ತಿಪಟೂರು
ಕೊರೋನಾ ಲಾಕ್ಡೌನ್ ನಂತರ ಬಂದ್ ಆಗಿದ್ದ ಪ್ರತಿಭಟನೆ ಮತ್ತು ಬಂದ್ಗಳ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಎ.ಪಿ.ಎಂ.ಸಿ, ಭೂ ಸುಧಾರಣಾ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮುಂತಾದ ರೈತ ವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ನೀತಿಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ರೈತಪರ, ದಲಿತಪರ, ಕಾರ್ಮಿಕಪರ, ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು.ನ ಚನ್ನಬಸವಣ್ಣ, ಎಲ್ಲಾ ರಾಜಕಾರಣಿಗಳು ಒಂದೇ ಬೇರನ್ನು ಹೊಂದಿದ್ದಾರೆ. ಅದರಲ್ಲಿ ಇಲ್ಲಿನ ಶಾಸಕರು ಮುಂಚೂಣಿಯಲ್ಲಿದ್ದಾರೆ. ನಾನು ನಿಮ್ಮ ಕೆರೆಗಳಿಗೆ ನೀರು ಬಿಡುತ್ತೇನೆಂದು ಹೇಳಿ ಮತವನ್ನು ಹಾಕಿಸಿಕೊಂಡಿದ್ದಾರೆಯೇ ವಿನಹ ಯಾವುದೇ ಕೆರೆಗಳನ್ನು ತುಂಬಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇವರಿಗೆ ಗೆಲ್ಲುವವರೆಗೆ ಮಾತ್ರ ರೈತರ, ಕಾರ್ಮಿಕರ ಮತಗಳು ಬೇಕು. ಆದರೆ ಗೆದ್ದ ನಂತರ ನಾವ್ಯಾರೋ ಅವರ್ಯಾರೋ ಎಂದು ರಾಜಕೀಯ ಮುಖಂಡರನ್ನು ಟೀಕಿಸಿದರು.
ರೈತರಿಲ್ಲದೆ ನಾವೆಲ್ಲಿ ಎಂದ ವರ್ತಕರು..! :
ರೈತರು ದೇಶದ ಬೆನ್ನೆಲುಬು ಎಂಬುದನ್ನು ತಿಪಟೂರಿನ ವರ್ತಕರು ಚೆನ್ನಾಗಿ ಅರಿತಿದ್ದಾರೆಂಬುದು ಇಂದಿನ ಬಂದ್ ನೋಡಿ ಎಲ್ಲರಿಗೂ ತಿಳಿಯುತ್ತದೆ. ರೈತರು ಇಲ್ಲದೇ ಯಾವುದೇ ವ್ಯಾಪಾರವಿಲ್ಲ ಎಂದು ತಿಳಿದು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿಟ್ಟು, ಬಂದ್ಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದರು. ಇವರ ಜೊತೆಗೆ ಹೋಟೆಲ್, ಬೀದಿಬದಿ ವ್ಯಾಪಾರಿಗಳು, ಆಟೋಗಳು, ಟ್ಯಾಕ್ಸಿಗಳು ಬಂದ್ಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ಛಲವಾದಿ ಮಹಾಸಭಾದ ಅಧ್ಯಕ್ಷ ಬಜಗೂರು ಮಂಜುನಾಥ್, ಜೆ.ಡಿ.ಎಸ್ ಮುಖಂಡ ಶಿವಸ್ವಾಮಿ, ದಲಿತ ಮುಖಂಡ ಕುಂದೂರು ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಹಸಿರು ಸೇನೆಯ ಅಧ್ಯಕ್ಷ ತಿಮ್ಲಾಪುರ ದೇವರಾಜು, ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ್ ಕುಮಾರ್ ಮತ್ತು ಅತಿಥಿ ಉಪನ್ಯಾಸಕ ಸಂಘದ ಡಾ.ವೆಂಕಟೇಶ್ ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು. ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.ಎಲ್ಲಾ ಸಂಘಟನೆಗಳು ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ