ತುಮಕೂರು:
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಮಪಂಚಾಯ್ತಿಯನ್ನು ತಾಲೂಕಿಗೊಂದರಂತೆ ಆಯ್ಕೆ ಮಾಡಿ ಅ.2ರಂದು ಗಾಂಧಿ ಜಯಂತಿಯಂದು ತಲಾ 5 ಲಕ್ಷ ನಗದು ಬಹುಮಾನದೊಂದಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸುವ ಸರಕಾರದ ಯೋಜನೆಗೆ ಈ ಬಾರಿ ಅನುದಾನದ ಕೊರತೆ ಎದುರಾಗಿದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ.
ಪ್ರತೀ ವರ್ಷ ಅ.2 ಗಾಂಧಿ ಜಯಂತಿಯದು ವಿಧಾನಸೌಧ ಬ್ಯಾಕ್ವೆಂಟ್ ಹಾಲ್ನಲ್ಲಿ ಜರುಗುತ್ತಿದ್ದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ನಗದು ಪುರಸ್ಕಾರದ ಬಗ್ಗೆ ಪ್ರಶಸ್ತಿ ಪ್ರದಾನ ಮಾಡಬೇಕಾದ ಹಿಂದಿನ ದಿನದವರೆಗೂ ತಮಗೆ ಮಾಹಿತಿಯಿಲ್ಲ ಎಂದು ಹೇಳುತ್ತಿರುವುದನ್ನು ನೋಡಿದರೆ ಸರಕಾರದ ಬಳಿ ಬಹುಮಾನ ಕೊಡುವಷ್ಟು ಅನುದಾನ ಲಭ್ಯವಿಲ್ಲವೇ ಎಂಬ ಸಂದೇಹಕ್ಕೆ ಎಡೆಮಾಡಿದೆ.
2015ರಲ್ಲಿ ಸಿದ್ಧರಾಮಯ್ಯ ಅವರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರು ಪಂಚಾಯಿತಿ ಸಾಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಅಭಿವೃದ್ಧಿ ಮಾನದಂಡಗಳಡಿ ತಾಲೂಕಿಗೊಂದು ಅತ್ಯುತ್ತಮ ಪಂಚಾಯಿತಿ ಆಯ್ಕೆ ಮಾಡಿ ಅದರ ಅಧ್ಯಕ್ಷರು, ಪಿಡಿಒಗಳನ್ನು ವಿಧಾನಸೌಧಕ್ಕೆ ಕರೆಸಿ ಗಾಂಧಿಜಯಂತಿಯನ್ನು 5 ಲಕ್ಷ ನಗದು ಬಹುಮಾನದೊಂದಿಗೆ ಪುರಸ್ಕರಿಸುವ ಯೋಜನೆ ಜಾರಿಗೊಳಿಸಿದ್ದರು. ಮಹಾತ್ಮಗಾಂಧೀಜಿಯವರ ಗ್ರಾಮಸ್ವರಾಜ್ಯ ಆಶಯಕ್ಕೆ ಪೂರಕವಾಗಿದ್ದ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಸರಕಾರದ ಬಳಿಕವೂ ಮೈತ್ರಿ ಸರಕಾರ ಹಾಗೂ ಸಿಎಂ ಬಿಎಸ್ವೈ ನೇತೃತ್ವದ ಹಾಲಿ ಸರಕಾರದಲ್ಲೂ 2019ರಂದೇ ಪ್ರಧಾನ ಮಾಡುತ್ತಾ ಬರಲಾಗಿದೆ.
ಆದರೆ ಕಳೆದ 6 ವರ್ಷಗಳಲ್ಲಿ ಈ ಬಾರಿ ಮಾತ್ರ ಕಾರ್ಯಕ್ರಮ ಅ.2ರಂದು ಗಾಂಧಿಜಯಂತಿಯಂದು ನಡೆಯದೆ ಕೋವಿಡ್ ಹೆಸರಲ್ಲಿ ಮುಂದೂಡಿಕೆಯಾಗುತ್ತಿರುವುದು ಮಹತ್ವದ ಕಾರ್ಯಕ್ರಮ, ಯೋಜನೆಗಳು ಮೂಲೆಗುಂಪಾಗುತಿರುವುದಕ್ಕೆ ನಿದರ್ಶನವೆನಿಸಿದೆ.
ಪುರಸ್ಕೃತ ಗ್ರಾಮಗಳ ಘೋಷಣೆಯೂ ಬಾಕಿ:
ಹಿಂದಿನ ವರ್ಷಗಳಲ್ಲಿ ಕಾರ್ಯಕ್ರಮಕ್ಕೆ ಒಂದು ದಿನಕ್ಕೆ ಮುಂಚಿತವಾಗಿಯೇ ಪ್ರಶಸ್ತಿ ಪುರಸ್ಕೃತ ಗ್ರಾಮಗಳ ಘೋಷಣೆಯಾಗಿ ಅ.2ರಂದು ಪ್ರಧಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಳಂಬವಾಗಿದ್ದು, ಪಂಚತಂತ್ರ ತಂತ್ರಾಂಶದ ಮೂಲಕ ಪ್ರಶ್ನಾವಳಿ ಅರ್ಜಿಯನ್ನು ಅಪ್ಲೋಡ್ ಮಾಡಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಪ್ರತೀ ತಾಲೂಕಿನ ಐದು ಗ್ರಾಮಪಂಚಾಯಿತಿಗಳ ಪಟ್ಟಿಗಳಷ್ಟೇ ಜಿಲ್ಲಾ ಪಂಚಾಯತ್ನಲ್ಲಿ ಲಭ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
