ಜವಳಿ ಪಾರ್ಕ್‍ನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಕೆ : ಮಹಂತೇಶ ಬೀಳಗಿ

ದಾವಣಗೆರೆ

     ದಾವಣಗೆರೆ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‍ನ್ನು ಉದ್ದೇಶಿತ ಕಾರ್ಯಕ್ಕಾಗಿ ಬಳಸುವ ಸಂಬಂಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದದ 94ನೇ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ದಾವಣಗೆರೆ ರೆಡಿಮೇಡ್ ಗಾರ್ಮೆಂಟ್ಸ್ ಅಸೋಸಿಯೇಷನ್‍ನ ಮಂಜುನಾಥ್ ಮಾತನಾಡಿ, ಪ್ರಸ್ತುತ ಟೆಕ್ಸ್‍ಟೈಲ್ಸ್ ಕೈಗಾರಿಕೆ ಘಟಕಗಳಿಗೆ ಹಂಚಿಕೆಯಾಗಿರುವ ಕರೂರು ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‍ಟೈಲ್ಸ್ ಘಟಕಗಳೊಂದಿಗೆ ಇತರೆ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಕೈಗೊಳ್ಳಲು ಸಹ ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಈಗಾಗಲೇ 55 ಜನರು ಮನವಿ ಸಲ್ಲಿಸಿದ್ದೇವೆ ಎಂದು ಡಿಸಿ ಯವರಿಗೆ ಮನವಿ ಮಾಡಿದರು.

    ದಾವಣಗೆರೆ ಟಕ್ಸ್‍ಟೈಲ್ಸ್ ಪಾರ್ಕ್ ಪ್ರೈ.ಲಿ ಮತ್ತು ದಾವಣಗೆರೆ ಗಾರ್ಮೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ಸ್‍ನ ಸದಸ್ಯರಾದ ಶೇಷಾಚಲ ಮಾತನಾಡಿ, ರಾಜ್ಯದಲ್ಲಿ ಕೇವಲ ಮೂರು ಜವಳಿ ಪಾರ್ಕ್‍ಗಳಿದ್ದು ಅದರಲ್ಲಿ ದಾವಣಗೆರೆ ಒಂದಾಗಿದೆ. ಈಗಾಗಲೇ ನೂತನ ಜವಳಿ ನೀತಿಯಡಿ 39 ಜನರ ಸಹಾಯ ಧನ ಪಡೆದಿದ್ದು ಇಲ್ಲಿ ಬೇರೆ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಕೊಡದೇ ಕೇವಲ ಜವಳಿಗೆ ಮಾತ್ರ ಅವಕಾಶ ನೀಡಬೇಕೆಂದರು.

    ಸದಸ್ಯ ಹಾಲೇಶ್ ಗೌಡ್ರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಜವಳಿ ಕೈಗಾರಿಕೆಯೇ ಆದ್ಯತಾ ವಲಯವಾಗಿದೆ. ಹಾಗೂ ಸಬ್ಸಿಡಿ, ಉಚಿತ ವಿದ್ಯುತ್ ಇತರೆ ಸೌಲಭ್ಯ ಪಡೆದುಕೊಂಡಿದ್ದೇವೆ. ಇತರೆ ಕೈಗಾರಿಕೆಗಳಿಗೆ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳಬಹುದು. ಜವಳಿ ಪಾರ್ಕ್‍ಗೆಂದೇ ಮೀಸಲಾದ ಪ್ರದೇಶದಲ್ಲಿ ಜವಳಿ ಕೈಗಾರಿಕಾ ಚಟುವಟಿಕೆಗಳನ್ನು ಮಾತ್ರ ಮುಂದುವರೆಸಲು ಅವಕಾಶ ನೀಡಬೇಕೆಂದು ಒತ್ತ್ತಾಯಿಸಿದರು.

    ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕ ಸುರೇಶ್ ಎನ್ ತಡಕನಹಳ್ಳಿ ಮಾತನಾಡಿ, ಕರೂರು ಕೈಗಾರಿಕಾ ಪ್ರದೇಶದಲ್ಲಿ 2006 ರಲ್ಲಿ 59 ಎಕರೆ ಜಮೀನನ್ನು ಜವಳಿ ಪಾರ್ಕ್‍ಗೆಂದು ನೀಡಲಾಗಿದ್ದು, 44 ಜವಳಿ ಘಟಕಗಳನ್ನು ಸ್ಥಾಪಿಸಲಾಗಿದೆ. ನೂತನ ಜವಳಿ ನೀತಿಯಡಿ 39 ಜನರಿಗೆ ಸಹಾಯಧನ ನೀಡಿದ್ದೇವೆ. 192 ವಿದ್ಯುತ್ ಮಗ್ಗ ನೀಡಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕೆಲಸ ಆರಂಭಿಸಲಾಗಿಲ್ಲ. ಮುಂದೆ ಚೇತರಿಕೆ ಕಂಡು ಬರಲಿದೆ. ಈ ಪ್ರದೇಶದಲ್ಲಿ ಇತರೆ ಚಟುವಟಿಕೆಗಿಂತ ಇದೊಂದು ಜವಳಿ ಹಬ್ ಆದರೆ ಉತ್ತಮ ಎಂದರು.

     ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಮಾತನಾಡಿ, ಈ ಪ್ರದೇಶವನ್ನು ಜವಳಿ ಪಾರ್ಕ್ ಸ್ಥಾಪಿಸಿ, ನಡೆಸುವ ಉದ್ದೇಶದಿಂದ ನೀಡಲಾಗಿದ್ದು, ಇದೇ ಉದ್ದೇಶಕ್ಕೆ ಬಳಕೆಯಾಗಬೇಕೆಂದರು.ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಎರಡೂ ಕಡೆಯ ನಿಲುವುಗಳನ್ನು ಆಲಿಸಿದ್ದೇನೆ. ಜವಳಿ ಪಾರ್ಕ್‍ಗೆ ಸಂಬಂಧಿಸಿದಂತೆ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

    ಶ್ರೀ ಮರುಳಸಿದ್ದೇಶ್ವರ ಸಂಸ್ಥೆ ಎಸ್‍ಸಿ/ಎಸ್‍ಟಿ ಕೈಗಾರಿಕಾ ಉದ್ಯಮಿಗಳ ಸಂಘದ ಕಾರ್ಯನಿರ್ವಾಹನ ನಿರ್ದೇಶಕ ಬಾಲಾಜಿ.ಎಸ್.ಎನ್ ಮಾತನಾಡಿ, ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಹಾರ ತಯಾರಿಕಾ ಘಟಕ ಸ್ಥಾಪಿಸಲು ಈಗಾಗಲೇ 21 ಜನರು ಮೈಸೂರಿನಲ್ಲಿ ತರಬೇತಿ ಹೊಂದಿದ್ದು, 50 ಜನರಿಗೆ ಇಲ್ಲಿ ಒಟ್ಟು 50 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿದರು.

    ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಕುರಿತು ಮುಂದಿನ ಸಮಿತಿ ಸಭೆಯಲ್ಲಿ ಕ್ರಮ ವಹಿಸಲಾಗುವುದು ಎಂದರು. ಹಾಗೂ ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಅರ್ಜಿಗಳನ್ನು ನಿಯಮಾನುಸಾರ ಹಂಚಿಕೆ ಮಾಡಲು ಅನುಮೋದನೆ ನೀಡಿದರು.

    ಯೋಜನಾ ಅನುಮೋದನೆಗಾಗಿ ಬಂದ ಹೊಸ ಕೈಗಾರಿಕೆಗಳ ಪ್ರಸ್ತಾವನೆಗಳನ್ನು ಹಾಗೂ ಭೂ ಪರಿವರ್ತನೆಗಾಗಿ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಿದ ಅವರು, ಜಗಳೂರು ತಾಲ್ಲೂಕಿನ ಮೆದಿಕೆರೆ ಗ್ರಾಮದಲ್ಲಿ ಯುವ ಉದ್ಯಮಿಗಳು ಮೆಕ್ಕೆಜೋಳದ ಸಪ್ಪೆಯನ್ನು ಬಳಸಿ ತಯಾರಿಸುತ್ತಿರುವ ಬ್ರಿಕೆಟ್ಸ್ ತಯಾರಿಕಾ ಘಟಕದ ರೀತಿಯಲ್ಲಿ ಇತರೆ ತಾಲ್ಲೂಕುಗಳಲ್ಲಿಯೂ ಪ್ರಯತ್ನಿಸಬಹುದು. ಜಿಲ್ಲೆ ಮೆಕ್ಕೆಜೋಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಈ ರೀತಿಯ ಘಟಕ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

    ಜೊತೆಗೆ ಪಿ.ಎಂ.ಇ.ಜಿ.ಪಿ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವÀ ಅರ್ಜಿದಾರರಿಗೆ ತೊಂದರೆಯಾಗದಂತೆ ಶೀಘ್ರವಾಗಿ ಬ್ಯಾಂಕ್‍ನವರು ಪರಿಶೀಲಿಸಿ ಸೌಲಭ್ಯ ಒದಗಿಸಬೇಕೆಂದರು. ಜಿಲ್ಲಾ ಕೈಗಾರಿಕಾ ಸಂಸ್ಥೆಯ ಉಪ ನಿರ್ದೇಶಕ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ 50 ಮತ್ತು ಅದಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಕೈಗಾರಿಕಾ ಘಟಕಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಸಿ ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂದರು.

    ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯನ್ವಯ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ(ಪಿ.ಎಂ.ಎಫ್.ಎಂ.ಇ) ‘ಒಂದು ಜಿಲ್ಲೆ ಒಂದು ಉತ್ಪನ್ನ’ ಕಾರ್ಯಕ್ರಮ ಅನುಷ್ಟಾನ ಅಡಿಯಲ್ಲಿ ದಾವಣಗೆರೆ ಜಿಲ್ಲೆಗೆ ‘ಆಗ್ರ್ಯಾನಿಕ್ ಮಿಲ್ಲೆಟ್ಸ್’ ಉತ್ಪನ್ನವನ್ನು ಗುರುತಿಸಲಾಗಿದೆ ಎಂದರು.

    ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಡಿ.ಮುದಿಗೌಡ್ರ ಮಾತನಾಡಿ, ಹರಿಹರ ಕೈಗಾರಿಕಾ ವಸಾಹತುವಿನಲ್ಲಿ ನಗರಸಭೆಯವರು ಯುಜಿಡಿ ಮತ್ತು 24*7 ನೀರಿನ ಸರಬರಾಜು ವ್ಯವಸ್ಥೆ ಮಾಡಲು ಹೋಗಿ ಇದ್ದ ರಸ್ತಗಳನ್ನು ಹಾಳು ಮಾಡಿದ್ದಾರೆ. ಬೀದಿ ದೀಪಗಳಿಲ್ಲ ಹಾಗೂ ಸ್ವಚ್ಚತೆ ನಿರ್ವಹಣೆ ಇಲ್ಲವಾಗಿದ್ದು ಈ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದರು.

    ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ, ಇನ್ನು 15 ದಿನಗಳ ಒಳಗೆ ಈ ಬಗ್ಗೆ ಕ್ರಮ ವಹಿಸಬೇಕು. ಹಾಗೂ ನನ್ನನ್ನು ಕರೆದುಕೊಂಡು ಹೋಗಿ ತೋರಿಸಬೇಕೆಂದು ಸೂಚಿಸಿದರು ಲೋಕಿಕೆರೆ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಮಾತನಾಡಿ, ದಾವಣಗೆರೆ ಕೈಗಾರಿಕಾ ವಸಾಹತುವಿನಲ್ಲಿ ಪ್ರಾರಂಭದಿಂದಲೂ ಕೈಗಾರಿಕೆಗಳಿಗೆ ನೀರಿನ ಸರಬರಾಜು ಆಗುತ್ತಿಲ್ಲ. ನೀರಿನ ಪೈಪ್‍ಲೈನ್ ಇದ್ದರೂ ಸಹ ನೀರಿನ ಸರಬರಾಜು ವ್ಯವಸ್ಥೆ ಮಾಡಿಲ್ಲ.

   ಕೈಗಾರಿಕಾ ಘಟಕಗಳಿಗೆ ಟ್ಯಾಂಕರ್ ಮುಖಾಂತರ ನೀರಿನ ವ್ಯವಸ್ಥೆ ನಾವೇ ಮಾಡಿಕೊಂಡ ಕಾರಣ ನೀರಿನ ಕಂದಾಯವನ್ನು ಅಧಿಕೃತವಾಗಿ ಮನ್ನಾ ಮಾಡಬೇಕೆಂದು ಮನವಿ ಮಾಡಿದರು.ಹಾಗೂ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉದ್ಯಮ ಪರವಾನಿಗೆಯ ವಿನಾಯಿತಿನ್ನು ನೀಡಿದ್ದು ಇಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉದ್ಯಮ ಪರವಾನಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದರು.

   ಲೋಕಿಕೆರೆ ರಸ್ತೆಯಲ್ಲಿರುವ ಕೆಎಸ್‍ಎಸ್‍ಐಡಿಸಿ ಕೈಗಾರಿಕಾ ವಸಾಹತುವಿನ ರಸ್ತೆ, ಒಳಚರಂಡಿ, ಬೀದಿದೀಪ ಕಸ ವಿಲೇವಾರಿ ಹಾಗೂ ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾ ಸಣ್ಣ ಕೈಗಾರಿಕೋದ್ಯಮಗಳ ಸಂಘ, ದಾವಣಗೆರೆ ಇವರು ಕೋರಿರುತ್ತಾರೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದರು.

   ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಕೆಐಎಡಿಬಿ, ಕೆಎಸ್‍ಎಸ್‍ಐಡಿಸಿ ಮತ್ತು ಪಾಲಿಕೆಯವರು ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ ಅವರು ಪಾಲಿಕೆ ಆಯುಕ್ತರಿಗೆ ನೀರು ಒದಗಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ಪಿಪಿಟಿ ಪ್ರದರ್ಶನ ಮೂಲಕ ಕೈಗಾರಿಕಾ ನೀತಿ 2020-2025 ಕುರಿತು ಸಭೆಗೆ ಮಾಹಿತಿ ನೀಡಿದರು
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಗ್ರಾಮೀಣ ಕೈಗಾರಿಕೆಯ ಉಪ ನಿರ್ದೇಶಕರಾದ ಮನ್ಸೂರ್, ಕೆ.ಎಸ್.ಎಸ್.ಡಿ.ಸಿ ಸಹಾಯಕ ವ್ಯವಸ್ಥಾಪಕರಾದ ರಂಗಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುಶೃತ್ ಡಿ. ಶಾಸ್ತ್ರೀ, ಹಾಗೂ ಇತರೆ ಕೈಗಾರಿಕೋದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link