ನವದೆಹಲಿ:
ಸ್ಥಳೀಯ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಎಸಿ (ಏರ್ ಕಂಡಿಷನರ್) ಮತ್ತು ರೆಫ್ರಿಜರಂಟ್ಸ್ ಉತ್ಪನ್ನಗಳ ಆಮದನ್ನು ನಿಷೇಧಿಸಿದೆ. ಚೀನಾ ಮತ್ತು ಥಾಯ್ಲೆಂಡ್ನಿಂದ ಆಮದಾಗುತ್ತಿದ್ದ ಈ ಉತ್ಪನ್ನಗಳ ಆಮದು ನಿಷೇಧ ಆದೇಶವನ್ನು ಸರ್ಕಾರ ಗುರುವಾರ ರಾತ್ರಿ ಪ್ರಕಟಿಸಿದೆ.
ಟೆಲಿವಿಷನ್ ಸೆಟ್ಗಳ ಮೇಲಿನ ಆಮದು ನಿಷೇಧವನ್ನು ಕೇಂದ್ರ ಸರ್ಕಾರ ಜುಲೈ ತಿಂಗಳಲ್ಲಿ ಪ್ರಕಟಿಸಿತ್ತು. ಆಮದು ಮಾಡಬೇಕು ಎಂದರೆ ಆಮದುದಾರರು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ನಿಂದ ಅನುಮತಿ, ಪರವಾನಗಿ ಪಡೆಯಬೇಕು ಎಂದು ನಿರ್ದೇಶಿಸಿತ್ತು. ಏರ್ ಕಂಡಿಷನರ್ (ಎಸಿ) ಮೇಲಿನ ಆಮದು ನಿಷೇಧ ಎಂದರೆ, ಯಾವುದೇ ರೀತಿಯಲ್ಲೂ ಅವುಗಳನ್ನು ಆಮದುಮಾಡಿಕೊಳ್ಳುವಂತಿಲ್ಲ.
ಭಾರತಕ್ಕೆ ಬರುವ ಬಹುತೇಕ ಏರ್ಕಂಡಿಷನರ್ಗಳಲ್ಲಿ ರೆಫ್ರಿಜರಂಟ್ಸ್ ತುಂಬಿಕೊಂಡೇ ಇರುತ್ತದೆ. 2020ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 649 ದಶಲಕ್ಷ ಡಾಲರ್ ಮೌಲ್ಯದ ಸ್ಪಿಲ್ಟ್ ಏರ್ಕಂಡಿಷನರ್ಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಚೀನಾದಿಂದ 241 ದಶಲಕ್ಷ ಡಾಲರ್ಗಳಾದ್ದಾದರೆ, ಥಾಯ್ಲೆಂಡ್ನಿಂದ 189 ದಶಲಕ್ಷ ಡಾಲರ್ಗಳ ಎಸಿಗಳು. ಅದೇ ರೀತಿ, 35 ದಶಲಕ್ಷ ಡಾಲರ್ ಮೌಲ್ಯದ ವಿಂಡೋ ಏರ್ ಕಂಡಿಷನರ್ಗಳನ್ನು ಆಮದುಮಾಡಿಕೊಂಡಿದ್ದು, ಇದರಲ್ಲಿ ಚೀನಾದಿಂದ 14 ದಶಲಕ್ಷ ಡಾಲರ್, ಥಾಯ್ಲೆಂಡ್ನಿಂದ 18 ದಶಲಕ್ಷ ಡಾಲರ್ ಮೌಲ್ಯದ ಏರ್ಕಂಡಿಷನರ್ಗಳು ಸೇರಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ