ಬೆಂಗಳೂರು
ಸರ್ಕಾರ ಮತ್ತು ಸಾರ್ವಜನಿಕರ ನಿದ್ದೆಗೆಡಿಸಿದ್ದ ನಕಲಿ ಛಾಪಾ ಕಾಗದದ ಹಗರಣ ಮತ್ತೊಮ್ಮೆ ಬೆಳಕಿಗೆಬಂದಿದ್ದು, ಬೆಂಗಳೂರು ಪೊಲೀಸರು ಸುಮಾರು 2.71 ಕೋಟಿ ರೂ. ಮೌಲ್ಯದ ನಕಲಿ ಛಾಪಾಕಾಗದಗಳನ್ನು ವಶಪಡಿಸಿಕೊಂಡು ಛೋಟಾ ತೆಲಗಿ ಸೇರಿದಂತೆ ಆತನ ಸಹಚರರನ್ನು ಬಂಸಿದ್ದಾರೆ.
ಪ್ರಕರಣದಲ್ಲಿ ಕಂದಾಯ ಭವನ, ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಟೈಪಿಸ್ಟ್ ಗಳು ಹಾಗೂ ಬ್ರೋಕರ್ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಅವರಲ್ಲಿ 3ನೇ ಆರೋಪಿ ನಾಪತ್ತೆಯಾಗಿದ್ದಾನೆ. ಈ ಎಲ್ಲ ಆರೋಪಿಗಳು ನಕಲಿ ಛಾಪಾ ಕಾಗದಗಳಿಂದ ನ್ಯಾಯಾಲಯಗಳಲ್ಲಿ ತಕರಾರು ಸುಳ್ಳು ದಾವೆಗಳನ್ನು ಹೂಡಲು, ಸುಳ್ಳು ಜಿಪಿಎ ಮಾಡಲು, ಸುಳ್ಳು ವಿಲ್ಹ್ ಮಾಡಿಸಲು, ಸುಳ್ಳು ಕರಾರು ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು.
ಹಲಸೂರು ಗೇಟ್ ಉಪವಿಭಾಗದ ವ್ಯಾಪ್ತಿಗೊಳಪಡುವ ಎಸ್ಜೆಪಾರ್ಕ್ ಪೊಲೀಸ್ ಠಾಣೆಯ ಎಸ್ಪಿ ರಸ್ತೆಯ ಅಮರ್ ರೇಡಿಯೋ ಅಂಗಡಿ ಬಳಿ ನಿಷೇಧಗೊಂಡಿರುವ ಛಾಪಾ ಕಾಗದಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡಲು ಬಂದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ರವಾನೆಯಾಗಿತ್ತು. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು ವಿವೇಕನಗರ ನಿವಾಸಿ ಹಸೈನ್ಮೋದಿ ಅಲಿಯಾಸ್ ಛೋಟಾ ತೆಲಗಿ(53), ಬಸವೇಶ್ವರನಗರ ವಾಸಿ ಹರೀಶ(55) ಎಂಬಿಬ್ಬರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಆಧರಿಸಿ 10 -20 ರೂ. ಮುಖಬೆಲೆಯ ತಲಾ 55, 30 ರೂ. ಮುಖಬೆಲೆಯ ಒಂದು, 50 ರೂ. ಮುಖಬೆಲೆಯ 50, 100 ರೂ. ಮುಖಬೆಲೆಯ 37, 200 ರೂ. ಮುಖಬೆಲೆಯ 27, 500 ಮುಖಬೆಲೆಯ ಒಂದು, 500 ರೂ. ಮುಖಬೆಲೆಯ ಒಂದು, 750 ಮುಖಬೆಲೆಯ 2, ಸಾವಿರ ರೂ. ಮುಖಬೆಲೆಯ ಹತ್ತು, 2000 ಮತ್ತು 3000 ಮುಖಬೆಲೆಯ ತಲಾ 30, 5000 ರೂ. ಮುಖಬೆಲೆಯ 28, 10,000 ರೂ. ಮುಖಬೆಲೆಯ 33, 15,000 ರೂ. ಮುಖಬೆಲೆಯ 2, 20,000 ರೂ. ಮುಖಬೆಲೆಯ 37, 25,000 ರೂ. ಮುಖಬೆಲೆಯ 443 ಛಾಪಾಕಾಗದದ ದಸ್ತಾವೇಜುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಸಲಿ ಮೌಲ್ಯ 25,40,280 ರೂ.ಗಳಾಗಿವೆ.
ಮಾರುಕಟ್ಟೆಯಲ್ಲಿ ಸಾವಿರ ಪಟ್ಟು ಬೆಲೆಗೆ ದಸ್ತಾವೇಜುಗಳನ್ನು ಮಾರಾಟ ಮಾಡುತ್ತಿದ್ದು, ಇದರ ಅಂದಾಜು ಮೌಲ್ಯ 2,71,81,000 ರೂ.ಗಳೆಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಪಿಸಿ 467, 468, 471, 420 ಆರೋಪಗಳಡಿ ಪ್ರಕರಣ ದಾಖಲಿಸಿದ್ದು, ಹಸೈನ್ಮೋದಿ, ಹರೀಶ, ಶವರ್ ಅಲಿಯಾಸ್ ಸೀಮಾ, ನಜ್ಮಾ ಫಾತಿಮಾ ಅವರನ್ನು ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಹಸೈನ್ಮೋದಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, 20 ವರ್ಷಗಳಿಂದ ಬೆಂಗಳೂರಿಲ್ಲಿ ವಾಸಿಸುತ್ತಿದ್ದಾನೆ. ಕಂದಾಯ ಭವನ ಮತ್ತು ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಬಾಡಿಗೆ ಕರಾರು, ಭೋಗ್ಯ ಕರಾರುಪತ್ರಗಳನ್ನು ಮಾಡಿಸಿಕೊಡುವ ಬ್ರೋಕರ್ ಕೆಲಸ ಮಾಡುತ್ತಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
