ಬೆಂಗಳೂರು
ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯತೆಗಳ ವಿರುದ್ಧ ನಿರಂತರ ಹೋರಾಟ ಮಾಡಬೇಕು. ಬಿಜೆಪಿ ವಿರುದ್ಧದ ಹೋರಾಟಗಳಿಗೆ ಕಾಂಗ್ರೆಸ್ ಬೆಂಬಲಿಸಬೇಕು. ಸರ್ಕಾರದ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವ ರಣದೀಪ್ ಸುರ್ಜೇವಾಲ ಸೂಚಿಸಿದ್ದಾರೆ.
ರಾಜ್ಯ ಉಸ್ತುವಾರಿಯಾಗಿ ನೇಮಕವಾದ ಬಳಿಕ ರಾಜ್ಯದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಕೆಪಿಸಿಸಿ ಸರ್ವಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಸರ್ಕಾರದ ಜನವಿರೋಧಿ ನೀತಿಗಳನ್ನು ಜನರ ಮುಂದಿಟ್ಟು ಪಕ್ಷ ಸಂಘಟನೆಗೆ ಸದಸ್ಯತ್ವ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದರು.ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅವಿನಾಭಾವ ಸಂಬಂಧವಿದೆ. ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ಪುಣ್ಯ ಭೂಮಿಯಿಂದ ಚುನಾವಣೆ ಗೆದ್ದಿದ್ದರು ಎಂದು ಸ್ಮರಿಸಿದರು.
ದೇಶದಲ್ಲಿ ಕೊರೊನ ಮಹಾಮಾರಿ ತಾಂಡವವಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ವೈದ್ಯಕೀಯ ಉಪಕರಣ ಹಗರಣ ನಡೆದಿದ್ದು, ಬಡವರಿಗೆ ತಲುಪಬೇಕಾದ ಹಣದಲ್ಲಿ ಲೂಟಿಯಾಗಿದೆ. ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಹೇಳಿದರು.
ಈ ರಾಜ್ಯದಲ್ಲಿ ಒಂದು ಜಿಎಸ್‍ಟಿ, ಇನ್ನೊಂದು ವಿಎಸ್‍ಟಿ ಎನ್ನುವ ಎರಡು ತೆರಿಗೆಗಳಿವೆ. ಯಡಿಯೂರಪ್ಪ ಮಕ್ಕಳು, ಮೊಮ್ಮಕ್ಕಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಇದರ ಬಗ್ಗೆ ನಾವು ಧ್ವನಿ ಎತ್ತಿ ನಿರಂತರವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಪವಿತ್ರವಾದ ಸಮಾರಂಭ. ಈ ವೇದಿಕೆಯಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರಿದ್ದಾರೆ. ಸುರ್ಜೇವಾಲ ನಮ್ಮ ಉಸ್ತುವಾರಿ ವಹಿಸಿಕೊಂಡಿದ್ದು, ಅವರ ಮಾರ್ಗದರ್ಶನದಲ್ಲಿ ಪಕ್ಷ ಮುಂದೆ ಹೋಗಲಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ಕೊಡಲಿದೆ. ಕೋವಿಡ್ ಸಂದರ್ಭದಲ್ಲಿಯೂ ಪಕ್ಷದ ಕಚೇರಿ ಮುಚ್ಚದೇ ಜನರ ಪರವಾಗಿದ್ದು, ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಿದರು. ಕೊರೋನ ಸಂದರ್ಭದಲ್ಲಿ ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಉತ್ತಮ ಕೆಲಸ ಮಾಡಿದ್ದರು. ಈ ಕೆಲಸವನ್ನು ಗಮನಿಸಿ ಸೋನಿಯಾ ಗಾಂಧಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನ ಸಂದರ್ಭದಲ್ಲಿ ಅನೇಕ ಸಮಿತಿಗಳನ್ನು ಪಕ್ಷದಿಂದ ರಚಿಸಿ ಆರೋಗ್ಯ ಹಸ್ತ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ದೇಶದಲ್ಲಿ ಮಾದರಿಯಾಗುವಂತೆ ಮಾಡಿದೆ ಎಂದರು.ಗ್ರಾಮ ಪಂಚಾಯತ್ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಈ ಹಿಂದೆ ಚುನಾವಣೆಯಲ್ಲಿ ಗೆದ್ದವರು, ಸೋತವರು ಹೇಗೆಲ್ಲಾ ಕೆಲಸ ಮಾಡುತ್ತಿದ್ದಾರೆಂದು ಗಮನಿಸುತ್ತಿದ್ದೇವೆ. ಎಲ್ಲರಿಗೂ ಸದಸ್ಯತ್ವ ನೋಂದಣಿ ಮಾಡಿಸಬೇಕು. ಬೂತ್ ಮಟ್ಟದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಯಾರೇ ಆಗಿರಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ಹೊಂದಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮೇಲೆ ನಂಬಿಕೆ ಇಟ್ಟು ಅದರ ಆಧಾರದ ಮೇಲೆ ಕೆಲಸ ಮಾಡುವುದಾಗಿ ಹೇಳಿದರು.
ಸೋನಿಯಾ ಗಾಂಧಿ ಎಐಸಿಸಿಗೆ ಹೊಸದಾಗಿ ರಚಿಸಿರುವ ಸಮಿತಿಯಲ್ಲಿ ನಮ್ಮ ರಾಜ್ಯದಿಂದ ಹಲವಾರು ನಾಯಕರಿಗೆ ಅವಕಾಶ ಸಿಕ್ಕಿದೆ. ತಾವು ಏನಾದರೂ ತಪ್ಪು ಮಾಡಿದರೆ ಸೂಕ್ಷ್ಮವಾಗಿ ಅದನ್ನು ಹೇಳಿದರೆ ಖಂಡಿತ ತಿಳಿದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಬಂದ್ ಕುರಿತು ನಮ್ಮ ನಾಯಕರ ಜೊತೆಗೆ ಚರ್ಚೆ ಮಾಡಿದ್ದು, ಬಂದ್‍ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಇದೆ. ಈ ಬಗ್ಗೆ
ಸಿದ್ದರಾಮಯ್ಯ, ಸುರ್ಜೇವಾಲಾ ಹೈಕಮಾಂಡ್ ಸೇರಿ ತೀರ್ಮಾನ ಮಾಡಿದ್ದೇವೆ. ಶಾಂತಿಯುತವಾಗಿ ನಾಳೆ ಬಂದ್‍ನಲ್ಲಿ ಭಾಗವಹಿಸಲು ನಿರ್ಧಾರ ಮಾಡಿದ್ದೇವೆ ಎಂದರು.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಮಗನ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. 17 ಕೋಟಿ ಲಂಚ ಪಡೆದಿದ್ದಾರೆನ್ನುವ ಆರೋಪವಿದ್ದು, ವಿಜಯೇಂದ್ರ ಆರ್.ಟಿ.ಜಿ.ಎಸ್. ಮೂಲಕ ಹಣ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ಸಿಗುತ್ತಿದೆ. ಬಿಜೆಪಿ ಸರ್ಕಾರ ಜನಪರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜನರಿಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ಮಕ್ಕಳು, ಮೊಮ್ಮಕ್ಕಳು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದನ್ನು ಸದನದಲ್ಲಿ ನೇರವಾಗಿ ಯಡಿಯೂರಪ್ಪ ಎದುರೇ ಪ್ರಸ್ತಾಪಿಸಿದ್ದೇನೆ. ಕೊರೋನಾ ಬಂದಿರುವ ಸಮಯದಲ್ಲಿ ಜನರ ಲೂಟಿ ಮಾಡಿದ್ದಾರೆ. ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ, ಭ್ರಷ್ಟಾಚಾರ ನಡೆದಿದೆ. ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನವೀನ್ ಎಂಬ ಯುವಕನಿಂದ ಆದ ತಪ್ಪಿಗೆ ಅವನ ವಿರುದ್ದ ಸೂಕ್ತ ಕ್ರಮ ಕೈಗೊಂಡಿದ್ದರೆ ಗಲಭೆ ನಡೆಯುತ್ತಿರಲಿಲ್ಲ. ಗಲಭೆ ನಿಯಂತ್ರಣ ಮಾಡುವಲ್ಲಿ ಪೊಲಿಸರು ಸೋತಿದ್ದಾರೆ. ಗಲಭೆ ವಿಚಾರ ಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತಿದೆ. ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳುವ ಧೈರ್ಯ ನಪುಂಸಕ ಬಿಜೆಪಿ ನಾಯಕರಿಗಿಲ್ಲ. 15 ನೇ ಆರ್ಥಿಕ ಆಯೋಗದ ಶಿಫಾರಸ್ಸು ಮಾಡಿರುವ ಅನುದಾನವನ್ನು ಪಡೆಯಲು ಆಗಿಲ್ಲ. ಜಿಎಸ್‍ಟಿ ನಷ್ಟ ತುಂಬಲು ಕರ್ನಾಟಕಕ್ಕೆ 4900 ಕೋಟಿ ವಿಶೇಷ ಅನುದಾನ ಕೊಡಲು 15ನೇ ಆರ್ಥಿಕ ಆಯೋಗ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸು ಮಾಡಿರುವ ಹಣವನ್ನೇ ರಾಜ್ಯ ಬಿಜೆಪಿ ಸರ್ಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲದಕ್ಕೆ ಇವರಿಗೆ ನಾಚಿಕೆ ಆಗಬೇಕು. ಕೇಂದ್ರದ ಬಳಿ ಹೋಗಿ ಕೇಳಲು ಇವರಿಗೆ ಬಾಯಿ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸಾಲ 4 ಲಕ್ಷ ಕೋಟಿ ರೂ. ದಾಟಿದ್ದು, ವರ್ಷಕ್ಕೆ 23 ಸಾವಿರ ಕೋಟಿ ಹಣ ಬಡ್ಡಿ ಕಟ್ಟುತ್ತಿದ್ದೇವೆ. ಹೀಗಾದಾಗ ಅಭಿವೃದ್ದಿ ಕಾರ್ಯಗಳು ಹೇಗೆ ನಡೆಯಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾವೆಲ್ಲರೂ ಒಗ್ಗೂಡಿ ಪಕ್ಷ ಮುನ್ನಡೆಸಬೇಕಿದೆ. ಹಾಗಾದಾಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ. ಪ್ರಸ್ತುತ ಸರ್ಕಾರ ಅಸಮರ್ಪಕ ಕಾಯ್ದೆಗಳನ್ನು ತಂದಿದೆ. ಎಪಿಎಂಸಿ, ಕಾರ್ಮಿಕ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತಂದಿದೆ. ಕಾರ್ಮಿಕರ ಕಾಯ್ದೆ ಕಂಪನಿಗಳ ಪರವಾಗಿದೆ. ಕಾರ್ಮಿಕರನ್ನು ಕಡೆಗಣಿಸಿ ಕಂಪನಿ ಪರವಾಗಿ ಕಾಯಿದೆ ತಂದಿದೆ. ಈ ಎಲ್ಲದರ ವಿರುದ್ಧ ಹೋರಾಟ ಅನಿವಾರ್ಯವಾಗಬೇಕಿದೆ. ರೈತರ ಜೊತೆ ಕಾರ್ಮಿಕರ ಬಗ್ಗೆಯೂ ನಾವು ಧ್ವನಿಯೆತ್ತಬೇಕು. ಸಣ್ಣ ರೈತರ ಪರವಾಗಿ ನಾವಿರಬೇಕು. ಆದರೆ ಇವರ ವಿರುದ್ಧವಾಗಿಯೇ ಸರ್ಕಾರ ಕಾಯ್ದೆಗಳನ್ನು ತಂದಿದೆ. ಮೊದಲು ಕಾರ್ಮಿಕರು 8 ಗಂಟೆ ಕೆಲಸ ಮಾಡಬೇಕಿತ್ತು. ಆದರೆ ಈಗ 12 ಗಂಟೆ ಕೆಲಸದ ಅವಧಿಯಾಗಿದೆ. ಮಾಲಿಕರ ಪರವಾಗಿ ಕಾಯ್ದೆಗಳನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲೆ ವಿಶ್ವಾಸವಿದೆ ಎಂದು ಹೇಳುವ ಬಿಜೆಪಿಯವರು ಈಗ ರೈತ ವಿರೋಧಿ ಕಾಯ್ದೆಯನ್ನು ತಂದಿದ್ದಾರೆ. ಹೀಗೆ ಮುಂದುವರೆದಲ್ಲಿ ಶಿವಮೊಗ್ಗದ ಹೋರಾಟ ಮರುಕಳಿಸುತ್ತದೆ ಎಂದು ಕಾಗೋಡು ಸತ್ಯಾಗ್ರಹವನ್ನು ಖರ್ಗೆ ಪ್ರಸ್ತಾಪಿಸಿದರು.ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಹಿಂದಿನಿಂದಲೂ ರೈತರ ಪರವೇ ಕಾಂಗ್ರೆಸ್ ನಿಂತಿದೆಯೇ ಹೊರತು ಬಿಜೆಪಿಯಾಗಲೀ ಯಡಿಯೂರಪ್ಪ ಆಗಲಿ ನಿಂತಿಲ್ಲ. ಅವರು ರೈತರ ವಿರೋಧಿಗಳೇ ಹೊರತು ಪರವಲ್ಲ. ಎಪಿಎಂಸಿ, ಭೂ ಸುಧಾರಣ ಕಾಯ್ದೆ ತಿದ್ದುಪಡಿ ವಿರುದ್ಧದ ಶಾಂತಿಯುತ ಬಂದ್‍ಗೆ ಸಂಪೂರ್ಣ ಬೆಂಬಲವಿದೆ ಎಂದರು.
ಸಭೆಯಲ್ಲಿ ನಾಯಕರಾದ ಮುನಿಯಪ್ಪ, ಡಿ.ಕೆ.ಸುರೇಶ್, ಹೆಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಸೇರಿದಂತೆ ಹಿರಿಯ ನಾಯಕರು, ಪಕ್ಷದ ಹಾಲಿ, ಮಾಜಿ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಲೋಕಸಭೆ, ವಿಧಾನಸಭೆ ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕಗಳ ಮುಖಂಡರು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ