ಮೈಸೂರು :

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾವೇರಿ (2) ರೋಹಿತ್ (3) ಸಂಜಯ್ (4) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಟಾವಿಗೆ ಮೈಸೂರಿಗೆ ಆಗಮಿಸಿದ್ದ ಕೂಲಿಕಾರರ ಕುಟುಂಬದ ಈ ಮೂವರು ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದಿದ್ದಾರೆ. ಕೆಲ ಹೊತ್ತಿನವರೆಗೂ ಯಾರೂ ಗಮನಿಸಿಲ್ಲ. ನಂತರ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದಾಗ, ಹೊಂಡದಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದ ಪಟೇಲ್ ವೆಂಕಟೇಶ್ ಎಂಬುವವರಿಗೆ ಸೇರಿದ ಕೃಷಿ ಹೊಂಡಕ್ಕೆ ಮಕ್ಕಳು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಮಕ್ಕಳ ದೇಹವನ್ನು ಬನ್ನೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








