ಬೆಂಗಳೂರು
ರಾಜ್ಯದ ಅಭಿವೃದ್ದಿಯನ್ನುಸಂಪೂರ್ಣವಾಗಿ ನಿರ್ಲಕ್ಷಿಸಿ ಕೊರೊನಾ,ಡ್ರಗ್ಸ್ ಹಾವಳಿಯಲ್ಲಿ ಮೈ ಮರೆತಿರುವ ಯಡಿಯೂರಪ್ಪ ಅವರೀಗ ಕೇವಲ ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿ ಎಂದು ಕೆಂಡ ಕಾರಿರುವ ಬಿಜೆಪಿಯ ಹಿರಿಯ ನಾಯಕ ಉಮೇಶ್ ಕತ್ತಿ:ನಾಡಿನ ಹಿತ ಮರೆತ ಬಿಜೆಪಿಯಿಂದ ಇನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು,ಕಳೆದ ಹಲ ಕಾಲದಿಂದ ಸರ್ಕಾರ ಸಂಪೂರ್ಣ ಸ್ಥಗಿತವಾಗಿದೆ.ಉತ್ತರ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಯ ಮುಖ ಕಾಣದೆ ತತ್ತರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೇಕಿದ್ದರೆ ದಾಖಲೆ ತೆಗೆದು ನೋಡಿ.ಒಂದು ವರ್ಷದ ಅವಧಿಯಲ್ಲಿ ಶಿವಮೊಗ್ಗದ ಅಭಿವೃದ್ಧಿಗೆ ನೀಡಿದಷ್ಟು ಹಣವನ್ನು ಯಡಿಯೂರಪ್ಪ ಯಾವ ಜಿಲ್ಲೆಗೆ ನೀಡಿದ್ದಾರೆ?ಎಂಬುದು ಗೊತ್ತಾಗುತ್ತದೆ.ಹೀಗೆ ತಮ್ಮ ಜಿಲ್ಲೆಯ ಹಿತ ಕಾಯಲು ಕುಳಿತವರು ರಾಜ್ಯದ ಸಿಎಂ ಹೇಗಾಗುತ್ತಾರೆ?ಎಂದು ಪ್ರಶ್ನಿಸಿದರು.
ಸರ್ಕಾರದಲ್ಲೀಗ ಶಾಸಕರ ಕ್ಷೇತ್ರಗಳ ಕೆಲಸವಾಗುತ್ತಿಲ್ಲ.ನಿರ್ದಿಷ್ಟ ವ್ಯಕ್ತಿಗಳ,ನಿರ್ದಿಷ್ಟ ಯೋಜನೆಗಳಿಗೆ ಸಂಬಂಧಿಸಿದವರ ಕೆಲಸಗಳಾಗುತ್ತಿವೆ.ಈ ಮುಂಚೆ ಬೆಂಗಳೂರಿಗೆ ನಾವು ಕ್ಷೇತ್ರದ ಕೆಲಸಗಳಾಗಲಿ ಎಂದು ಬರುತ್ತಿದ್ದೆವು.ಈಗ ನೆಪಕ್ಕೆ ಬಂದು ಕೂರಬೇಕಾಗಿದೆ. ಬಚಾವತ್ ಆಯೋಗದ ತೀರ್ಪು ಬಂದು ಹಲವು ವರ್ಷಗಳಾಗಿವೆ.ಆದರೆ ತೀರ್ಪಿನಡಿ ನಮಗೆ ಲಭ್ಯವಾಗಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಇಚ್ಚಾಶಕ್ತಿಯೇ ಸರ್ಕಾರಕ್ಕಿಲ್ಲ.ಹೀಗಿರುವಾಗ ಇಂತಹ ಸರ್ಕಾರ ನಮಗೆ ಬೇಕೇ?ಅನ್ನಿಸುತ್ತಿದೆ.
ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು ಏರಿಸಬೇಕು,ಕೃಷ್ಣಾ ನದಿಯಲ್ಲಿ ಲಭ್ಯವಿರುವ ನೂರಾರು ಟಿಸಿಎಂ ನೀರನ್ನು ಬಳಸಿಕೊಳ್ಳಬೇಕು.ಆ ಮೂಲಕ ನೀರಿಗಾಗಿ ಹಾಹಾಕಾರ ಮಾಡುತ್ತಿರುವ ಜಿಲ್ಲೆಗಳ ಹಿತ ಕಾಯಬೇಕು. ಲಭ್ಯವಿರುವ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ಸಲುವಾಗಿ ನೂರು ಟಿಎಂಸಿ ನೀರು ಕೊಡಬಹುದು.ಆದರೆ ಈ ಕಾರ್ಯವನ್ನು ಅನುಷ್ಟಾನಗೊಳಿಸುವ ಇಚ್ಚಾಶಕ್ತಿಯೇ ವ್ಯಕ್ತವಾಗುತ್ತಿಲ್ಲ.
ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಪೂರಕವಾಗಿ ಭೂಸ್ವಾಧೀನ ಕಾರ್ಯ ನಡೆಯಬೇಕು.ಇದು ಸೇರಿದಂತೆ ಯೋಜನೆಯ ಪರಿಣಾಮಕಾರಿ ಜಾರಿಗಾಗಿ ಎರಡು ಲಕ್ಷ ಕೋಟಿ ರೂಪಾಯಿ ಬೇಕು.ಆದರೆ ಆ ಕಡೆ ಗಮನ ಹರಿಸುವ ಮನಸ್ಸೇ ಸರ್ಕಾರಕ್ಕಿಲ್ಲ.ಮಾತೆತ್ತಿದರೆ ಕೊರೋನಾ,ಡ್ರಗ್ಸ್‍ಗಳಲ್ಲಿ ರಾಜ್ಯವನ್ನುಮುಳುಗಿಸಲಾಗುತ್ತಿದೆ.ಇದನ್ನು ಬಿಟ್ಟು ರಾಜ್ಯ ಸರ್ಕಾರಕ್ಕೆ ಬೇರೆ ಕೆಲಸವೇ ಇಲ್ಲ ಎಂಬಂತಾಗಿ ಹೋಗಿದೆ.ಇದನ್ನು ತುಂಬ ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನೇನೂ ಮಂತ್ರಿಗಿರಿಗಾಗಿ ಕಾಯುತ್ತಿಲ್ಲ.ನನಗೆ ಉತ್ತರ ಕರ್ನಾಟಕದ ಹಿತ ಮುಖ್ಯ.ಇವತ್ತು ಆ ಭಾಗದ ಜನ ಅಭಿವೃದ್ಧಿಯ ಮುಖ ಕಾಣದೆ ಪರದಾಡುತ್ತಿದ್ದಾರೆ.ಸಕ್ಕರೆ ಕಾರ್ಖಾನೆಗಳು ಮತ್ತಿತರ ಕೆಲ ಉದ್ಯಮಗಳನ್ನುಹೊರತು ಪಡಿಸಿ ಅವರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಬೇರೆ ಉದ್ಯಮಗಳನ್ನೇ ತರಲಾಗುತ್ತಿಲ್ಲ.ಕೈಗಾರಿಕೆಗಳ ಉದ್ದಾರ ಎಂಬುದು ಮರೀಚಿಕೆಯಾಗಿದೆ.ಹೀಗೆ ಬದುಕಿನ ಎಲ್ಲ ಅವಕಾಶಗಳಿಗೂ ದೂರವಾಗುತ್ತಾ ಉತ್ತರ ಕರ್ನಾಟಕದ ಜನ ಪರದಾಡುತ್ತಿದ್ದಾರೆ.ಸರ್ಕಾರ ಬಂದು ಒಂದು ವರ್ಷದ ಮೇಲಾಯಿತು.
ಆದರೆ ಈ ಅವಧಿಯಲ್ಲಿ ಯಡಿಯೂರಪ್ಪ ಅವರು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಯಾಗಿದ್ದಾರೆ.ಇದರಿಂದ ಹೊರಬಂದು ರಾಜ್ಯದ ಮುಖ್ಯಮಂತ್ರಿಯಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ.ಇಂತಹ ಎಲ್ಲ ವಿಷಯಗಳ ಬಗ್ಗೆ ಧ್ವನಿ ಎತ್ತೋಣ ಎಂದರೆ ಪಕ್ಷಕ್ಕೆ ವಿರುದ್ಧ ಎಂದು ಬಾಯಿ ಮುಚ್ಚಿಸಲಾಗುತ್ತದೆ.ಹಾಗಂತ ಎಷ್ಟು ದಿನ ಇದನ್ನೆಲ್ಲ ನೋಡಿಕೊಂಡು ಮೌನವಾಗಿರೋಣ?ಎಂದು ಉಮೇಶ್ ಕತ್ತಿ ಪ್ರಶ್ನಿಸಿದರು.ಹೀಗೆ ರಾಜ್ಯದ ಹಿತ ಮರೆತ ಬಿಜೆಪಿಯ ಸಹವಾಸವೇ ಬೇಡ,ಯಾವ ಕಾರಣಕ್ಕೂ ನಾನು ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿ ಎದುರಿಸುವುದಿಲ್ಲ.ಬದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ಎದುರಿಸುತ್ತೇನೆ ಎಂದು ಅವರು ಗುಡುಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ