ಟಿಕ್ ಟಾಕ್ ನಿಷೇಧ : ಈ ಕುರಿತಾಗಿ ಶೀಘ್ರ ನಿರ್ಧಾರ : ಟ್ರಂಪ್

ವಾಷಿಂಗ್ಟನ್‌:

    ‘ಅಮೆರಿಕನ್ನರ ದತ್ತಾಂಶ ಸುರಕ್ಷತೆಯೇ ನನ್ನ ಪ್ರಧಾನ ಆದ್ಯತೆಯಾಗಿದ್ದು, ಚೀನಾದ ಟಿಕ್‌ಟಾಕ್‌ ಆಯಪ್‌ನ ಭವಿಷ್ಯದ‌ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ಸೆಪ್ಟೆಂಬರ್‌ 15ರೊಳಗೆ ಟಿಕ್‌ಟಾಕ್‌ ಹಾಗೂ ವಿ ಚಾಟ್‌ ಆಯಪ್‌ಗಳನ್ನು ನಿಷೇಧಿಸುವ ಕಾರ್ಯಾದೇಶಕ್ಕೆ ಕಳೆದ ತಿಂಗಳು ಟ್ರಂಪ್‌ ಸಹಿ ಹಾಕಿದ್ದರು.

    ಶ್ವೇತಭವನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್‌ ‘ದೇಶದ ಭದ್ರತೆ ಹಾಗೂ ಸಾರ್ವಭೌಮತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಅತಿ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದೇವೆ. ಈ ವಿಷಯದಲ್ಲಿ ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿ ಕೆಲ ಪ್ರತಿಷ್ಠಿತ ಕಂಪನಿಗಳಿವೆ. ಅವು ಟಿಕ್‌ಟಾಕ್‌ನ ಮಾಲೀಕತ್ವ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ. ಅವುಗಳ ಹಿತಾಸಕ್ತಿಯನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕಿದೆ’ ಎಂದರು.ಚೀನಾದ ಬೈಟ್‌ಡಾನ್ಸ್‌ ಕಂಪನಿಯು ಟಿಕ್‌ಟಾಕ್‌ನ ಮಾಲೀಕತ್ವ ಹೊಂದಿದೆ.

   ಬೈಟ್‌ಡಾನ್ಸ್‌ ಜೊತೆ ನಿರಂತರ ಸಂಪರ್ಕದಲ್ಲಿರುವ ಅಮೆರಿಕದ ಮೈಕ್ರೊಸಾಫ್ಟ್‌, ಒರಾಕಲ್‌ ಮತ್ತು ವಾಲ್‌ಮಾರ್ಟ್‌ ಕಂಪನಿಗಳು ಟಿಕ್‌ ಟಾಕ್‌ನ ಒಡೆತನ ಪಡೆಯಲು ಪ್ರಯತ್ನಿಸುತ್ತಿವೆ.’ನಮ್ಮ ಆಂತರಿಕ ಭದ್ರತೆಗೆ ಅಪಾಯ ಎದುರಾಗುವಂತಹ ಯಾವ ನಿರ್ಧಾರವನ್ನೂ ನಾವು ತಳೆಯುವುದಿಲ್ಲ. ಟಿಕ್‌ಟಾಕ್‌ ಉತ್ತಮ ಕಂಪನಿ. ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿದೆ’ ಎಂದಿದ್ದಾರೆ.

   ಬೈಟ್‌ಡಾನ್ಸ್‌ ಕಂಪನಿಯು ಟಿಕ್‌ಟಾಕ್‌ ಬಳಕೆದಾರರ ದತ್ತಾಂಶವನ್ನು ಕದ್ದು ಅದನ್ನು ಬೀಜಿಂಗ್‌ಗೆ ರವಾನಿಸುತ್ತಿದೆ ಎಂದು ಅಮೆರಿಕದ ಗೂಗಲ್‌, ಆಯಪಲ್‌ ಸೇರಿದಂತೆ ಇತರ ಪ್ರತಿಷ್ಠಿತ ಕಂಪನಿಗಳು ದೂರಿದ್ದವು. ಈ ಆರೋಪವನ್ನು ಬೈಟ್‌ಡಾನ್ಸ್‌ ನಿರಾಕರಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link