೆಗಳ ಮುಂದೆ ಧರಣಿ ನಡೆಸಿ ಒತ್ತಾಯಪತ್ರ ಪಡೆಯಲಾಗುವುದು. ಮುಂದಿನ ಅಕ್ಟೋಬರ್ ಮಾಹೆಯ ಮೊದಲ ವಾರದಲ್ಲಿ ತಾಲ್ಲೂಕಿನ ಸ್ಥಳೀಯ ಸಮಸ್ಯೆ ಬಗೆಹರಿಸುವಂತೆ ಗುಬ್ಬಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ, ಉಪಾಧ್ಯಕ್ಷ ಶಿವಕುಮಾರ್, ಮಂಜುನಾಥ್, ಕಾರ್ಯಾಧ್ಯಕ್ಷರಾದ ಗುರುಚನ್ನಬಸವಯ್ಯ, ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಬಸವರಾಜು, ರಮೇಶ್, ಜಗದೀಶ್, ಯತೀಶ್ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap