ನೆರೆ ಪ್ರವಾಹ ಪರಿಶೀಲನೆಗೆ ಸಿದ್ದರಾಮಯ್ಯ

ಬೆಂಗಳೂರು

    ಕಾಂಗ್ರೆಸ್ ನೆರೆ ಪರಿಹಾರ ಅಧ್ಯಯನಕ್ಕೆ ಮುಂದಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದಾಗಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಸುರಿಯುತ್ತಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಜಿಲ್ಲಾ ಮಂತ್ರಿಗಳು ಆಯಾ ಜಿಲ್ಲೆಗಳಿಗೆ ಭೇಟಿ ನೀಡಬೇಕು. 85 ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರಾದರೂ ಆಗಸ್ಟ್ ನಲ್ಲಿ ಸುರಿದ ಪ್ರವಾಹಕ್ಕೂ ಇನ್ನೂ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ನೆರೆ ಹಾವಳಿ ವಿಚಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನೂ ಮಾಡುತ್ತಿಲ್ಲ. ಕಾಂಗ್ರೆಸ್‍ನಿಂದ ನೆರೆ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಆಗ್ರಹ ಮಾಡಲಾಗಿತ್ತಾದರೂ ಈವರೆಗೂ ಆಗಿಲ್ಲ.

    ರಾಜ್ಯದ ಕೆಲ ಮಂತ್ರಿಗಳಿಗೆ ಕೊರೋನ ಬಂದಿದೆ. ಇನ್ನು ಕೆಲವರು ಚುನಾವಣೆಯಲ್ಲಿ ನಿರತರಾಗಿ ಮೆರವಣಿಗೆ ಮಾಡುತ್ತಿದ್ದಾರೆ. ಸರ್ಕಾರದ ಎಲ್ಲಾ ಸಚಿವರು ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ. ಇವರಿಗೆಲ್ಲ ಜನರಿಗಿಂತ ಚುನಾವಣೆಯೇ ಮುಖ್ಯವಾಗಿದೆ. ನಾವು ಚುನಾವಣಾ ಗೆದ್ದೆವು ಎಂದು ಹೇಳಲು ಹೊರಟಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು ಹೋಗಿದ್ದರು. ಆದರೆ ಮುಖ್ಯಮಂತ್ರಿಗಳು ಹೋಗಲೇ ಇಲ್ಲ. ಬಿಹಾರದಲ್ಲಿ ನೆರೆ ವೀಕ್ಷಣೆಗೆ ಹೋಗುವ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುವುದಿಲ್ಲ. ಈ ಸರ್ಕಾರದ ಈ ರೀತಿಗೆ ಜನ ಪಾಠ ಕಲಿಸಲಿದ್ದಾರೆ ಎಂದರು.

    ಈವರೆಗೆ 10 ಸಾವಿರ ಕೋಟಿ ನೆರೆ ನಷ್ಟವಾಗಿದೆ. ನೆರೆ ಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸಿಎಂಗೆ ಪತ್ರ ಕೂಡ ಬರೆದಿದ್ದೆ. ಮೋದಿ ಕರ್ನಾಟಕಕ್ಕೆ ಸಕಲ ರೀತಿಯ ನೆರವು ನೀಡುತ್ತೇವೆ ಎಂದು ಬರಿ ಬಾಯಿ ಮಾತಲ್ಲಿ ಹೇಳುತ್ತಾರಾದರೂ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಮೋದಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಈ ರೀತಿಯ ದಪ್ಪ ಚರ್ಮದ ಸರ್ಕಾರವನ್ನು ನಾನು ಇಲ್ಲಿಯವರೆಗೆ ನೋಡಿರಲಿಲ್ಲ. ಸರ್ಕಾರ ಜನರ ಬಗ್ಗೆ ವಿಪಕ್ಷಗಳು ನೀಡುವ ಸಲಹೆಗಳನ್ನು ಪರಿಗಣಿಸುತ್ತಿಲ್ಲ. ಬಿಜೆಪಿಯಿಂದ 25 ಸಂಸದರಿದ್ದರೂ ರಾಜ್ಯದ ಪರವಾಗಿ ಪ್ರಧಾನಿ ಬಳಿ ಮಾತನಾಡುವುದಿಲ್ಲ. ಧೈರ್ಯವಿಲ್ಲದ ಸಂಸದರು ಹಾಗೂ ಸಿಎಂ ಜಿಎಸ್‍ಟಿ, ಪ್ರವಾಹ ಪರಿಹಾರ ಕೇಳುವುದಿಲ್ಲ. ತಾವು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

   ಮಾಜಿ ಮೇಯರ್ ಸಂಪತ್ ರಾಜ್ ನನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸುವ ಬಗ್ಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಹಿರಂಗವಾಗಿ ಹೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಮಾತನಾಡದೇ ತಮ್ಮ ಜೊತೆ ಬಂದು ಮಾತನಾಡುವಂತೆ ಹೇಳಿದ್ದಾರೆ. ನನ್ನ ಭೇಟಿಯಾದಾಗ ಅಖಂಡ ಶ್ರೀನಿವಾಸಮೂರ್ತಿ, ಸಂಪತ್ ರಾಜ್‍ರನ್ನು ಉಚ್ಛಾಟನೆ ಮಾಡಬೇಕು ಎಂದು ನನಗೆ ಹೇಳಿಲ್ಲ. ಈ ವಿಚಾರವಾಗಿ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ. ಬಿಜೆಪಿ, ಪೊಲೀಸರ ತಪ್ಪಿನಿಂದ ಡಿಜೆ ಹಳ್ಳಿಯ ಘಟನೆ ಆಗಿದೆ ಎಂದು ನಾನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದೇನೆ. ನವೀನ್ ಮನೆಯಲ್ಲಿಯೇ ಇದ್ದರೂ ಪೊಲೀಸರು ಏಕೆ ಬಂದಿಸಲಿಲ್ಲ? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಸಚಿವ ಅಶೋಕ್ ಎಸ್.ಡಿ.ಪಿ.ಐ ಕೈವಾಡವಿದೆ ಎಂದಿದ್ದರು. ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

    ಚಾರ್ಜ್‍ಶೀಟ್ ಎಂದ ಮಾತ್ರಕ್ಕೆ ಅದೇ ಕನ್‍ಕ್ಲ್ಯೂಡ್ ಅಲ್ಲ. ಗೋಲಿ ಬಾರ್ ಆಗಿದ್ದು ಯಾರ ಕಾಲದಲ್ಲಿ? ಗೋಲಿಬಾರ್ ಆಗಲು ಶಾಸಕರು ಕಾರಣನಾ? ತಪ್ಪು ಮುಚ್ಚಲು ಏನೇನೋ ಹೇಳುತ್ತಾರೆ.ಪ್ರವಾಹದಿಂದ ಸಾಯುವವರನ್ನು ಕೇಳುವವರಿಲ್ಲ. ಆರ್ ಆರ್ ನಗರದಲ್ಲಿ ಪ್ರಚಾರ ಮಾಡಿದರೆ ಜನ ನಂಬುತ್ತಾರೆಯೇ? ಯಡಿಯೂರಪ್ಪ, ಮಗ ಎಲ್ಲಾ ಹೋಗಿ ಕುಳಿತುಕೊಳ್ಳಲಿ. ಆರ್.ಟಿ.ಜಿ.ಎಸ್ ನಲ್ಲಿ ಲಂಚ ತೆಗೆದುಕೊಂಡದ್ದನ್ನು ಜನರಿಗೆ ಹೇಳುತ್ತೇವೆ. ಏನೇ ಆದರೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಶುಕ್ರವಾರ ಮೆರವಣಿಗೆ ನೋಡಿದ್ದೇನೆ. ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ಬಿಜೆಪಿಯವರು ಸೋಶಿಯಲ್ ಡಿಸ್ಟೆನ್ಸ್ ಮಾಡಿದ್ದಾರೆಯೇ? ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವೆ. ನಾನು, ಕುಸುಮಾ, ಆಕೆಯ ತಂದೆ ಮೂರು ಜನ ಹೋಗಿದ್ದೆವು. ಡಿಕೆ ಬರಲಿ ಎಂದು ಕುಳಿತಿದ್ದು, ಅದು ತಪ್ಪಾ? ಹೆಣ್ಣು ಮಕ್ಕಳನ್ನು ಹೆದರಿಸಲು ಹಾಗೆ ಮಾಡಿದ್ದಾರೆ. ನನ್ನ ಹೆಸರು ಎಫ್.ಐಆರ್ ನಲ್ಲಿ ಇಲ್ಲ. ಅನಾಮಿಕ ಎಂದು ಹಾಕಿದ್ದಾರೆ. ನಾನು ಅನಾಮಿಕನಾ? ಪೊಲೀಸರನ್ನು ದುರುಪಯೋಗ ಮಾಡುತ್ತಿದ್ದಾರೆ. ಡಿವೈಎಸ್‍ಪಿಗೆ ಪೋಲೀಸ್ ಕೆಲಸ ಮಾಡದಂತೆ ಹೇಳಿದ್ದೇನೆ. ನಾನು ಬಂದದ್ದು 11:45 ಆದರೆ 11:15 ಗಂಟೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಕುಸುಮಾಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಉಪಮುಖ್ಯಮಂತ್ರಿ ಕಾರಜೋಳ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಮಂತ್ರಿನೇ ಹೋಗಬೇಕು ಎಂದು ಹೇಳುವುದಿಲ್ಲ. ಕೊರೋನ ಇದ್ದಾಗ ಹೋಗಿ ಎಂದು ಹೇಳುವುದಿಲ್ಲ. ಬೆಂಗಳೂರಿನಲ್ಲಿ ಕೊರೋನ ಜಾಸ್ತಿ ಇದೆ. ಅಲ್ಲಿ ಹೋಗಿ ಕುಳಿತು ಕೆಲಸ ಮಾಡಲಿ. ಕಂದಾಯ ಸಚಿವರು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಬಡವರ ಬಗ್ಗೆ ಕಾಳಜಿ ಇದ್ದರೆ ಇಂದಿರಾ ಕ್ಯಾಂಟೀನ್ ನಡೆಸಲಿ. 18 ಕೋಟಿಗೆ ಯಾರಾದರೂ ಇಂದಿರಾ ಕ್ಯಾಂಟೀನ್ ಮುಚ್ಚುತ್ತಾರೆಯೇ? ಅಳುವುದು, ಅಸಹಾಯಕತೆ ಪ್ರದರ್ಶನ ಪ್ರಜಾಪ್ರಭುತ್ವದಲ್ಲಿ ಅವಶ್ಯಕತೆ ಇಲ್ಲ. ವಯಸ್ಸು, ಕರೋನ ನೆಪ ಹೇಳುತ್ತಾರೆ. ವಯಸ್ಸು ಆದವರು ರಾಜೀನಾಮೆ ನೀಡಲಿ. ಜನ ನೀವೇ ಇರಿ ಎಂದು ಹೇಳುವುದಿಲ್ಲ ಎಂದು ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link