ಬ್ಯಾಂಕ್ ಅಧ್ಯಕ್ಷ ಚುನಾವಣೆ ಬಳಿಕ ಶಿರಾ ಅಖಾಡಕ್ಕೆ : ಕೆ ಎನ್ ಆರ್

ತುಮಕೂರು:

    ಸೆ.19ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷಸ್ಥಾನದ ಚುನಾವಣೆ ಇದ್ದು, ಮುಗಿದ ಬಳಿಕ ಶಿರಾ ಉಪಚುನಾವಣೆ ಕಾರ್ಯತಂತ್ರದ ಅಖಾಡಕ್ಕೆ ಧುಮುಕುವುದಾಗಿ ಮಾಜಿ ಶಾಸಕ ಹಾಗೂ ಶಿರಾ ಉಪಚುನಾವಣೆ ಕಾಂಗ್ರೆಸ್ ಸಹ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

   ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಉಪಚುನಾವಣೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ವಿಷಯವಾಗಿ ಹಲವು ಚರ್ಚೆ ನಡೆಯಿತು. ವೈಯಕ್ತಿಕ ಅಭಿಪ್ರಾಯಗಳೇನೇ ಇರಲಿ ಟಿ.ಬಿ.ಜಯಚಂದ್ರ ಅವರ ಹೆಸರು ಶಿಫಾರಸ್ಸು ಮಾಡುವ ಪಕ್ಷದ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನ ಶ್ರಮ

   ಉಪಚುನಾವಣೆಗೆ ಡಾ.ಜಿ.ಪರಮೇಶ್ವರ್ ಹಾಗೂ ತಮ್ಮ ನೇತೃತ್ವದಲ್ಲಿ ರಚಿತವಾಗಿರುವ ಸಮಿತಿ ಶೀಘ್ರವೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ಸೇರಿ ಚುನಾವಣೆ ಗೆಲುವಿಗೆ ಕಾರ್ಯತಂತ್ರ ಎಣೆಯಲಾಗುವುದು. ಅಭ್ಯರ್ಥಿ ಯಾರೇ ಆಗಿರಲಿ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಲಾಗುವುದು. ಪಕ್ಷದ ನಾಯಕರಿಂದಾದ ದ್ರೋಹಗಳನ್ನು ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ನಾಯಕರು ಒಗ್ಗಟ್ಟಾಗಿ ಹೋಗಲು ತೀರ್ಮಾನಿಸಲಾಗಿದೆ ಎಂದರು.

ಜನಪರ ಕಲ್ಯಾಣ ಯೋಜನೆಗಳು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ

    ಸಾಮಾಜಿಕ ನ್ಯಾಯ, ಬಡವರ ಕಲ್ಯಾಣ, ಜನಕಲ್ಯಾಣ ಯೋಜನೆಗಳ ಜಾರಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವಿದ್ದು, ಧರ್ಮ, ಜಾತಿಯ ಆಧಾರದ ಮೇಲೆ ಮತ ಕೇಳಲು ಮುಂದಾಗುವ ಬಿಜೆಪಿಯಿಂದ ಯಾವ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ ರಾಜಣ್ಣ ಅವರು ಸಿದ್ದರಾಮಯ್ಯ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಕೋವಿಡ್‍ಗೂ ಮುಂಚೆ, ಕೋವಿಡ್ ಸಂದರ್ಭದಲ್ಲಿ ಬಡ ಜನರ ತುತ್ತಿನ ಚೀಲ ತುಂಬುತ್ತಿದೆ. ಇಂತಹ ಒಂದು ಸಮಗ್ರ ಜನ ಹಿತದ ಯೋಜನೆಯನ್ನು ಬಿಜೆಪಿ ಜಾರಿಗೆ ತಂದಿರುವ ಉದಾಹರಣೆ ತೋರಿಸಲಿ ಎಂದು ಸವಾಲೆಸಿದರು.

   ತ್ರಿಕೋನ ಸ್ಪರ್ಧೆ ಖಚಿತ: ಬಿಜೆಪಿಯವರು ಲೋಕಸಭೆ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಂದ ಮತಗಳಿಗೆ ಆಧಾರದಲ್ಲಿ ಉಪಚುನಾವಣೆ ಗೆದ್ದೇ ಗೆಲ್ಲುತ್ತೇವೆಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಲೋಕಸಭೆ ಚುನಾವಣೆಯ ಮಾನದಂಡವೇ ಬೇರೆ, ವಿಧಾನಸಭೆ ಚುನಾವಣೆಯ ಮಾನದಂಡವೇ ಬೇರೆ. ಶಿರಾ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರೇ ಆಯ್ಕೆಯಾಗಿ ಬಂದಿರುವವರು. ಸದ್ಯ ಆಡಳಿತ ಪಕ್ಷ ಬಿಜೆಪಿ ಶಿರಾ ಉಪಚುನಾವಣೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರುವುದರಿಂದ ತ್ರಿಕೋನ ಸ್ಪರ್ಧೆ ಖಚಿತ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link