ಆಗ್ನೇಯ ಕ್ಷೇತ್ರ : ಬಿಜೆಪಿ ಬಂಡಾಯ ಜೆಡಿಎಸ್‍ಗೆ ವರ

ತುಮಕೂರು

   ಆಗ್ನೆಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದಿಂದ ಮತ ವಿಭಜನೆಯಾಗಲಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

   ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಕಣಕ್ಕಿಳಿದಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರು ಕಳೆದ ಆರು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಪದವೀಧರರ, ಶಿಕ್ಷಕರ ಸಮಸ್ಯೆ ಪರ ಧ್ವನಿ ಎತ್ತಿ ಸರಕಾರದ ಮಟ್ಟದಲ್ಲಿ ಹೋರಾಡುತ್ತಾ ಬಂದಿದ್ದಾರೆ.

   ಇವರ ಗೆಲುವಿಗೆ ಹಾಲಿ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ವರವಾಗಲಿದ್ದು, ವೀರಶೈವ-ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆಂದು ಹೇಳಿ ಬಿಜೆಪಿ ವಂಚಿಸಿದ್ದು, ವೀರಶೈವ ಮತಗಳು ಕಮಲ ಪಕ್ಷಕ್ಕೆ ವಿರುದ್ಧವಾಗಲಿವೆ. ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ-ಜನತಾದಳ ನಡುವೆಯೇ ಪೈಪೋಟಿ ಹೊರತು ಕಾಂಗ್ರೆಸ್ ಪ್ರಾತಿನಿಧ್ಯವೇ ಇಲ್ಲ. ಜೆಡಿಎಸ್ ದಾವಣಗೆರೆ, ಚಿತ್ರದುರ್ಗ, ತುಮಕೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಕೋಲಾರ-ಚಿಕ್ಕಬಳ್ಳಾಪುರ ಮೂಲದವರ ಪೈಕಿ ಚೌಡರೆಡ್ಡಿ ಒಬ್ಬರೆ ಇರುವುದು ಗೆಲುವಿಗೆ ಪೂರಕ ಅಂಶಗಳಾಗಿವೆ ಎಂದರು.

ಕ್ಷೇತ್ರ ನಿರ್ಲಕ್ಷ್ಯಿಸಿಲ್ಲ : ನಿರಂತರ ಒಡನಾಟ

   ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್.ಚೌಡರೆಡ್ಡಿ ತೂಪಲ್ಲಿ ಮಾತನಾಡಿ, ಪದವೀಧರ ಕ್ಷೇತ್ರ ವ್ಯಾಪ್ತಿಗೆ 32 ತಾಲೂಕುಗಳು ಬರಲಿದ್ದು, 1.10 ಲಕ್ಷ ಪದವೀಧರ ಮತದಾರರಿದ್ದಾರೆ. ಗೆದ್ದ ಬಳಿಕ ಕ್ಷೇತ್ರವನ್ನು ನಿರ್ಲಕ್ಷಿಸಿದ್ದೇನೆಂಬ ಅಪವಾದ ಸುಳ್ಳು. ನಾನು ಎಂಎಲ್ಸಿ ಆದಾಗಿನಿಂದಲೂ ಐದು ಜಿಲ್ಲೆಯ ಕ್ಷೇತ್ರದ ಪದವೀಧರರು, ಶಿಕ್ಷಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಇವರ ಸಮಸ್ಯೆಗಳ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ಖಾಸಗಿ ಶಿಕ್ಷಕರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಪರಿಹಾರಕ್ಕಾಗಿ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ ಸೇರಿ ಒತ್ತಾಯಿಸುವುದು ಸೇರಿದಂತೆ ಶಾಸಕರ ಭವನದಲ್ಲಿ ನಿತ್ಯ ಕಚೇರಿ ತೆರೆದು ದೂರುಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ.

   ಸಾಮಾನ್ಯ ರೈತನ ಮಗನನ್ನು ಎಂಎಲ್ಸಿ ಅಧಿಕಾರ ಸ್ಥಾನಕ್ಕೇರಿಸಿದ ಕ್ಷೇತ್ರದ ಮತದಾರರಿಗೆ, ಪಕ್ಷಕ್ಕೆ ಆಭಾರಿಯಾಗಿದ್ದೇನೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿ ಸೇರಿದಂತೆ ಪದವೀಧರರು, ಶಿಕ್ಷಕರ ಹಿತಕಾಯಲು ಈ ಬಾರಿ ಕ್ಷೇತ್ರದ ಪ್ರಬುದ್ಧ ಮತದಾರರು ಜೆಡಿಎಸ್‍ಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

    ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆರ್.ಚೌಡರೆಡ್ಡಿ ತೂಪಲ್ಲಿ ಅವರು ಸೌಮ್ಯ ಸ್ವಭಾವದವರು. ಸರಳವಾಗಿ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುತ್ತಾ ಬಂದವರು. ಯಾವುದೇ ಲೋಪಗಳಿದ್ದರೂ ಸರಿಪಡಿಸಿಕೊಂಡು ಪದವೀಧರ ಕ್ಷೇತ್ರದ ಮತದಾರರ ಸಮಸ್ಯೆಗೆ ಸ್ಪಂದಿಸಲಾಗುವುದು. ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕೆಂದರು.

    ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಎಸ್‍ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೇವೇಗೌಡ, ಗಂಗಣ್ಣ, ಚೆಲುವರಾಜು, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್, ತಾಹಿರಬಾನು, ವಕ್ತಾರ ಮಧು ಮತ್ತಿತರ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link