ಜಿಡಿಪಿ ಕುಸಿತಕ್ಕೆ ಕೇಂದ್ರದ ದುರಾಡಳಿತವೇ ಕಾರಣ : ಸಿದ್ದರಾಮಯ್ಯ

ಹುಬ್ಬಳ್ಳಿ

    ದೇಶದ ತ್ರೈಮಾಸಿಕ ಜಿಡಿಪಿ ಮಹಾಕುಸಿತಕ್ಕೆ ಕೇಂದ್ರ ಸರ್ಕಾರದ ದುರಾಡಳಿತವೇ ಕಾರಣ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು. ನಗರದ ಕಾರವಾರ ರಸ್ತೆಯಲ್ಲಿಂದು ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರ, ಮಾಜಿ ಶಾಸಕರ, ಸಚಿವರ, ಮಾಜಿ ಸಚಿವರ ಹಾಗೂ ವಿವಿಧ ಪಕ್ಷದ ವಿವಿಧ ಘಟಕಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

    ದೇಶದ ಜಿಡಿಪಿ ಶೇ.23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಆದರೆ, ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳು ಹೇಳುತ್ತಿವೆ. ಆರ್‍ಬಿಐ ಗವರ್ನರ್‍ರಿಂದ ಹಿಡಿದು ಆರ್ಥಿಕ ಸಲಹೆಗಾರರು, ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ. ಈಗ ಕುರುಡು-ಕಿವುಡು ಆಗಿದ್ದ ಸರ್ಕಾರ ಈಗ ಕೊರೋನಾಕ್ಕಾಗಿ ರೋದಿಸುತ್ತಿದೆ ಎಂದು ತಿಳಿಸಿದ್ದಾರೆ.

    2015ರಲ್ಲಿ ಜಿಡಿಪಿ ಅಂದಾಜು ಮಾಡಿದ ಮೂಲ ವರ್ಷವನ್ನು 2004-05 ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ-ಅಂಶಗಳನ್ನು ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಕೊರೊನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಜಾಗಟೆ ಬಾರಿಸಲು, ದೀಪ ಹಚ್ಚಲು ಹೇಳುವುದು ಕೊರೊನಾ ಮಾರಿಯನ್ನು ಸರ್ಕಾರ ಎಷ್ಟು ಗಂಭೀರವಾಗಿ ಎನ್ನುವುದಕ್ಕೆ ಸಾಕ್ಷಿಯಾಗಿದೆ.

    ಲಾಕ್‍ಡೌನ್ ಅಗತ್ಯವಿತ್ತು ನಿಜ. ನಮ್ಮ ಪಕ್ಷ ಕೂಡ ಅದನ್ನು ಬೆಂಬಲಿಸಿತ್ತು. ಆದರೆ, ಅವೈಜ್ಞಾನಿಕವಾಗಿ, ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್‍ಡೌನ್ ಜಾರಿಗೊಳಿಸಿದ್ದ ಪರಿಣಾಮವಾಗಿ ಅದರಿಂದ ಲಾಭವಾಗಲಿಲ್ಲ, ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನ ಮಂತ್ರಿಯವರೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‍ಟಿಯ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಸಚಿವರು ಕೂಡ ಕಾರಣ ಎಂದು ಅವರು ದೇಶದ ಮುಂದೆ ಮೊದಲು ತಪೆಫೋಪ್ಪಿಕೊಳ್ಳಬೇಕು. ರೋಗದ ಕಾರಣ ತಿಳಿಯದೆ ಔಷಧಿ ಕೊಟ್ಟರೆ ರೋಗ ಗುಣವಾಗಲಾರದು ಎಂದಿದ್ದಾರೆ.

   ಶಾಸಕ ಅಬ್ಬಯ್ಯ ಪ್ರಸಾದ್, ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಸಚಿವ ವಿನಯ ಕುಲಕರ್ಣಿ, ಜಮೀರ್ ಅಹ್ಮದ್, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಮಾನೆ, ಹುಬ್ಬಳ್ಳಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷರು, ಗ್ರಾಮಾಂತರ ಅಧ್ಯಕ್ಷರಾದ ಅನೀಲ ಪಾಟೀಲ, ಮುಖಂಡರಾದ ತಾರಾದೇವಿ ವಾಲಿ, ಪುಷ್ಪಾ ಅರಳಿಕಟ್ಟಿ, ಅಕ್ಕಮ್ಮಾ ಕಂಬಳಿ, ಬಸೀರ್ ಅಹ್ಮದ್ ಗುಡಮಾಲೆ, ಮೋಹನ. ಹೊಸಮನಿ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link