ತುಮಕೂರು :
ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಚುನಾವಣಾ ಮತದಾನವು ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 1 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ. ರಾಕೇಶ್ಕುಮಾರ್ ಅವರು ತಿಳಿಸಿದ್ದಾರೆ.
ಚುನಾವಣಾ ಮತದಾನಕ್ಕೆ ನಿಗದಿಯಾಗಿರುವ ಗಡುವಿನ 48 ಗಂಟೆಗೆ ಮುನ್ನ ಬಹಿರಂಗ ಪ್ರಚಾರ ಮುಕ್ತಾಯಗೊಳ್ಳಲಿದೆ. ನಂತರ ಯಾವುದೇ ರಾಜಕೀಯ ಪಕ್ಷಗಳು/ ಉಮೇದುವಾರರು/ ಕಾರ್ಯಕರ್ತರು ಅಥವಾ ಇತರರು ಯಾವುದೇ ಬಹಿರಂಗ ಚುನಾವಣಾ ಪ್ರಚಾರ ನಡೆಸತಕ್ಕದ್ದಲ್ಲ. ಗಡುವು ಮುಕ್ತಾಯದ ನಂತರ ಬಹಿರಂಗ ಪ್ರಚಾರ ಕೈಗೊಂಡಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 126 ರಡಿ 2 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡರಿಂದಲೂ ಶಿಕ್ಷಿಸಲ್ಪಡುತ್ತಾರೆ ಎಂದು ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು/ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಅವರು ತಿಳಿಸಿದ್ದಾರೆ.
ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ ಅಂದರೆ ನವೆಂಬರ್ 1 ರ ಸಂಜೆ 6 ಗಂಟೆಯ ನಂತರ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ ವಿಧಾನಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು/ ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರ ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಡುವಂತೆ ಅವರು ಆದೇಶಿಸಿದ್ದಾರೆ.
ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರು ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಡುವಂತೆ ಚುಣಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು ಸೂಕ್ತ ತಿಳುವಳಿಕೆ ನೀಡತಕ್ಕದ್ದು. ಚುನಾವಣಾ ಬಹಿರಂಗ ಪ್ರಚಾರದ ಅಂತಿಮ ಗಡುವಿನ ನಂತರ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರು ಶಿರಾ ವಿಧಾನಸಭಾ ಕ್ಷೇತ್ರದ ಒಳಗಡೆ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
