ಬಳ್ಳಾರಿ :
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಮದಗಲಟ್ಟಿ ಸಮೀಪದ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಸೇತುವೆ ಇಂದು ಏಕಾಏಕಿ ಕುಸಿದು ಬಿದ್ದಿದೆ.
ತುಂಗಭದ್ರಾ ನದಿಯು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಈ ನಡುವೆಯೇ ಬೆಳ್ಳಂಬೆಳಿಗ್ಗೆ ಬ್ರಿಡ್ಜ್ ಕುಸಿದುಬಿದ್ದಿದ್ದು, ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಲಾರಿ ಮತ್ತು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಹಡಗಲಿ ಮತ್ತು ಗದಗ ಮಾರ್ಗ ಸಂಪರ್ಕಿಸುವ ಈ ರಸ್ತೆಯನ್ನು 2002ರಲ್ಲಿ ನಿರ್ಮಿಸಲಾಗಿತ್ತು. ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ನವೀಕರಣದ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೇತುವೆ ಕುಸಿದ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ