ಚಳ್ಳಕೆರೆ
ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರಸಭೆ ಆಡಳಿತ ಸ್ವಚ್ಚತೆ ಮತ್ತು ಕೊರೋನಾ ನಿಯಂತ್ರಣ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ವೈರಾಣು ಹರಡದಂತೆ ಜಾಗ್ರತೆ ವಹಿಸಿದ್ದು, ನಗರದ ವಿವಿಧೆಡೆ ಮತ್ತೆ ಪ್ಲಾಸ್ಟಿಕ್ ಕವರ್‍ಗಳ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೌರಾಯುಕ್ತ ಪಿ.ಪಾಲಯ್ಯ ಗುರುವಾರ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರಲ್ಲದೆ, ಅಂಗಡಿಗಳ ಪರವಾನಿಗೆಯನ್ನು ನವೀಕರಿಸುವಂತೆ ತಿಳಿಸಿದರು.
ನಗರದ ಚಿತ್ರದುರ್ಗ, ಬಳ್ಳಾರಿ, ಪಾವಗಡ ಮತ್ತು ಬೆಂಗಳೂರು ರಸ್ತೆಗಳ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿವಿಧ ಪ್ಲಾಸ್ಟಿಕ್ ಕವರ್ ಹಾಗೂ ಬ್ಯಾಗ್‍ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಎಚ್ಚರಿಕೆಯನ್ನು ಮಾತ್ರ ನೀಡುತ್ತಿದ್ದು, ಮತ್ತೆ ಪ್ಲಾಸ್ಟಿಕ್ ಕವರ್ ಬಳಕೆ ಮತ್ತು ಮಾರಾಟ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಹೋಟೆಲ್, ಅಂಗಡಿ, ಕಿರಾಣಿ ಅಂಗಡಿ, ಪೆಟ್ಟಿಶಾಪ್ ಮಾಲೀಕರು ಕೂಡಲೇ ತಮ್ಮ ಅಂಗಡಿಗಳ ಪರವಾನಿಗೆಯನ್ನು ಶುಲ್ಕಪಾವತಿಸಿ ನವೀಕರಣ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಆರೋಗ್ಯ ನಿರೀಕ್ಷಕರಾದ ದಾದಾಪೀರ್, ಗಣೇಶ್ ಹಾಗೂ ಸಿಬ್ಬಂದಿ ವರ್ಗ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ