ಚಿತ್ರದುರ್ಗ :
ಎರಡು ವರ್ಷದ ಮಗುವಿಗೆ ಭೂತ ಮೆಟ್ಟಿಕೊಂಡಿದೆ, ಬಿಡಿಸುತ್ತೇನೆ ಎಂದು ಮಂತ್ರವಾದಿಯೊಬ್ಬ 2 ವರ್ಷದ ಕಂದಮ್ಮಳನ್ನೇ ಬಲಿ ಪಡೆದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರವೀಣ್ ಹಾಗೂ ಬೇಬಿ ದಂಪತಿಗಳ ಎರಡು ವರ್ಷದ ಪುತ್ರಿ ಪೂರ್ಣಿಕಾ(2) ಮೃತ ಬಾಲಕಿ.
ಪೂರ್ಣಿಕಾ ಆಗಾಗ ಬೆಚ್ಚಿ ಬೀಳುತ್ತಿದ್ದಳಂತೆ. ಹಾಗಾಗಿ ಆಕೆಯನ್ನು ಸ್ಥಳೀಯ ಮಂತ್ರವಾದಿ ರಾಕೇಶ್ ಎಂಬಾತನ ಬಳಿ ಕರೆದುಕೊಂಡು ಹೋಗಿದ್ದಾರೆ. ಮಂತ್ರವಾದಿ ರಾಕೇಶ್, ಮಗುಗೆ ದೆವ್ವ ಹಿಡಿದಿದೆ ಅದನ್ನು ಬಿಡಿಸಬೇಕು ಎಂದು ಹೇಳಿ ಮಗುವನ್ನು ಬೆತ್ತದಿಂದ ಬಾರಿಸಿದ್ದಾನೆ.
ಬೆತ್ತದ ಏಟಿಗೆ ಮಗು ಪೂರ್ಣಿಕಾ ಮೈ ತುಂಬಾ ಗಾಯವಾಗಿದ್ದು, ಬಾಸುಂಡೆ ಬಂದಿದೆ. ನೋವು ತಾಳಲಾರದೇ ಮಗು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲೇ ಮಗು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮೂಲಕ ದೆವ್ವ ಬಿಡಿಸುತ್ತೇನೆ ಎಂಬುದಾಗಿ ಹೇಳಿ, ಪೂಜಾರಿ ಬೆತ್ತದಿಂದ ಹೊಡೆದು ತಮ್ಮ ಮಗಳನ್ನು ಕೊಲೆಗೈದಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ಇನ್ನು ಮಗು ಸಾವನ್ನಪ್ಪುತ್ತಿದ್ದಂತೆಯೇ ಪರಾರಿಯಾಗಿದ್ದ ಮಂತ್ರವಾದಿ ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ