ಕೊರಟಗೆರೆ
ಸಂಬಳವಿಲ್ಲದೆ ಸಾಮಾಜಿಕ ಮತ್ತು ಮಾನಸಿಕ ಭದ್ರತೆಯಿಲ್ಲದೆ, ದೈಹಿಕವಾಗಿ ಆರೋಗ್ಯ ಇಲಾಖೆಯ ಸಹಾಯಕರ ವೃಂದದವರಿಗೆ ಹತ್ತಾರು ಸಮಸ್ಯೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರಕಾರದ ವಿರುದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊರಟಗೆರೆ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿದೆ.
ಪಟ್ಟಣದ ಕಂದಾಯ ಇಲಾಖೆ ಆವರಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಆರೋಗ್ಯ ಇಲಾಖೆಯ ಸಹಾಯಕರ ವೃಂದದ ವತಿಯಿಂದ ವೇತನ ಮತ್ತು ಭದ್ರತೆ ಕಲ್ಪಿಸುವಂತೆ ಆಗ್ರಹಿಸಿ ಕೊರಟಗೆರೆ ಉಪತಹಸೀಲ್ದಾರ್ ಚಂದ್ರಯ್ಯ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊರಟಗೆರೆ ಘಟಕ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪ್ರಾಣವನ್ನು ಪಣಕ್ಕಿಟ್ಟು ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸುವ ಆರೋಗ್ಯ ಸಿಬ್ಬಂದಿಯ ವೇತನ ತಕ್ಷಣ ಬಿಡುಗಡೆ ಮಾಡಬೇಕು. ವಾರಕ್ಕೊಮ್ಮೆ ರಜೆ ನೀಡಬೇಕು. ಸರಕಾರ ತಕ್ಷಣ ಸ್ಪಂದಿಸಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅನುಕೂಲ ಕಲ್ಪಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ತೋವಿನಕೆರೆ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಶೋದಮ್ಮ ಮಾತನಾಡಿ,3 ತಿಂಗಳಿಂದ ಸಂಬಳವಿಲ್ಲದೆ ಕೊರೊನಾ ಸೈನಿಕರಾಗಿ 6 ತಿಂಗಳಿಂದ ರಜೆಯನ್ನು ಪಡೆಯದೆ ಅಭದ್ರತೆಯ ನಡುವೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ. ಜೀವನ ಸಾಗಿಸಲು ಸಂಬಳವಿಲ್ಲ. ಕೆಲಸ ಮಾಡಲು ನಮಗೆ ಭದ್ರತೆಯೆ ಇಲ್ಲದಾಗಿದೆ. ಸರಕಾರ ತಕ್ಷಣ ನಮ್ಮ ನೆರವಿಗೆ ಬರಬೇಕಾಗಿದೆ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆರೋಗ್ಯ ಇಲಾಖೆಯ ಗಂಗರತ್ನಮ್ಮ, ನಾಗರತ್ನಮ್ಮ, ಕಮಲಬಾಯಿ, ಪುಟ್ಟಮ್ಮ, ಉಷಾ, ವಾಣಿಶ್ರೀ, ಮಾಲಾಶ್ರೀ, ಶ್ರೀದೇವಿ, ಸಾವಿತ್ರಮ್ಮ, ಸೌಮ್ಯ, ಲಕ್ಷ್ಮಮ್ಮ, ಸುಧಾ, ಶೃತಿ, ಸಿದ್ದಗಂಗಮ್ಮ, ಮಂಜುಳ, ಯಶೋಧ, ಮಹಾಲಕ್ಷ್ಮಮ್ಮ, ಮೀನಾ, ವೀಣಾ, ಪವಿತ್ರ, ಕಮಲ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ