ಕಾಡುಗೊಲ್ಲರನ್ನು ದಿಕ್ಕು ತಪ್ಪಿಸುವ ಹುನ್ನಾರ ಸಲ್ಲದು

ಚಿತ್ರದುರ್ಗ:

    ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯ ಬಿಜೆಪಿ.ಅಭ್ಯರ್ಥಿಗೆ ಬೆಂಬಲ ಸೂಚಿಸಲಿದೆ ಎಂದು ಮೀಸೆ ಮಹಾಲಿಂಗಪ್ಪ ಹೇಳಿರುವುದನ್ನು ಕೆ.ಪಿ.ಸಿ.ಸಿ. ಮಾಧ್ಯಮ ವಿಶ್ಲೇಷಕ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ತೀವ್ರವಾಗಿ ಖಂಡಿಸಿದರು.

     ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾಗ ನಮ್ಮ ಜನಾಂಗದ ಅನೇಕರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನು ನೇಮಿಸಿದರು. ಜಯಮ್ಮ ಬಾಲರಾಜ್‍ರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸಿ ಕಾಡುಗೊಲ್ಲ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ.

    ಮೊದಲಿನಿಂದಲೂ ನಮ್ಮ ಜನಾಂಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದೆ. ಆದರೆ ಜಿಲ್ಲಾ ಯಾದವ ಗೊಲ್ಲ ಸಮಾಜದ ಅಧ್ಯಕ್ಷರು ಕಾಡುಗೊಲ್ಲರು ಈ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆಂದು ಹೇಳಿ ನಮ್ಮ ಜನಾಂಗವನ್ನು ದಿಕ್ಕು ತಪ್ಪಿಸುತ್ತಿದ್ದಾರಲ್ಲದೆ. ಕಾಡುಗೊಲ್ಲ ಜನಾಂಗಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಸಮಾಜದವರು ಯಾವುದೇ ಕಾರಣಕ್ಕೂ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯನ್ನು ಬೆಂಬಲಿಸಬಾರದೆಂದು ಮನವಿ ಮಾಡಿದರು.

    ರಾಜ್ಯದಲ್ಲಿರುವ ಅನೇಕ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಆದ್ದರಿಂದ ಮೀಸೆ ಮಹಾಲಿಂಗಪ್ಪನವರ ಹೇಳಿಕೆ ಅವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು, ಕಾಡುಗೊಲ್ಲ ಜನಾಂಗಕ್ಕೆ ಸಂಬಂಧಿಸಿದ್ದಲ್ಲ. ವಿಧಾನಸಭೆ ಉಪ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿ ಕಾಡುಗೊಲ್ಲ ಅಭಿವೃದ್ದಿ ನಿಗಮ ಘೋಷಿಸಿರುವುದು ಮತಗಳನ್ನು ಸೆಳೆಯುವುದ ಕ್ಕಾಗಿಯೇ ವಿನಃ ಕಾಡುಗೊಲ್ಲರ ಹಿತಕ್ಕಾಗಿ ಅಲ್ಲ. ಮುಂದೆ ನಿಗಮ ಸ್ಥಾಪಿಸುತ್ತಾರೆಂಬುದು ಖಾತ್ರಿಯಿಲ್ಲ. ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ಕಾಡುಗೊಲ್ಲ ಜನಾಂಗದ ಐದಾರು ಮಂದಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಕಾಂಗ್ರೆಸ್ ಪಕ್ಷ. ಒಟ್ಟಾರೆ ನಮ್ಮ ಸಮಾಜದ ಬೆನ್ನಿಗೆ ಕಾಂಗ್ರೆಸ್ ನಿಂತಿರುವುದರಿಂದ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಕಾಡುಗೊಲ್ಲ ಜನಾಂಗ ಬಿಜೆಪಿ.ಯನ್ನು ಬೆಂಬಲಿಸುವುದಿಲ್ಲ ಎಂದು ಮಹಾಲಿಂಗಪ್ಪ ಹೇಳಿಕೆಗೆ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ತಿರುಗೇಟು ನೀಡಿದರು.

    ಗೊಲ್ಲ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದನ್ನು ಇಲ್ಲಿಯವರೆಗೂ ಬಿಜೆಪಿ.ಯವರು ಮೂಲೆಗೆ ತಳ್ಳಿರುವುದಾದರೂ ಏಕೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಿಜವಾಗಿಯೂ ಕಾಡುಗೊಲ್ಲರ ಬಗ್ಗೆ ಕಾಳಜಿಯಿದ್ದಿದ್ದರೆ ನಮ್ಮ ಜನಾಂಗವನ್ನು ಎಸ್.ಟಿ.ಗೆ ಸೇರಿಸಿ ಚುನಾವಣೆಯಲ್ಲಿ ಮತ ಕೇಳಬೇಕಿತ್ತು. ಇದೊಂದು ನಾಟಕೀಯ ಎಂದು ವ್ಯಂಗ್ಯವಾಡಿದರು.

    ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್ ಮಾತನಾಡಿ ರಾಜ್ಯದಲ್ಲಿ ಸುಮಾರು 45 ಲಕ್ಷದಷ್ಟು ಗೊಲ್ಲ ಜನಾಂಗವಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ನಮ್ಮ ಜನಾಂಗವನ್ನು ಪರಿಶಿಷ್ಟ ವರ್ಗಕ್ಕಲ್ಲ. ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ. ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಡುಗೊಲ್ಲ ಜನಾಂಗ ಕಾಂಗ್ರೆಸ್‍ಗೆ ಬೆಂಬಲಿಸಲಿದೆ. ಮಹಾಲಿಂಗಪ್ಪನವರ ಮನವಿಗೆ ನಮ್ಮ ಜನಾಂಗ ಕಿಮ್ಮತ್ತು ನೀಡಬಾರದೆಂದು ಕೋರಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಕಾಂಗ್ರೆಸ್ ಪಕ್ಷ ಕಾಡುಗೊಲ್ಲ ಜನಾಂಗಕ್ಕಾಗಿ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ. ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಯಾದವ ಗೊಲ್ಲ ಜನಾಂಗದ ಅಧ್ಯಕ್ಷ ಮಹಾಲಿಂಗಪ್ಪ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸಂಪೂರ್ಣವಾಗಿ ಬಿಜೆಪಿ.ಅಭ್ಯರ್ಥಿಗೆ ಬೆಂಬಲಿಸುವುದಾಗಿ ಹೇಳಿರುವುದು ಅವರ ಸ್ವಂತ ವಿಚಾರವೇ ಹೊರತು ಗೊಲ್ಲ ಜನಾಂಗದ ಅಭಿಪ್ರಾಯವಲ್ಲ ಎಂದು ಖಂಡಿಸಿದರು.

    ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಪ್ಪ, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಓ.ಬಿ.ಸಿ.ಮೋರ್ಚ ಜಿಲ್ಲಾಧ್ಯಕ್ಷ ಮನೋಹರ್, ಹಿಂದುಳಿದ ವರ್ಗಗಳ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಕೆ.ಪಿ.ಸಿ.ಸಿ.ಸದಸ್ಯ ಮಧುಗೌಡ, ಮಂಜುನಾಥ್, ಮಹಡಿ ಶಿವಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link