ತುಮಕೂರು
ಕೊರೊನಾ, ದುಬಾರಿ ಬೆಲೆ ಏರಿಕೆಯ ನಡುವೆಯೆ ಆಯುಧಪೂಜೆ, ವಿಜಯದಶಮಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದ್ದು, ವಾಣಿಜ್ಯ ರಸ್ತೆಯಲ್ಲಿ ಹಬ್ಬದ ಸಾಮಗ್ರಿ ಬಟ್ಟೆ ಬರೆ ಖರೀದಿಗೆ ಜನಜಂಗುಳಿ ಕಂಡುಬಂತು.
ಅ.25ರಂದು ಆಯುಧಪೂಜೆ, 26ರಂದು ವಿಜಯದಶಮಿ ಹಬ್ಬವಿದ್ದು, ದಸರಾ ಕೊನೆಯ ಎರಡು ದಿನದ ಈ ಹಬ್ಬಕ್ಕೆ ಜಿಲ್ಲಾ ಕೇಂದ್ರ ತುಮಕೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜನರು ಸಡಗರದ ಸಿದ್ಧತೆ ನಡೆಸುತ್ತಿದ್ದುದು ಕಂಡು ಬಂತು. ವಿಶೇಷವಾಗಿ ಆಯುಧಪೂಜೆಗೆ ಮನೆ, ಕಚೇರಿ, ವಾಹನ, ಯಂತ್ರೋಪಕರಣಗಳನ್ನು ತೊಳೆದು ಅಲಂಕರಿಸಿ ಪೂಜಿಸುವುದು ಸಂಪ್ರದಾಯವಾದ್ದರಿಂದ ಬಹುತೇಕರು ಆ ಕಾರ್ಯದಲ್ಲಿ ನಿರತರಾಗಿದ್ದುದು ಕಂಡುಬಂತು.
ಸರಕಾರಿ ಕಚೇರಿಗಳಲ್ಲಿ ಶುಕ್ರವಾರವೆ ಪೂಜೆ: ಸರಕಾರಿ ಕಚೇರಿ, ಬ್ಯಾಂಕ್‍ಗಳಿಗೆ 4ನೇ ಶನಿವಾರ ರಜಾ ದಿನವಾದ್ದರಿಂದ ಶುಕ್ರವಾರವೆ ಕಚೇರಿಯನ್ನು ಅಲಂಕರಿಸಿ ಅಧಿಕಾರಿಗಳ ವಾಹನಗಳಿಗೆ ಪೂಜೆ ನೆರವೇರಿಸಿ ಸಿಹಿ ಹಂಚಿ, ಹಬ್ಬಕ್ಕೆ ಪರಸ್ಪರ ಶುಭಾಶಯ ಕೋರಿದ ದೃಶ್ಯ ಕಂಡು ಬಂತು. ಖಾಸಗಿ ಸಂಸ್ಥೆಗಳು, ಕಚೇರಿಗಳಲ್ಲೂ ಶನಿವಾರ ಹಬ್ಬದ ತಯಾರಿಗಳು ಕಂಡುಬಂದವು. ಕೋವಿಡ್ ಆರ್ಥಿಕ ಹೊಡೆತ ಖಾಸಗಿ ಕಂಪನಿಗಳ ಸಿಬ್ಬಂದಿಗೆ ಹಬ್ಬದ ಬೋನಸ್‍ಗಳಿಗೆ ಕಡಿತ ಮಾಡಿಸಿದೆ.
ಮಾರುಕಟ್ಟೆಯಲ್ಲಿ ಜನಜಂಗುಳಿ:
ನಗರದ ಹೊರವಲಯದ ಹೂ-ಹಣ್ಣು ಮಾರುಕಟ್ಟೆ, ಜೆ.ಸಿ.ರಸ್ತೆ, ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಸೋಮೇಶ್ವರ ಪುರಂ ಭಾಗದಲ್ಲಿ ಹೂ ಹಣ್ಣು, ಸಿಹಿತಿನಿಸುಗಳ ಖರೀದಿಗೆ ಜನಜಂಗುಳಿ ಸೇರಿದ್ದುದು ಕಂಡು ಬಂತು. ಮಾಸ್ಕ್ ಧರಿಸಿಯೆ ಮಾರಾಟ, ಖರೀದಿ ಮಾಡಬೇಕೆಂದು ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿದ್ದರೂ, ಕೆಲವರೂ ಮಾಸ್ಕ್ ರಹಿತವಾಗಿ ಹಬ್ಬದ ಸಾಮಗ್ರಿ ಖರೀದಿಯಲ್ಲಿ ನಿರತರಾಗಿದ್ದುದು ಕಂಡುಬಂತು.
ಹೂವು, ಹಣ್ಣು, ತರಕಾರಿ ದುಬಾರಿ:
ಬಿಡಿ ಹೂ ಕೆಜಿಗೆ 200 ರಿಂದ 400 ರೂ. ವರೆಗೆ ಇದ್ದರೆ, ಸೇವಂತಿಗೆ ಮಾರೊಂದಕ್ಕೆ 100 ರೂ.ಗಳಿಂದ 200 ರೂ. ಬಟನ್ಸ್ 80 ರಿಂದ 120, ಕಾಕಡ 100-120 ರೂ. ಪ್ರತಿ ಮಾರಿಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಹಣ್ಣುಗಳ ಪೈಕಿ ಬಾಳೆಹಣ್ಣು 70 ರಿಂದ 100 ರೂ. ಕೆಜಿಗೆ ಏರಿಕೆಯಾಗಿದ್ದರೆ, ಸೇಬು 120 ರೂ.ಗಳಿಂದ 300 ರೂ., ಮೂಸಂಬಿ 60 ರೂ.ಗಳಿಂದ 150ರವರೆಗೆ, ದಾಳಿಂಬೆ 100 ರಿಂದ 200 ರೂ., ದೃಷ್ಟಿ ನಿವಾರಣೆಗೆ ಬಳಸುವ ಬೂದಗುಂಬಳಕಾಯಿ ಕೆ.ಜಿ. ಲೆಕ್ಕದಲ್ಲಿ ಕನಿಷ್ಠ 100 ರೂ.ಗಳಿಂದ 200-250 ರೂ.ವರೆಗೆ ಗಾತ್ರದ ಆಧಾರದಲ್ಲಿ ಬಿಕರಿಯಾಗುತ್ತಿತ್ತು. ಬಾಳೆಕಂದು ಒಂದು ಜೊತೆಗೆ 25 ರಿಂದ 50 ರೂ. ಮಾವಿನ ಸೊಪ್ಪು ಒಂದು ಕಂತೆಗೆ 20ರೂ. ಹೇಳುತ್ತಿದ್ದರು. ತರಕಾರಿಗಳ ದರವೂ ದುಬಾರಿಯಾಗಿದ್ದು, ಕ್ಯಾರೆಟ್ ಕೆ.ಜಿ.ಗೆ 90, ಉರುಳಿಕಾಯಿ 50. ಬೀಟ್‍ರೂಟ್ 60, ಪ್ರಮುಖವಾಗಿ ಈರುಳ್ಳಿ ದರ ಕೆಜಿಗೆ 100 ರಿಂದ 150 ರೂ.ಗೆ ಏರಿಕೆಯಾಗಿರುವುದು ಜನಸಾಮಾನ್ಯರ ಕಣ್ಣಲ್ಲಿ ನಿಜಕ್ಕೂ ಕಣ್ಣೀರು ತರಿಸುವಂತಾಗಿದೆ.
ಏರಿಕೆಯಾದ ಸಿಹಿತಿನಿಸುಗಳು:
ಈ ಹಬ್ಬಕ್ಕೆ ವಿಶೇಷವಾಗಿ ಕೆಲಸ ಮಾಡುವ ಸಿಬ್ಬಂದಿಗೆ, ಅತಿಥಿಗಳಿಗೆ ನೀಡಲು ಸ್ವೀಟ್ ಬಾಕ್ಸ್‍ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಸಾಮಾನ್ಯ ಸ್ವೀಟ್ಸ್ ಕೆ.ಜಿ.ಗೆ 300 ರೂ. ಸಿಹಿಬೂಂದಿ ಕೆಜಿ 200 ರೂ., ಸೋಂ ಪಪ್ಪಡಿ ವಿಶೇಷ ಬರ್ಫಿಗಳು ಕೆ.ಜಿ.ಗೆ 400 ರಿಂದ 700 ರೂ. ನಿಗದಿಯಾಗಿದ್ದುದು ಕಂಡು ಬಂತು.
ಗ್ರಾಹಕರ ಸೆಳೆಯಲು ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಆಫರ್‍ಗಳು: ಮೊಬೈಲ್, ಟಿವಿ, ವಾಷಿಂಗ್‍ಮೆಷಿನ್ ಸೇರಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಬ್ಬದ ಹಿನ್ನೆಲೆಯಲ್ಲಿ ಆಫರ್‍ಗಳು, ಡಿಸ್ಕೌಂಟ್‍ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದುದು ಕಂಡು ಬಂತು. ಸಣ್ಣ ಅಂಗಡಿಗಳಿಗಿಂತಲೂ ಹೆಚ್ಚಾಗಿ ದೊಡ್ಡ ಶಾಪಿಂಗ್ ಮಾಲ್‍ಗಳಲ್ಲಿ ಹೊಸ ಬಟೆ ಖರೀದಿಗೆ ಜನ ಮುಗಿಬಿದ್ದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ