ತಿಪಟೂರು
ಕೆಲವು ತಿಂಗಳುಗಳ ಹಿಂದೆ ನಗರದ ಮೋರ್ ಸೂಪರ್ ಮಾರ್ಕೆಟ್ ಮುಂಭಾಗದ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಶವದ ಬಗ್ಗೆ ಶವವನ್ನು ಕಟ್ಟಲು ಬಳಸಿದ್ದ ಸಿಮೇಂಟ್ ಚೀಲದಿಂದಲೇ ಕೊಲೆಗಾರರ ಸುಳಿವು ನೀಡಿತು ಎಂದು ಪೋಲೀಸ್ ಅಧೀಕ್ಷಕ ಕೆ.ವಂಶಿಕೃಷ್ಣ ತಿಳಿಸಿದರು.
ಉಪವಿಭಾಗದ ಪೊಲೀಸ್ ಅಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು 04-05-2020ರಂದು ರಾತ್ರಿ ಸುಬ್ರಮಣಿ ಮತ್ತು ಹತ್ಯೆಗೊಳಗಾದ ಕುಮಾರ್ನೊಂದಿಗೆ ಮದ್ಯಪಾನ ಮಾಡಿ ಜೂಜಾಡಿದ್ದರು. ಈ ಸಂದರ್ಭದಲ್ಲಿ ಹತ್ಯೆಯಾದ ಕುಮಾರ್ (45) ಹಣವನ್ನು ಗೆದ್ದಿದ್ದನು. ಈ ವಿಚಾರದಲ್ಲಿ ಜಗಳ ಮಾಡಿಕೊಂಡು ಸುಬ್ರಮಣಿಯು ಕುಮಾರನನ್ನು ಸಾಯಿಸುವ ಉದ್ದೇಶದಿಂದ ಕೊಲೆಮಾಡಿ ಮೃತನ ಶವಕ್ಕೆ ಸಿಮೆಂಟ್ ಚೀಲ ಸುತ್ತಿ ಮೋರ್ ಮುಂಭಾಗದ ಚರಂಡಿಯಲ್ಲಿ ಸ್ವಲ್ಪದೂರ ಎಳೆದು ಹಾಕಿದ್ದನು. ದಿನಾಂಕ:15-05-2020ರಂದು ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ತಿಳಿಸಿದಾಗ ನೋಡಿದ ಸಂದರ್ಭದಲ್ಲಿ ಶವ ದೊರೆತಿತ್ತು.
ಇದರ ಬಗ್ಗೆ ವಿಚಾರಣೆ ಮಾಡುವ ಸಂದರ್ಭದಲ್ಲಿ ಶವಕ್ಕೆ ಸುತ್ತಿದ್ದ ಸಿಮೆಂಟ್ ಚೀಲ 43ಗ್ರೇಡ್ ನದ್ದಾಗಿದ್ದು ಇದನ್ನು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಾರೆ ಎಂದು ತಿಳಿದು ಬಂದಿದ್ದರಿಂದ ಸುತ್ತಮುತ್ತಲ ಕಟ್ಟಡಗಳನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ಹತ್ಯೆಗೊಳಗಾದವನನ್ನು ಕುಮಾರ್ ಬಿನ್ ಲೇಟ್ ಪುಟ್ಟಯ್ಯ (45) ಅರಸೀಕೆರೆ ತಾಲ್ಲೂಕಿನ, ಕಣಕಟ್ಟೆ ಹೋಬಳಿಯ ಅರಸೀಕರೆ ಹೊಳಲಕೆರೆ ಎಂದು ತಿಳಿದು ಬಂದಿತ್ತು.
ಈ ಪ್ರಕರಣದಲ್ಲಿ ತಿಪಟೂರು ಉಪವಿಭಾಗದ ಡಿ.ವೈ.ಎಸ್ಪಿ ಚಂದನ್ಕುಮಾರ್ ಸಮಯ ಪ್ರಜ್ಞೆಯಿಂದ ಮತ್ತು ಎಸ್ಪಿ. ವಂಶಿಕೃಷ್ಣ, ಹೆಚ್ಚುವರಿ ಎಸ್.ಪಿ ಉದೇಶ್ ಮಾರ್ಗದರ್ಶನದಿಂದ ತಿಪಟೂರು ನಗರದ ಹಿಂದಿನ ಸಿ.ಐ ಸಿ.ಪಿ.ನವೀನ್ ಪ್ರಸ್ತುತ ಸಿ.ಐ ಎಂ.ಬಿ.ಶಿವಕುಮಾರ್, ಅಪರಾದ ವಿಭಾಗದ ಪಿ.ಎಸ್.ಐ ರಾಜಪ್ಪ, ಎ.ಎಸ್.ಐ ರಾಮಣ್ಣ, ಸಿಬ್ಬಂದಿಗಳಾದ ಉಸ್ಮಾನ್ಸಾಬ್, ಮಹೇಶ್.ಎಸ್.ಕೆ, ಮಲ್ಲಿಕ್, ಮೋಹನ್ ಮುಂತಾದವರನ್ನು ಎಸ್.ಪಿ ಕೃಷ್ಣವಂಶಿ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ