ಶಿರಾ
ಶಿರಾ ಭಾಗದಲ್ಲಿ ಕಳೆದ 20 ವರ್ಷಗಳಿಂದಲೂ ಮಳೆ-ಬೆಳೆ ಸರಿಯಾಗಿ ಆಗದೆ ರೈತರು ಅದರಲ್ಲೂ ಶೇಂಗಾ ಬೆಳೆಗಾರರು ಸಂಕಷ್ಟ ಅನುಭವಿಸಿದ್ದು, ಪ್ರಸಕ್ತ ವರ್ಷ ಉತ್ತಮ ಮಳೆ ಬಂದು ಶೇಂಗಾ ಬೆಳೆಯೂ ಚೆನ್ನಾಗಿದೆ. ಕೂಡಲೇ ರಾಜ್ಯ ಸರ್ಕಾರ ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸುವುದರ ಜೊತೆಗೆ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಶೇಂಗಾ ನಾಡು ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ತಿಮ್ಮರಾಜಗೌಡ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇಂಗಾ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಈ ಹಿಂದೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಸರ್ಕಾರಗಳು ಸ್ಪಂದಿಸಿಲ್ಲ. ಈಗಲೂ ಶಿರಾ ಎ.ಪಿ.ಎಂ.ಸಿ.ಯಲ್ಲಿ ಕನಿಷ್ಠ ವಿದ್ಯುತ್ ಚಾಲಿತ ಯಂತ್ರದ ತಕ್ಕಡಿಗಳನ್ನು ಬಳಸದೆ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಶಿರಾ ಭಾಗದಲ್ಲಿ ಈ ವರ್ಷ ಉತ್ತಮ ಶೇಂಗಾ ಬೆಳೆ ಲಭ್ಯವಾಗಲಿದ್ದು ಈಗಲೂ ದಲ್ಲಾಳಿಗಳ ಶೋಷಣೆ ನಿಂತಿಲ್ಲ. ನೇರವಾಗಿ ರೈತನ ಮನೆ ಬಾಗಿಲಿಗೆ ಹೋಗಿ ಶೇಂಗಾ ಕೊಳ್ಳುವ ಪರಿಪಾಠ ನಡೆಯುತ್ತಿಲ್ಲ. ಈ ಶೋಷಣೆ ಸಹಿಸಲು ಕೂಡ ಆಗುತ್ತಿಲ್ಲ. ಈಗ ಶಿರಾ ಉಪ ಚುನಾವಣೆ ನೆಪದಲ್ಲಿ ಸರ್ಕಾರದ ಧುರೀಣರೆಲ್ಲಾ ಆಗಮಿಸುತ್ತಿದ್ದು ಇವರಿಗೆ ಈ ಭಾಗದ ರೈತನ ಅದರಲ್ಲೂ ಶೇಂಗಾ ಬೆಳೆಗಾರರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಟೀಕಿಸಿದರು.
ಶಿರಾ ತಾಲ್ಲೂಕಿನಲ್ಲಿ ಈವರೆಗೆ ರೈತರು 37,510 ಹೆಕ್ಟೇರ್‍ಗಳಲ್ಲಿ ಶೇಂಗಾ ಬೆಳೆಯುತಿದ್ದು, ಈ ವರ್ಷ 38,350 ಹೆ.ಗಳಲ್ಲಿ ಬೆಳೆದಿದ್ದಾರೆ. ಈಗಲೂ ಶೇಂಗಾ ಬೆಳೆಯನ್ನು ಕ್ವಿಂಟಾಲ್‍ಗೆ 1800 ರಿಂದ 2,600 ರೂ.ಗಳಂತೆ ಕೊಂಡುಕೊಳ್ಳಲಾಗುತ್ತಿದೆ. ಶಿರಾ ಭಾಗಕ್ಕೆ ಬರುತ್ತಿರುವ ರಾಜ್ಯ ಸರ್ಕಾರದ ಧುರೀಣರು ಕೂಡಲೇ ಶೇಂಗಾ ಬೆಲೆಗೆ ಬೆಂಬಲ ಬೆಲೆ ಕೊಡಿಸಲು ಮುಂದಾಗಿ, ಕನಿಷ್ಠ 6,000 ರೂ.ಗಳ ಬೆಲೆಯನ್ನು ಕೊಡಿಸು ವಂತಾಗಬೇಕು.
ಉಪ ಚುನಾವಣೆ ನೆಪದಲ್ಲಿ ರೈತರ ಕಣ್ಣೀರೊರೆಸುವ ಕೆಲಸ ಮಾಡಬೇಡಿ ಎಂದರು. ಶಿರಾ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯೊಂದೇ ಪರಿಹಾರವಾಗಿದ್ದು, ಮದಲೂರು ನೆಪದಲ್ಲಿ ರಾಜಕಾರಣ ಮಾಡಬೇಡಿ. ಮೊದಲು ರಾಜ್ಯ ಸರ್ಕಾರ ಮದಲೂರು ಕೆರೆಗೆ ನೀರು ಹರಿಸಿ, ಶಿರಾ, ಕಳ್ಳಂಬೆಳ್ಳ ಎರಡೂ ಕೆರೆಗಳನ್ನು ತುಂಬಿಸಿ ಮತ ಯಾಚನೆ ಮಾಡಲಿ ಎಂದು ತಿಮ್ಮರಾಜಗೌಡ ಹೇಳಿದರು.ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಶಿವಲಿಂಗಯ್ಯ, ಬಾಲಕೃಷ್ಣ ಬರಗೂರು, ಎಂ.ಬಿ.ರಂಗಯ್ಯ, ಈರಣ್ಣ, ಮಾರುತಿ, ನಾಗರಾಜು, ಕೃಷ್ಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
