ಹೈದರಾಬಾದ್ :
ಪ್ರೀತಿ ನಿರಾಕರಿಸಿದ್ದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಪಾಗಲ್ಪ್ರೇಮಿಯಿಂದ ಸಾವನ್ನಪ್ಪಿರುವ ಯುವತಿಯನ್ನು ಚಿನ್ನಾರಿ ಎಂದು ಗುರುತಿಸಲಾಗಿದೆ. ನಾಗಭೂಷಣ್ ಎಂಬ ಪಾಗಲ್ ಪ್ರೇಮಿ.
ಇಲ್ಲಿನ ಹನುಮಾನ್ ಪೇಟೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಿನ್ನಾರಿಯನ್ನು ಪ್ರೀತಿಸುವಂತೆ ನಾಗಭೂಷಣ್ ಹಲವು ದಿನಗಳಿಂದ ಪೀಡಿಸುತ್ತಿದ್ದ. ಆದರೆ, ಯುವತಿ ಒಪ್ಪಿರಲಿಲ್ಲ. ನಾಗಭೂಷಣ್ ಕಾಟ ತಡೆಯಲಾಗದೇ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ನಾಗಭೂಷಣ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಇಷ್ಟಾದರೂ ಸುಮ್ಮನಾಗದ ನಾಗಭೂಷಣ್, ನಿನ್ನೆ ರಾತ್ರಿ ಯುವತಿಯ ಮನೆಗೆ ಬಂದು ಮಾತನಾಡಬೇಕು ಎಂದು ಹೇಳಿದ್ದಾನೆ. ಮಾತನಾಡಲು ಒಪ್ಪದಿದ್ದಾಗ ಏಕಾಏಕಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ ಯುವತಿ ಸಜೀವ ದಹನಗೊಂಡಿದ್ದಾಳೆ. ಪಾಗಲ್ ಪ್ರೇಮಿ ನಾಗಭೂಷಣ್ ಗೂ ಗಂಭೀರವಾದ ಸುಟ್ಟಗಾಯಗಳಾಗಿದ್ದು. ಆಸ್ಪತ್ರೆಗೆ ದಾಖಲಾಗಿದ್ದಾನೆ.