ಬೆಂಗಳೂರು :
ಆಕ್ಸಿಸ್ ಬ್ಯಾಂಕ್ ಎಟಿಎಂನನ್ನು ದುಷ್ಕರ್ಮಿಗಳು ಒಡೆದು 8 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಕೆಆರ್ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ರಸ್ತೆಯಲ್ಲಿ ನಡೆದಿದೆ.
ಭಟ್ಟರಹಳ್ಳಿ ಬಳಿ ಇತ್ತೀಚಿಗೆ ಆಕ್ಸಿಸ್ ಬ್ಯಾಂಕ್ಗೆ ಸೇರಿದ ಹೊಸ ಎಟಿಎಂ ಆರಂಭಿಸಲಾಗಿತ್ತು. ಕಳೆದ ರಾತ್ರಿ ಎಟಿಎಂಗೆ ಬಂದ ದುಷ್ಕರ್ಮಿಗಳ ಗುಂಪೊಂದು ವೆಲ್ಡಿಂಗ್ ಕಟರ್ ಮೂಲಕ ಎಟಿಎಂ ಯಂತ್ರ ಒಡೆದು ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
ಎಟಿಎಂಗೆ ನಿನ್ನೆ ಸಂಜೆ 8 ಲಕ್ಷ ರೂ. ಹಣವನ್ನು ತುಂಬಲಾಗಿತ್ತು. ನಿನ್ನೆ ರಾತ್ರಿಯೇ ಎಟಿಎಂಗೆ ನುಗ್ಗಿದ್ದ ದರೋಡೆಕೋರರು ಅದರಲ್ಲಿದ್ದ ಹಣ ದೋಚಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರು ಎಟಿಎಂಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ದುಷ್ಕರ್ಮಿಗಳು ಎಟಿಎಂಗೆ ನುಗ್ಗಿದ್ದು ವೆಲ್ಡಿಂಗ್ ಗ್ಯಾಸ್ ಬಳಸಿ ಎಟಿಎಂ ಯಂತ್ರವನ್ನ ಕೊರೆದು ಹಾಕಿದ್ದಾರೆ. ಬಳಿಕ ಎಟಿಎಂನಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
ಈ ಎಟಿಎಂ ಬಳಿ ಸಿಸಿ ಕ್ಯಾಮೆರಾ ಇಲ್ಲ, ಸೆಕ್ಯೂರಿಟಿ ಕೂಡ ಇರಲಿಲ್ಲ. ಬರ್ಗಲರಿ ಅಲರಾಂ ಇಲ್ಲದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ದುಷ್ಕರ್ಮಿಗಳು ತಮ್ಮ ಕೈಚಳಕ ತೋರಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಎಸಿಪಿ ಮನೋಜ್, ಇನ್ಸ್ಪೆಕ್ಟರ್ ಅಂಬರೀಶ್ ಆಗಮಿಸಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಕೆ ಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭದ್ರತಾ ಲೋಪ ಮತ್ತು ದರೋಡೆಕೋರರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ