ಕೊರೋನಾ ಸಂಕಷ್ಟದಲ್ಲೂ ಬನಶಂಕರಿ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

ಎರಡು ತಿಂಗಳಲ್ಲಿ ಹುಂಡಿಯಲ್ಲಿ 28.60 ಲಕ್ಷ ರೂ ಸಂಗ್ರಹ 

ಬೆಂಗಳೂರು

    ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲೂ ಬೆಂಗಳೂರಿನ ಪ್ರತಿಷ್ಠಿತ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ 28.60 ಲಕ್ಷ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

   ಕೋವಿಡ್ 19 ಲಾಕ್ ಡೌನ್ ಸಡಿಲಗೊಂಡ ನಂತರ ಅಂದರೆ ಕಳೆದ ಎರಡು ತಿಂಗಳಿಂದ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಸಂದರ್ಭದಲ್ಲಿ ಹಳೆ ನೋಟು 2.01 ಲಕ್ಷ ರೂ. ಸಹ ಸಂಗ್ರಹವಾಗಿರುವುದು ವಿಶೇಷವಾಗಿದೆ. ಒಂದು ಸಾವಿರ ರೂಪಾಯಿಯ ಎರಡು ಬಂಡೆಲ್ ಹಾಗೂ 500 ರೂ ನ ಎರಡು ನೋಟುಗಳನ್ನು ಯಾರೋ ಪುಣ್ಯಾತ್ಮರು ಹಾಕಿದ್ದಾರೆ.

   ಸುದ್ದಿಗಾರರ ಜತೆ ಮಾತನಾಡಿದ ಬನಶಂಕರಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಜತೆಗೆ ಹುಂಡಿ ತೆರೆದಾಗ ಹೆಚ್ಚಿನ ಪ್ರಮಾಣದಲ್ಲಿ ಹಣ ಸಂಗ್ರಹವಾಗಿರುವುದು ಅಚ್ಚರಿ ಮೂಡಿಸಿದೆ. ಹುಂಡಿಯಲ್ಲಿ ಗರಿಷ್ಠ 10 ರಿಂದ 15 ಲಕ್ಷ ರೂ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದೆವು. ಆದರೆ ನಮ್ಮ ನಿರೀಕ್ಷೆಗಿಂತ ಎರಡು ಪಟ್ಟು ಹಣ ಕ್ರೋಢೀಕರಣವಾಗಿದೆ ಎಂದು ಮಾಹಿತಿ ನೀಡಿದರು.

   ಅಕ್ಟೋಬರ್ 2 ಕ್ಕೆ ನಮ್ಮ ಮೂರು ವರ್ಷದ ಅಧಿಕಾರ ಮುಕ್ತಾಯವಾಗುತ್ತಿದ್ದು, ನಮ್ಮ ಅವಧಿಯಲ್ಲಿ ಹುಂಡಿಯಲ್ಲಿ 10.50 ಕೋಟಿ ರೂ, ಸೀರೆ ಹರಾಜಿನಿಂದ 1.67 ಕೋಟಿ ರೂ, ವಿಶೇಷ ಸೇವಾ ದರ್ಶನದಲ್ಲಿ 2.60 ಲಕ್ಷ ರೂ. ಸಂಗ್ರಹವಾಗಿದೆ ಎಂದರು.ದೇವಾಲಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, 70 ಮಂದಿ ದೇವಸ್ಥಾನದ ಸಿಬ್ಬಂದಿ, ಹೊರಗಡೆ ಹೂವು, ಹಣ್ಣು ಮಾರಾಟ ಮಾಡುವ 80 ಜನರಿಗೆ ಮಾಸ್ಕ್, ಫೇಸ್ ಶೀಲ್ಡ್, ಸ್ಯಾನಿಟೈಸರ್ಸ್ ಒಳಗೊಂಡ ಸುರಕ್ಷಿತ ಸಾಧನಗಳ ಹೆಲ್ತ್ ಕಿಟ್ ನೀಡಲಾಗುತ್ತಿದೆ ಎಂದು ಹೇಳಿದರು.

    ದೇವಸ್ಥಾನಕ್ಕೆ ಬರುವ ಭಕ್ರಾದಿಗಳ ಸುರಕ್ಷತೆಗೂ ಒತ್ತು ನೀಡಲಾಗಿದೆ. ದೇಹದ ತಾಪಮಾನ ಪರೀಕ್ಷಿಸಿದ ನಂತರವೇ ದೇವಸ್ಥಾನಕ್ಕೆ ಪ್ರವೇಶ ನೀಡಲಾಗುತ್ತಿದೆ. ಶುಕ್ರವಾರದಂದು ದೇವಸ್ಥಾನಕ್ಕೆ ಭಕ್ತರು ನೀಡಿರುವ ಸೀರೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯಲಿದೆ, ಜತೆಗೆ ವಿಶೇಷ ದರ್ಶನಕ್ಕೂ ಸಹ ವ್ಯವಸ್ತೆ ಮಾಡಲಾಗಿದೆ ಎಂದು ಟಿ. ವೆಂಕಟೇಶ್ ಮಾಹಿತಿ ನೀಡಿದರು.

     ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶುಚಿತ್ವಕ್ಕೆ ಒತ್ತು ನೀಡಲಾಗಿದ್ದು, ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ದಾಸೋಹ ಭವನ ನಿರ್ಮಿಸಿದ್ದು, ಉಚಿತವಾಗಿ ಪಾದರಕ್ಷೆ ಬಿಡಲು ಚಪ್ಪಲಿ ಸ್ಟ್ಯಾಂಡ್, ಜತೆಗೆ ಉಚಿತ ಪಾರ್ಕಿಂಗ್, ಉಚಿತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರುಣ್ ಕುಮಾರ್. ವಿಜಯಕುಮಾರ್, ಪ್ರೇಮಾ, ನಾಗಮ್ಮ, ದೊಡ್ಡಯ್ಯ, ರುದ್ರೇಗೌಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link