ಕೈ ಭಿನ್ನಮತ ಶಮನವಾಗುವ ಹೊತ್ತಿಗೆ ಹೈ ತಗಾದೆ !

ತುಮಕೂರು:

    ಶಿರಾ ಉಪ ಚುನಾವಣೆ ಅಖಾಡದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಪೂರ್ಣ ಮುಗಿದ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕಾಂಗ್ರೆಸ್ ನೀಡಿಕೆ ವಿಚಾರವಾಗಿ ಆರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಎದ್ದಿದ್ದ ಅಪಸ್ವರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದಲ್ಲಿ ನಡೆದ ಸಂಧಾನಸಭೆಯಲ್ಲಿ ಬಗೆಹರಿದು ಎಲ್ಲಾ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಹೊತ್ತಿಗೆ, ದೆಹಲಿ ಅಂಗಳದಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಾಡಿದರೆನ್ನಲಾದ ಫೋನ್ ಕರೆಗೆ ಬೂದಿಮುಚ್ಚಿದ ಕೆಂಡದಂತಿದ್ದ ಟಿಕೆಟ್ ಅಪಸ್ವರದ ಜ್ವಾಲೆ ಮತ್ತೆ ಪುಟಿಯಲಾರಂಭಿಸಿದೆ.

ಕರೆಗೆ ತಬ್ಬಿಬ್ಬಾದ ಕೈ ನಾಯಕರು:

    ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯೇ ಕೆಪಿಸಿಸಿ ಅಧ್ಯಕ್ಷರಿಗೆ ಬಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜಿವಾಲಾ ಅವರ ಕರೆ ರಾಜ್ಯ ಕಾಂಗ್ರೆಸ್ ಘಟಾನುಘಟಿ ನಾಯಕರನ್ನೆ ಶಿರಾ ಟಿಕೆಟ್ ವಿಷಯವಾಗಿ ತಬ್ಬಿಬ್ಬಾಗುವಂತೆ ಮಾಡಿದೆ. ಕೆಪಿಸಿಸಿಯಿಂದ ಶಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿಫಾರಸ್ಸಾಗಿದ್ದ ಟಿ.ಬಿ.ಜಯಚಂದ್ರ ಅವರ ಹೆಸರಿಗೆ ರಾಜ್ಯ ಉಸ್ತುವಾರಿಯೇ ಅಪಸ್ವರ ಎತ್ತಿದ ಕುರಿತು ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ನಡುವೆ ನಡೆದ ಚರ್ಚೆಯ ಆಡಿಯೋ ವೈರಲ್ ಆಗಿ ಕಾಂಗ್ರೆಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆಯಲ್ಲದೇ ವಿಪಕ್ಷಗಳಲ್ಲೂ ರಾಜಕೀಯ ಚರ್ಚೆಗೆ ಗ್ರಾಸವೊದಗಿಸಿದೆ.

ಏಕಾಏಕಿ ಉಮೇದುವಾರಿಕೆ:

      ಈ ರಾಜಕೀಯ ಹೈಡ್ರಾಮಾ ಬೆಳವಣಿಗೆಗಳ ನಡುವೆಯೇ ಶುಕ್ರವಾರದಿಂದ ಶಿರಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಬಿ.ಫಾರಂ ರಹಿತವಾಗಿ ಕಾಂಗ್ರೆಸ್‍ನಿಂದ ಟಿ.ಬಿ.ಜಯಚಂದ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಧಿಕೃತ ಅಭ್ಯರ್ಥಿಯಾಗಿ ಅ.15ರಂದು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದು, ಸುರ್ಜಿವಾಲ ಕರೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ಏಕಾಏಕಿ ಮೊದಲ ದಿನವೇ ಬಿ.ಫಾರಂ ರಹಿತವಾಗಿ ನಾಮಪತ್ರ ಸಲ್ಲಿಸಿರುವುದು ಕೈ ಪಾಳಯದಲ್ಲಿ ಬಗೆಹರಿಯದ ಟಿಕೆಟ್ ಗೊಂದಲಗಳಿಗೆ ಸಾಕ್ಷಿಎನಿಸಿದೆ.

ರಣೋತ್ಸಾಹ ಪ್ರದರ್ಶಿಸಿದ್ದ ಕೈ ನಾಯಕರು:

      ಶಿರಾ ಕ್ಷೇತ್ರದ ಉಪಚುನಾವಣೆ ಘೋಷಣೆಗೂ ಮುನ್ನವೇ ಟಿ.ಬಿ.ಜಯಚಂದ್ರ ಅವರನ್ನು ಅಭ್ಯರ್ಥಿಯಾಗಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಅಪಸ್ವರದ ಧ್ವನಿ ಕೇಳಲಾರಂಭಿಸಿತ್ತು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಮೊದಲಿಗೆ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿ ಕೆಪಿಸಿಸಿ ನಾಯಕರ ಸಮಾಲೋಚನೆ ಬಳಿಕ ನಿರ್ಧಾರ ಬದಲಿಸಿ ಜಯಚಂದ್ರ ಅವರು ಅಭ್ಯರ್ಥಿಯಾಗುವುದಕ್ಕೆ ಸಹಮತ ವ್ಯಕ್ತಪಡಿಸಿದರು. ಬಳಿಕ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರನ್ನು ಶಿರಾ ಉಪಚುನಾವಣೆ ಕಾಂಗ್ರೆಸ್ ಛೇರ್ಮನ್ ಆಗಿ, ಕೆ.ಎನ್. ರಾಜಣ್ಣ ಅವರನ್ನು ಕೋ ಛೇರ್ಮನ್ ಆಗಿ ನೇಮಕ ಮಾಡಲಾಯಿತು.

      ಆ ಬಳಿಕ ಒಂದೇ ವೇದಿಕೆಯಲ್ಲಿ ಜಿಲ್ಲೆಯ ಕಾಂಗ್ರೆಸ್‍ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ ಶಿರಾದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಜಯಚಂದ್ರ ನಮ್ಮ ಒಕ್ಕೊರಲ ಅಭ್ಯರ್ಥಿ ಎಂದು ಸಾರಿದರು. ಇದಾದ ಬಳಿಕ ಬುಧವಾರವಷ್ಟೇ ತುಮಕೂರು ಹೊರವಲಯದಲ್ಲಿ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ರಣೋತ್ಸಾಹ ಪ್ರದರ್ಶಿಸಿದ್ದರು. ಇದಾದ ಮರುದಿನವೇ ದಿಢೀರನೇ ಕಾಂಗ್ರೆಸ್ ವರಿಷ್ಠರಿಂದ ಶಿರಾಶ ಟಿಕೆಟ್‍ಗೆ ಪ್ರಸ್ತಾಪವಾದ ಡಾ. ರಾಜೇಶ್‍ಗೌಡ ಹೆಸರು ಕಾಂಗ್ರೆಸ್ ನಾಯಕರಲ್ಲೇ ಗಲಿಬಿಲಿ ಮಾಡುವಂತೆ ಮಾಡಿದೆಯಲ್ಲದೆ? ಈ ಪ್ರಸ್ತಾಪದ ಹಿಂದಿನ ಕಾಣದ ಕೈ ಯಾರು? ಎಂಬ ಚರ್ಚೆಗೂ ಆಸ್ಪದವೊದಗಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link