ಶಿರಾ ಉಪ ಚುನಾವಣೆ : ಶಾಂತಿಯುತ ಶೇ.82.31% ಮತದಾನ!

ಶಿರಾ :

      ಶಾಸಕ ಬಿ.ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದಾಗಿ ಅತ್ಯಂತ ಕುತೂಹಲಕ್ಕೆ ಎಡೆಯಾಗಿದ್ದ ಉಪ ಚುನಾವಣೆಯ ಮತದಾನ ಪ್ರಕ್ರಿಯೆಯು ನ.3 ರಂದು ಯಶಸ್ವಿಯಾಗಿ ನಡೆಯುವ ಮೂಲಕ ಉಪ ಸಮರಕ್ಕೆ ತೆರೆ ಎಳೆದಂತಾಗಿದೆ.

      ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 330 ಮತಗಟ್ಟೆಗಳಿದ್ದು, 1,10,265 ಪುರುಷ ಮತದಾರರು ಹಾಗೂ 1,05,419 ಮಹಿಳಾ ಮತದಾರರಿದ್ದು, ಒಟ್ಟು 2,15,494 ಮಂದಿ ಮತದಾರರು ಮತ ಚಲಾಯಿಸಬೇಕಿತ್ತು.
ಬೆಳಗ್ಗೆ 7 ಗಂಟೆಗೆ ಮತ ಚಲಾವಣೆಯ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೆ ಪ್ರತಿಯೊಂದು ಮತಗಟ್ಟೆಯ ಬಳಿಯೂ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ವಿಶೇಷವಾಗಿತ್ತು. ಪ್ರತಿಯೊಂದು ಮತಗಟ್ಟೆಯ ಮುಂಭಾಗದಲ್ಲೂ ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್‍ಗ್ಲೌಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.

      ಬೆಳಗ್ಗೆಯಿಂದ ಸರದಿಯ ಸಾಲಲ್ಲಿ ಮತದಾರರು ನಿಂತು ಮತ ಚಲಾಯಿಸಿದರೂ ಕೂಡ ಪ್ರತಿ ಮತಗಟ್ಟೆಗಳಲ್ಲೂ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲು ಅಂತರದ ಮಾರ್ಕ್‍ಗಳನ್ನು ನೆಲಹಾಸಿನಲ್ಲಿ ಗುರುತು ಮಾಡಲಾದ ಪರಿಣಾಮ ಮತದಾರರೂ ಅಂತರವನ್ನು ಕಾಯ್ದುಕೊಂಡು ಮತ ಚಲಾಯಿಸಿದರು. 

     ಬೆಳಗ್ಗೆ 11 ಗಂಟೆಗೆ ಕೊಟ್ಟಗ್ರಾಮದ ಮತಗಟ್ಟೆಯಲ್ಲಿ ಶೇ.25 ರಷ್ಟು, 11.30ಕ್ಕೆ ಮದಲೂರು ಗ್ರಾಮದ ಮತಗಟ್ಟೆಯಲ್ಲಿ ಶೇ.26, ಮಧ್ಯಾಹ್ನ 12 ಗಂಟೆಗೆ ಹುಳಿಗೆರೆ ಮತಗಟ್ಟೆಯಲ್ಲಿ ಶೇ.28 ರಷ್ಟು, ಬರಗೂರು ಮತಗಟ್ಟೆಯಲ್ಲಿ ಮಧ್ಯಾಹ್ನ 12.30ಕ್ಕೆ ಶೇ.38 ರಷ್ಟು ಮತದಾನವಾಗಿತ್ತು. ಇದೇ ಬರಗೂರು ಮತಗಟ್ಟೆಯಲ್ಲಿ 70 ವರ್ಷದ ಅಂಗವಿಕಲ ವೃದ್ಧೆಯೊಬ್ಬರು ತಮ್ಮ ಕುಟುಂಬದ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

      ಹೊಸಹಳ್ಳಿ ಮತಗಟ್ಟೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ. 48 ರಷ್ಟು, ಚಂಗಾವರ ಮತಗಟ್ಟೆಯಲ್ಲಿ ಮಧ್ಯಾಹ್ನ 2.30ಕ್ಕೆ ಶೇ. 68 ರಷ್ಟು ಮತದಾನವಾಗಿತ್ತು. ಬೇವಿನಹಳ್ಳಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಶೇ. 60 ರಷ್ಟು ಮತದಾನವಾದರೆ, ತಾವರೇಕೆರೆಯಲ್ಲಿ ಮಧ್ಯಾಹ್ನ 3.30ಕ್ಕೆ ಶೇ.65 ರಷ್ಟು ಮತದಾನವಾಗಿತ್ತು.
5.30 ರ ಹೊತ್ತಿಗೆ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಮತಗಟ್ಟೆಯಲ್ಲಿ 1190 ಮತಗಳ ಪೈಕಿ 1110 ಮತಗಳು ಚಲಾವಣೆಗೊಂಡಿದ್ದು ಶೇ. 92 ರಷ್ಟು ಗರಿಷ್ಠ ಮತದಾನ ನಡೆದಿತ್ತು.

      ಶಿರಾ ನಗರದ ಕೋಟೆ ಬಡಾವಣೆಯ 13ನೇ ವಾರ್ಡಿನ ಮತಗಟ್ಟೆಯಲ್ಲಿ ಸಂಜೆ 6 ಗಂಟೆಯ ಒಳಗೆ ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು ವೇಳೆ ಮೀರಿದ ನಂತರವೂ ಮತ ಚಲಾಯಿಸಿದ್ದು, ಸದರಿ ಮತಗಟ್ಟೆಯಲ್ಲಿ ಶೇ.81 ರಷ್ಟು ಮತದಾನವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap