ಶಿರಾ :
ಈ ದೇಶದಲ್ಲಿ ಕಳೆದ 6 ವರ್ಷಗಳಿಂದಲೂ ಪ್ರಧಾನಿಯಾದ ನರೇಂದ್ರ ಮೋದಿ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರಗಳು ರಾಜ್ಯದ ಜನ ಸಾಮಾನ್ಯರಿಗೆ ನೀಡಿದ ಭರವಸೆಯ ಆಶಾ ಗೋಪುರಗಳೆಲ್ಲವೂ ಕಳಚಿ ಬಿದ್ದು, ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕುಟುಕಿದರು.
ಶಿರಾ ನಗರದ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ಕಚೇರಿಯಲ್ಲಿ ಗುರುವಾರ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಕೇಂದ್ರ-ರಾಜ್ಯ ಬಿಜೆಪಿ ಪಕ್ಷ ನೇತೃತ್ವದ ಸರ್ಕಾರಗಳ ದೌರ್ಬಲ್ಯಗಳ ವಿರುದ್ದ ಹರಿಹಾಯ್ದರು.
ಇದೊಂದು ಅನೈತಿಕ ಸಂಬಂಧದ ಸರ್ಕಾರ. ರಾಜ್ಯದ ಜನರ ಬೆಂಬಲ ಪಡೆಯಲಾಗದೆ 15 ಮಂದಿ ಕಾಂಗ್ರೆಸ್ ಶಾಸಕರನ್ನು ಕದ್ದೊಯ್ದು ರಚಿಸಿದ ಸರ್ಕಾರವಿದು. 2008 ರಿಂದಲೆ ಆಪರೇಷನ್ ಕಮಲ ಆರಂಭಗೊಂಡಿತ್ತು. ಈ ಆಪರೇಷನ್ ಕಮಲದ ಜನಕ ಯಡಿಯೂರಪ್ಪ. ಜನರ ಆಶೀರ್ವಾದ ಪಡೆದು ಬಂದ ಸರ್ಕಾರ ಇದಲ್ಲ. ಜನರಿಗೆ ಹಣ, ಹೆಂಡದ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಸರ್ಕಾರಕ್ಕೆ ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರ ಸೂರಿಗಾಗಿ ಘೋಷಣೆ ಮಾಡಿದ್ದ ಐದು ಲಕ್ಷ ರೂ.ಗಳ ಸಹಾಯ ಧನದ ಪೈಕಿ ಒಂದು ಪೈಸೆಯನ್ನೂ ನೀಡಲಾಗಿಲ್ಲ. 2,37,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರೂ ಒಂದು ಪೈಸೆಯ ಅನುದಾನವನ್ನೂ ಅಭಿವೃದ್ಧಿ ಕೆಲಸಗಳಿಗೆ ನೀಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ನೀಡಿದ ಅನುದಾನದ ಕಾಮಗಾರಿಗಳನ್ನು ಮುಂದುವರೆಸಿರುವ ಈ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರ್ಸೆಂಟೇಜ್ ಪಡೆದುಕೊಂಡು ಕಾಮಗಾರಿಗಳನ್ನು ನೀಡುತ್ತಿದೆ. ಪಿ.ಪಿ.ಇ. ಕಿಟ್ ಹಾಗೂ ವೆಂಟಿಲೇಟರ್ ಖರೀದಿಯಲ್ಲಂತೂ ವ್ಯಾಪಕ ಭ್ರಷ್ಟಾಚಾರವೇ ನಡೆದಿದೆ. 2,000 ಕೋಟಿ ರೂ.ಗಳನ್ನು ಬರೀ ಕೋವಿಡ್ ಚಿಕಿತ್ಸೆಯ ನೆಪದಲ್ಲಿಯೇ ಲೂಟಿ ಮಾಡಲಾಗಿದೆ. ನಮ್ಮ ಸರ್ಕಾರವಿದ್ದಾಗ ಸಾಲ ಮಾಡಿದ್ದಕ್ಕೆ ಸಾಲ ಮಾಡಿ ಹೋಳಿಗೆ ತಿನ್ನಿಸುತ್ತಾರೆ ಎಂದು ಟೀಕಿಸಿದ್ದ ಯಡಿಯೂರಪ್ಪ ಅವರು, ಇದೀಗ 1,36,000 ಕೋಟಿ ರೂ.ಗಳ ಸಾಲ ಮಾಡಿದ್ದಾರೆ. ಸಾಲ ಮಾಡಿ ಜನತೆಗೆ ಯಡಿಯೂರಪ್ಪ ಈಗ ಏನನ್ನು ತಿನ್ನಿಸುತ್ತಿದ್ದಾರೆ? ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷದ ಆಟ ನಡೆಯುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾದ ಟಿ.ಬಿ.ಜಯಚಂದ್ರ ಗೆಲುವು ಖಚಿತವಾಗಿದ್ದು ಕ್ಷೇತ್ರದ ಯುವಕರ ಉತ್ಸಾಹ ನಮಗೆ ಗೆಲುವಿನ ಸೂಚನೆಯನ್ನು ನೀಡಿಯಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಶಿರಾ ಹಾಗೂ ಆರ್.ಆರ್.ನಗರ ಈ ಎರಡೂ ಉಪ ಚುನಾವಣೆಗಳು ಕಾಂಗ್ರೆಸ್ ಪರವಾಗಲಿವೆ. ರಾಜ್ಯದ ಅಭಿವೃದ್ಧಿಯನ್ನೆ ಮರೆತು ಕೂತ ಬಿ.ಜೆ.ಪಿ. ಈಗಾಗಲೇ ಜನ ಬೆಂಬಲವನ್ನು ಕಳೆದುಕೊಂಡಿದೆ ಎಂದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಹೇಮಾವತಿ ನಾಲೆಯ ಅಗಲೀಕರಣಕ್ಕೆ ಕೋಟಿಗಟ್ಟಲೆ ಅನುದಾನ ನೀಡಲಾಗಿತ್ತು. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಜಿ.ಟಿ.ಪಿ. ಹೆಚ್ಚಾಯ್ತು. ಅದರ ಬೆನ್ನ ಹಿಂದೆಯೇ ಕೋವಿಡ್‍ನಿಂದ ಬಿ.ಜೆ.ಪಿ. ಪಾಪದ ಹಣವನ್ನು ಸಂಗ್ರಹಿಸಿತು. ಕಾಂಗ್ರೆಸ್ ಪಕ್ಷ ಎಂದೂ ಕೂಡ ಜಾತಿ, ಧರ್ಮವನ್ನು ನೋಡಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿಲ್ಲ. ಪಕ್ಷದ ಅಭ್ಯರ್ಥಿ ಜಯಚಂದ್ರ ಓರ್ವ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರ ಆಯ್ಕೆಗೆ ಜನ ಬೆಂಬಲ ಲಭ್ಯವಾಗಿದೆ ಎಂದರು.
ಎ.ಐ.ಸಿ.ಸಿ. ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿನ ಕಳೆದ ವರ್ಷದ ನೆರೆ ಹಾವಳಿಯಿಂದ 50,000 ಕೋಟಿ ರೂ. ನಷ್ಟವಾಯ್ತು. ಈ ಹಣವನ್ನು ನೀಡಿ ಎಂದು ಕೇಂದ್ರಕ್ಕೆ ಗೋಗರೆದರೂ ಕೂಡ ನೀಡಿದ್ದು 20,000 ಕೋಟಿ ರೂ. ಮಾತ್ರ. ಇಷ್ಟಾದರೂ ಈವರೆಗೂ ಒಂದು ಪೈಸೆಯ ಹಣ ಅಲ್ಲಿನ ಸಂತ್ರಸ್ತರಿಗೆ ಲಭ್ಯವಾಗಿಲ್ಲ. ಇಂತಹ ಸರ್ಕಾರಗಳನ್ನು ಜನ ಕ್ಷಮಿಸುವುದಿಲ್ಲ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಶಾಸಕರನ್ನು ವಾಮಮಾರ್ಗದಲ್ಲಿ ಕೊಂಡೊಯ್ದು ಅನೈತಿಕ ಸಂಬಂಧ ಮಾಡಿಕೊಂಡ ಸರ್ಕಾರಕ್ಕೆ ಕೋವಿಡ್ ಮಹಾಮಾರಿಯೆ ಕಾಮಧೇನು, ಕಲ್ಪವೃಕ್ಷವಾಗಿದ್ದು ಈ ಕೊರೋನಾದಿಂದಲೇ ಕೋಟಿ ಕೋಟಿ ರೂ.ಗಳ ಭ್ರಷ್ಟಾಚಾರಕ್ಕೂ ಕಾರಣವಾಗಿದೆ. ಶಿರಾ ಕ್ಷೇತ್ರದ ಅಭ್ಯರ್ಥಿ ಜಯಚಂದ್ರ ನೀರಾವರಿಯ ಬಗ್ಗೆ ಕಾಳಜಿ ಹೊಂದಿದವರು. ಅಭಿವೃದ್ಧಿಗೆ ಹಣ ತರುವ ನಿಸ್ಸೀಮರೂ ಆದ ಅವರ ಆಯ್ಕೆ ಖಚಿತ ಎಂದರು.
ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಮಾಜಿ ಸಚಿವರಾದ ಸಂತೋಷ್‍ಲಾಡ್, ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಂಸದ ಮುದ್ದ ಹನುಮೇಗೌಡ, ಶಾಸಕರಾದ ಡಾ.ಯತೀಂದ್ರ, ವೆಂಕಟರವಣಪ್ಪ, ಮಾಜಿ ಶಾಸಕ ಸಾ.ಲಿಂಗಯ್ಯ, ಕಲ್ಕೆರೆ ರವಿಕುಮಾರ್ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ