ಬೆಂಗಳೂರು:
ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಬಗ್ಗೆ ಕ್ರಮಕೈಗೊಳ್ಳುವಂತಿಲ್ಲ. ಪೂರ್ಣ ವಿಳಾಸ, ದಾಖಲೆ ಇದ್ದರೆ ಮಾತ್ರ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಮನವಿಯ ಮೇರೆಗೆ ಸರ್ಕಾರ ಈ ಆದೇಶ ಹೊರಡಿಸಿದೆ.ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ದೂರುಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.
ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿರುತ್ತವೆ. ಅಲ್ಲದೇ ದೂರುಗಳಿಗೆ ಪೂರಕವಾದ ಮಾಹಿತಿ, ದಾಖಲೆಗಳನ್ನು ಸಾಮಾನ್ಯವಾಗಿ ಲಗತ್ತಿಸಿರುವುದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಮತ್ತು ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.