ಶಿರಾ:
ಶಾಸಕ ಬಿ.ಸತ್ಯನಾರಾಯಣ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಉಪ ಚುನಾವಣೆಯ ದಿನಾಂಕ ಪ್ರಕಟಗೊಂಡರೂ ಜೆ.ಡಿ.ಎಸ್. ಪಕ್ಷವು ತನ್ನ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸಿದ್ದರೂ ಅಂತಿಮವಾಗಿ ಮಾಜಿ ಪ್ರಧಾನಿ ದೇವೇಗೌಡರು ನಿಧನರಾದ ಶಾಸಕ ಬಿ.ಸತ್ಯನಾರಾಯಣ್ ಅವರ ಧರ್ಮಪತ್ನಿ ಅಮ್ಮಾಜಮ್ಮ ಬಿ.ಸತ್ಯನಾರಾಯಣ್ ಅವರ ಹೆಸರನ್ನು ಮಂಗಳವಾರ ಘೋಷಣೆ ಮಾಡಿದ್ದಾರೆ.
ಜೆ.ಡಿ.ಎಸ್. ಪಕ್ಷದಲ್ಲಿ ಸತ್ಯನಾರಾಯಣ್ ಅವರ ಪುತ್ರ ಬಿ.ಸತ್ಯಪ್ರಕಾಶ್, ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ಸಿ.ಆರ್.ಉಮೇಶ್ ಈ ಪಕ್ಷದಿಂದ ಟಿಕೇಟ್‍ನ ಪ್ರಭಲ ಆಕಾಂಕ್ಷಿಗಳಾಗಿದ್ದರು. ಈ ನಡುವೆ ಕಳೆದ ಒಂದೆರಡು ದಿನಗಳ ಹಿಂದಷ್ಟೇ ಟಿಕೇಟ್ ಲಭ್ಯವಾಗವುದಿಲ್ಲವೆಂಬುದನ್ನು ಅರಿತ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಕಳೆದ ಒಂದು ವಾರದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಿರಾ ಕಾರ್ಯಕರ್ತರ ಸಭೆಗೆ ಆಗಮಿಸಿದ್ದಾಗಲೂ ಅಧಿಕೃತ ಅಭ್ಯರ್ಥಿಯ ಘೋಷಣೆ ಮಾಡಿರಲಿಲ್ಲ. ಮೃತ ಶಾಸಕರ ಕುಟುಂಬಕ್ಕೆ ಟಿಕೇಟ್ ಖಚಿತ ಎಂಬ ಮಾಹಿತಿ ಇದ್ದಿತಾದರೂ ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಬಹುದೆಂಬ ನಿರೀಕ್ಷೆಯೂ ಹಲವರಲ್ಲಿತ್ತು.
ಅ:5 ರಂದು ಶ್ರೀಮತಿ ಅಮ್ಮಾಜಮ್ಮ ಬಿ.ಸತ್ಯನಾರಾಯಣ್ ಅವರಿಗೆ ಟಿಕೇಟ್ ಖಚಿತವಾಗಿದ್ದು ಹೆಸರು ಘೋಷಣೆಯಾಗುವುದೊಂದೇ ಬಾಕಿ ಎಂದು ಪ್ರಗತಿಯು ಸುದ್ದಿಯನ್ನು ಪ್ರಕಟಿಸಿತ್ತು. ಅ:6 ರಂದು ಮಾಜಿ ಪ್ರಧಾನಿ ದೇವೇಗೌಡರು ಅಮ್ಮಾಜಮ್ಮ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.
ಅತ್ತ ಅಮ್ಮಾಜಮ್ಮ ಅವರ ಹೆಸರನ್ನು ಪಕ್ಷದ ವರಿಷ್ಠರು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಕಳ್ಳಂಬೆಳ್ಳ ಕಾರ್ಯಕರ್ತರ ಸಭೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಾರದ ಅಮ್ಮಾಜಮ್ಮ ಅವರು ಅ:5 ರಂದು ತುಮಕೂರಿನ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಸೆ:6 ರಂದು ಕೋವಿಡ್ ಪರೀಕ್ಷೆಯ ಫಲಿತಾಂಶ ಪಾಸಿಟೀವ್ ಬಂದಿದ್ದು ಅಮ್ಮಾಜಮ್ಮ ಅವರಿಗೆ ಯಾವುದೇ ರೀತಿಯ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.
ಈ ಸಂಬಂಧ ಸತ್ಯನಾರಾಯಣ್ ಅವರ ಪುತ್ರ ಬಿ.ಸತ್ಯಪ್ರಕಾಶ್ ಮಾತನಾಡಿ ತಾಯಿಗೆ ಕೋವಿಡ್ ಪಾಸಿಟೀವ್ ಬಂದಿದ್ದು ಯಾವುದೇ ರೀತಿಯ ಕೊರೋನಾ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಅಮ್ಮನ ಆರೋಗ್ಯ ಚೆನ್ನಾಗಿಯೇ ಇದ್ದು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪತ್ರಿಕೆಗೆ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ