ಪ್ರಜೆಗಳ ಅಭಿಪ್ರಾಯ ಕೇಳದಿದ್ದರೆ ಪ್ರಜಾಪ್ರಭುತ್ವವೇಕೆ?

ತಿಪಟೂರು

    ಪ್ರಜಾಪ್ರಭುತ್ವವೆಂದರೆ ಪ್ರಜೆಗಳದ್ದೇ ಅಧಿಕಾರವೆಂದು ಅಬ್ರಾಹಾಂ ಲಿಂಕನ್ ಹೇಳಿದ್ದಾರೆ. ಆದರೆ ಈಗಿನ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಕಾಯಿದೆಗಳನ್ನು ಜಾರಿಗೆ ತರುತ್ತಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ ಎಂದು ಕೆ.ಎಸ್.ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

    ನಗರದ ರೈತ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಹಾಗೂ ಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್‍ಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಕರ್ನಾಟಕ ಸರ್ಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ಹಾಗೂ ಎಪಿಎಂಸಿ ಕಾಯ್ದೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020 ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆ 2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂದಾದ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು.

   ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈ ಬಿಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.ನಾಗರಿಕರು ಸ್ವಯಂ ಪ್ರೇರಣೆಯಿಂದ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಹಾಗೂ ವಹಿವಾಟುಗಳನ್ನು ಸ್ಥಗಿತಗೊಳಿಸಿ ಕರ್ನಾಟಕವನ್ನು ಸ್ವಯಂ ಪ್ರೇರಿತ ಬಂದ್ ಆಗಿ ಪರಿವರ್ತಿಸಿ ಪ್ರತಿರೋಧ ವ್ಯಕ್ತಪಡಿಸಬೇಕು ಎಂದವರು ಕರೆ ನೀಡಿದರು.

    ರೈತ ಸಂಘದ ಅಧ್ಯಕ್ಷ ಬಿಸಲೇಹಳ್ಳಿ ರಾಜಣ್ಣ ಮಾತನಾಡಿ, ಬೆಲೆ ಖಾತರಿ, ಕೃಷಿ ಸೇವೆಗಳ ಕುರಿತ ರೈತರ ಒಪ್ಪಂದ ಮಸೂದೆ 2020 ನಮ್ಮ ದೇಶದ ಹಾಗೂ ವಿದೇಶಗಳ ಕೃಷಿ ವ್ಯಾಪಾರಿ ಸಂಸ್ಥೆಗಳಿಗೆ, ರಫ್ತುದಾರರಿಗೆ, ಸಗಟು ವರ್ತಕರಿಗೆ, ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ ದೊಡ್ಡ ಬಂಡವಾಳದಾರರಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ರೈತರ ಕೃಷಿ ಉತ್ಪನ್ನಗಳಾದ ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ತರಕಾರಿ, ಹಣ್ಣುಗಳು, ಕಬ್ಬು, ಮಸಾಲೆ ಪದಾರ್ಥಗಳು, ಹತ್ತಿಬೀಜ, ಸೆಣಬು ಹಾಗೂ ಗೋಡಂಬಿ ಮುಂತಾದ ನಟ್ಸ್‍ಗಳು ಮತ್ತು ಹೈನುಗಾರಿಕೆ, ಪಶು ಆಹಾರ, ಹಾಲು ಉತ್ಪನ್ನಗಳು, ಕೋಳಿ, ಕುರಿ, ಹಂದಿ ಸಾಕಾಣಿಕೆ, ಮೀನುಗಾರಿಕೆಗಳ ವ್ಯಾಪಾರದಲ್ಲಿ ತೊಡಗಲು ಅವಕಾಶ ನೀಡುತ್ತದೆ. ಇದರಿಂದ ಸಣ್ಣಪುಟ್ಟ ರೈತರುಗಳ ಬೆನ್ನುಮೂಳೆಯನ್ನು ಮುರಿಯುತ್ತಿದೆ. ಆದ್ದರಿಂದ ಇಂತಹ ನೀತಿಗಳನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಹಸಿರು ಸೇನೆಯ ತಿಮ್ಮಲಾಪುರ ದೇವರಾಜು, ರೈತ ಮುಖಂಡರಾದ ಲೋಕೇಶ್, ಬೈರನಾಯಕನಹಳ್ಳಿ ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link