ಹಾವೇರಿ
ಮೀನು ಕೃಷಿ ವಿಸ್ತರಣೆ, ಮೀನು ಮಾರುಕಟ್ಟೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (ಪಿ.ಎಂ.ಎಂ.ಎಸ್.ವೈ) ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿದ ಅವರು ಜಿಲ್ಲೆಯ ಪಟ್ಟಣ ಮತ್ತು ನಗರ ಕೇಂದ್ರಗಳಲ್ಲಿ ಪಿ.ಎಂ.ಎಂ.ಎಸ್.ವೈ. ಯೋಜನೆಯಡಿ ಮಾರುಕಟ್ಟೆ ನಿರ್ಮಾಣಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರಬರೆದು ಪ್ರಸ್ತಾವನೆ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳಲು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಈ ಯೋಜನೆಯಡಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವಕಾಶವಿರುವುದರಿಂದ ಜಿಲ್ಲೆಯಲ್ಲಿ ಮೊದಲ ವರ್ಷದ ಪ್ರಾಯೋಗಿಕವಾಗಿ ಕನಿಷ್ಠ 10 ಟನ್ ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು. ಹಾಗೂ ಮೀನು ಉತ್ಪಾದನಾ ಘಟಕಗಳು, ಅಲಂಕಾರಿಕ ಮೀನು ಉತ್ಪಾದನಾ ಘಟಕಗಳ ಸ್ಥಾಪನೆಗೆ ಉತ್ತೇಜನ ಹಾಗೂ ಅಲಂಕಾರಿಕ ಮೀನು ಪ್ರದರ್ಶನ ಮಳಿಗೆ ಸ್ಥಾಪನೆ, ಮೀನು ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೀನು ಖಾದ್ಯಗಳ ಮಾರಾಟ ಮಳಿಗೆಗಳನ್ನು ಸ್ಥಾಪಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಮತ್ಸ್ಯ ಕೃಷಿಯಲ್ಲಿ ಆಸಕ್ತಿಹೊಂದಿವರಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಉತ್ತಮ ಅವಕಾಶವಿದ್ದು, ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆ ಇದಾಗಿದೆ. ಫಲಾನುಭವಿಗಳ ಸಹಭಾಗಿತ್ವದಲ್ಲಿ ಕೇಂದ್ರದ ಆರ್ಥಿಕ ನೆರವಿನೊಂದಿಗೆ ಮೀನುಗಾರಿಕೆಗೆ ಉತ್ತೇಜನ ನೀಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು. ಹೆಚ್ಚು ಜನರನ್ನು ಮತ್ಸ್ಯ ಉದ್ಯದಕ್ಕೆ ಆಕರ್ಷಿಸಬೇಕು. ಈ ಯೋಜನೆಯಡಿ ಸರ್ಕಾರದ ನೆರವು ಆದಾಯದ ಹೆಚ್ಚಳದ ಕುರಿತಂತೆ ಮನವರಿಕೆ ಮಾಡಿಕೊಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳು, ಮೀನು ಸಾಗಾಣಿಕೆ ಕೆರೆಗಳ ವಿವರ ಹಾಗೂ ಮೀನು ಕೃಷಿ ಆದಾಯ ಕುರಿತಂತೆ ಮಾಹಿತಿ ಪಡೆದುಕೊಂಡು ಮೀನುಗಾರಿಕೆ ಚಟುವಟಿಕೆಗಳ ಹೆಚ್ಚಳಕ್ಕೆ ಕ್ರಮವಹಿಸುವಂತೆ ಸಲಹೆ ನೀಡಿದರು.ಜಿಲ್ಲಾ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಸಂತೋಷ ಕೊಪ್ಪದ ಅವರು ಸಭೆಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಐದು ವರ್ಷದ ಯೋಜನೆಯಾಗಿದೆ. ಮೀನು ಕೃಷಿ, ಅಲಂಕಾರಿಕ ಮೀನು ಕೃಷಿ, ಮೀನು ತಾಂತ್ರಿಕತೆ ಅಭಿವೃದ್ಧಿ, ಆಧುನಿಕ ಮೀನು ಶಿಥಿಲಿಕರಣ ಘಟಕ ಸ್ಥಾಪನೆ, ಮೀನು ಆಹಾರ ಘಟಕ ಸ್ಥಾಪನೆ, ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ವಿವಿಧ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸಾಮಾನ್ಯ ವರ್ಗ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕದ ವೆಚ್ಚ, ಸಹಾಯಧನ ಕುರಿತಂತೆ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ಇಲಾಖೆ ರೂಪಿಸಿರುವ 2020-21ನೇ ಸಾಲಿನ ಕ್ರಿಯಾಯೋಜನೆಯನ್ನು ಅನುಮೋದನೆಗೆ ಸಲ್ಲಿಸಿದರು. ಮತ್ಸ್ಯ ಸೇವಾ ಕೇಂದ್ರ ಸ್ಥಾಪನೆ, ಮೀನುಗಾರಿಕೆ ವಿಸ್ತರಣೆ ಹಾಗೂ ಪ್ರೋತ್ಸಾಹಧಾಯಕ ಸೇವೆಗಳು, ಮೀನುಗಾರರ ಸುರಕ್ಷೆ ಮತ್ತು ಭದ್ರತೆಯ ಯೋಜನೆಗಳು, ಮಾರುಕಟ್ಟೆ ಮತ್ತು ಮೂಲಭೂತ ಸೌಕರ್ಯಗಳು, ಮೀನು ಕೋಯ್ಲಿನ ಆಧುನಿಕ ತಂತ್ರಜ್ಞಾನ ಅಳವಡಿಕೆ, ಅಲಂಕಾರಿಕ ಮೀನುಗಳ ಘಟಕ ಸ್ಥಾಪನೆ, ಮೀನುಗಾರಿಕೆ ಬೆಳವಣಿಗೆಗ ಹೊಸ ಪಾಂಡ್ಸ್‍ಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಪಿ.ದಂಡೂರ, ವಿನಾಯಕ ಬೇವಿನಹಳ್ಳಿ, ಪ್ರಕಾಶ ಪಾವಡಿ, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪಿ.ಅಶೋಕ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ