ಮಧುಗಿರಿ : ಇಂದು ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ!!

ಮಧುಗಿರಿ : 

      ಬರೊಬ್ಬರಿ 26 ತಿಂಗಳ ನಂತರ ಪುರಸಭಾ ಸದಸ್ಯರು ರಾಜಕೀಯ ಏರುಪೇರಿನೊಂದಿಗೆ ಅಜ್ಞಾತವಾಸ ಅಂತ್ಯಗೊಳಿಸಿ ನ.4 ರ ಬುಧವಾರಂದು ಪ್ರಥಮ ಸಭೆ ನಡೆಸುವುದರ ಮೂಲಕ ಪುರಪಿತೃಗಳಾಗಲಿದ್ದು ಜನ ಸೇವೆಗೆ ಲಭ್ಯವಾಗಿ ಕಳೆಗುಂದಿರುವ ವಾರ್ಡ್‍ಗಳು ಅಭಿವೃದ್ಧಿ ಕಾಣಲಿವೆ.

      ಕಳೆದ 2018 ರ ಆ. 31 ರಂದು ಪಟ್ಟಣದ ಪುರಸಭೆಗೆ ಚುನಾವಣೆ ನಡೆದಿದ್ದು, 2018 ಸೆ.3 ರಂದು ಫಲಿತಾಂಶ ಪ್ರಕಟವಾಗಿತ್ತು. ಅದಾದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ರಾಜ್ಯ ಸರಕಾರ ಪ್ರಕಟಿಸಿತ್ತು. ಈ ಆದೇಶದ ಗೊಂದಲದಿಂದಾಗಿ ಕೆಲವರು ಈ ಮೀಸಲಾತಿಯು ಸರಿಯಿಲ್ಲ ಎಂದು ಪ್ರಶ್ನಿಸಿ ನ್ಯಾಯಾಂಗದ ಮೆಟ್ಟಿಲೇರಿದ್ದರಿಂದ ಪುರಸಭಾ ಸದಸ್ಯರು ಇದುವರೆವಿಗೂ ಪ್ರಥಮ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆಯೂ ನಡೆದಿರಲಿಲ್ಲ.

      ಕಳೆದ ಕೆಲ ತಿಂಗಳ ಹಿಂದೆಯಷ್ಟೆ ಉಚ್ಛ ನ್ಯಾಯಾಲಯವು ಮೀಸಲಾತಿ ಪಟ್ಟಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದರಿಂದ ನ. 4 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ನಡೆಯಲಿದೆ. ಮಧುಗಿರಿಯ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.

      ಪುರಸಭೆಗೆ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಎಲ್.ರಾಧಾನಾರಾಯಣ್ ಮತ್ತು ಉಪಾಧ್ಯಕ್ಷರಾಗಿ ಎಂ.ಪಿ.ಗಣೇಶ್ ಸೇವೆ ಸಲ್ಲಿಸಿದ್ದರು. ಇವರುಗಳ ನಂತರ 2018 ಸೆ. 6 ರಿಂದ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಗಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ ಹಾಗೂ ಡಾ.ಕೆ.ನಂದಿನಿದೇವಿ ಕಾರ್ಯ ನಿರ್ವಹಿಸಿದ್ದು, ಇವರ ಅಧಿಕಾರವಧಿಯು 2020, ನ.4 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ನಂತರ ಮುಗಿಯಲಿದೆ.

      ಈಗಾಗಲೇ ರಾಜ್ಯ ಸರರ್ಕಾರ ನಿಗದಿ ಮಾಡಿರುವ ಮೀಸಲಾತಿಯ ಆದೇಶದಂತೆ ಮಧುಗಿರಿ 41 ನೆ ಪ್ರಥಮ ಪ್ರಜೆಯಾಗಿ ನಾಯಕ ಸಮುದಾಯದ ತಿಮ್ಮರಾಜು ಹಾಗೂ 25ನೆ ಉಪಾಧ್ಯಕ್ಷರಾಗಿ ಆರ್ಯವೈಶ್ಯ ಸಮುದಾಯದ ರಾಧಿಕ ಆನಂದಕೃಷ್ಣ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

      ಈ ಹಿಂದಿನ ಮಧುಗಿರಿ ಶಾಸಕರಾಗಿದ್ದ ಕೆ.ಎನ್.ರಾಜಣ್ಣನವರ ಅವಧಿಯಲ್ಲಿ ಪುರಸಭೆಯಲ್ಲಿ ಎಲ್ಲಾ ಸಮುದಾಯದವರಿಗೂ ಸಮಾನವಾಗಿ ಅಧಿಕಾರ ಹಂಚಿಕೆ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಯಾವುದೇ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿಯು ಸಹ ಅವರ ಅಣತಿಯಂತೆ ಅವರು ಸೂಚಿಸಿರುವ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

      ಪುರಸಭೆಗೆ 41 ನೇ ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ನಾಯಕ ಸಮುದಾಯದ ತಿಮ್ಮರಾಯಪ್ಪ ಈ ಮೊದಲು ಮೂಲತಃ ಕೃಷಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಈಗ ಅದೇ ಮಾರುಕಟ್ಟೆಯಲ್ಲಿ ನಿರ್ದೇಶಕರಾಗಿದ್ದಾರೆ. ತಾಲ್ಲೂಕು ನಾಯಕ ಸಮುದಾಯದ ಅಧ್ಯಕ್ಷರಾಗಿದ್ದು, 2 ಬಾರಿ ಪುರಸಭಾ ಸದಸ್ಯರಾಗಿ ರಾಜಕೀಯ ಅನುಭವ ಹೊಂದಿದ್ದಾರೆ.

      ಉಪಾಧ್ಯಕ್ಷೆಯಾಗಲಿರುವ ರಾಧಿಕಾ ಆನಂದಕೃಷ್ಣ, ಈ ಹಿಂದೆ ಪುರಸಭೆಯ ಉಪಾಧ್ಯಕ್ಷರಾಗಿದ್ದ ಲಕ್ಷ್ಮೀದೇವಮ್ಮನವರ ಸೊಸೆ. ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಕುಟುಂಬದಿಂದ ಬಂದಿದ್ದು, ಪದವೀಧರೆಯಾಗಿದ್ದು, ತಾಲ್ಲೂಕು ವಾಸವಿ ಮಹಿಳಾ ಸಂಘದಲ್ಲಿ ಗುರುತಿಸಿಕೊಂಡು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. 

      ತಹಸೀಲ್ದಾರ್ ನೇತೃತ್ವದಲ್ಲಿ ನ.4ರ ಬುಧವಾರ ಬೆ.10 ಗಂಟೆಯಿಂದ 11 ಗಂಟೆಯವರೆವಿಗೆ ಪುರಸಭಾ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 1 ಗಂಟೆಗೆ ಸಭೆ, ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್ಸು ಪಡೆಯಲು 1.45 ರವರೆವಿಗೂ ಸಮಯ ನಿಗದಿಯಾಗಿದ್ದು, ಅವಶ್ಯವಿದ್ದಲ್ಲಿ ಮಧ್ಯಾಹ್ನ 2.00 ಗಂಟೆಗೆ ಮತದಾನ ಮಾಡಲು ಸದಸ್ಯರಿಗೆ ಅವಕಾಶ ನೀಡಲಾಗಿದೆ.

      ಸಂವಿಧಾನ ಬದ್ಧವಾಗಿ ಚುನಾಯಿತರಾದ ಜನಪತ್ರಿನಿಧಿಗಳು 5 ವರ್ಷಗಳ ಅಧಿಕಾರವನ್ನು ಅನುಭವಿಸುವುದು ಸಾಮಾನ್ಯ. ಆದರೆ ಈ ಬಾರಿ 2018 ರಲ್ಲಿ ಆಯ್ಕೆಯಾದ ಪಟ್ಟಣದ 23 ಸದಸ್ಯರ ಅಧಿಕಾರಾವಧಿಯು ಒಟ್ಟು 84 ತಿಂಗಳು ಕಾಲ ಜನಪ್ರತಿನಿಧಿ ಎನಿಸಿಕೊಳ್ಳಲಿದ್ದಾರೆ ಹಾಗೂ ಮೊದಲ ಸಭೆ ನಡೆದ ದಿನದಿಂದ 2025ರ ನವಂಬರ್ ಮಾಸದಲ್ಲಿ ಅಧಿಕಾರವು ಕೊನೆಗೊಳ್ಳಲಿದೆ.

     ಈಗಾಗಲೆ ಜಡ್ಡುಗಟ್ಟಿರುವ ಪುರಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ನೇತೃತ್ವದಲ್ಲಿ ಹೊಸ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಪಟ್ಟಣಕ್ಕೆ ಅಗತ್ಯ ಮೂಲಭೂತ ಸೌಕರ್ಯ, ಕಚೇರಿಯಲ್ಲಿ ಕೆಲ ನೌಕರರ ಕೆಲಸ ಕಾರ್ಯಗಳ ಬದಲಾವಣೆ ಮತ್ತು ಪಟ್ಟಣದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯ ಬಗ್ಗೆ ಹಲವಾರು ಲೋಪದೋಷಗಳು ಕಂಡು ಬಂದಿದ್ದು, ಕೆಲ ಹಿಂದಿನ ಪುರಸಭಾ ಸದಸ್ಯರು ಮತ್ತು ಕೆಲ ಅಧಿಕಾರಿಗಳ ಶಾಮೀಲಿನಿಂದಾಗಿ ನೀಡಿರುವ ಹಕ್ಕುಪತ್ರಗಳು, ಕರಡಿಪುರ, ಶನಿ ಮಹಾತ್ಮ ದೇವಾಲಯದ ಸಮೀಪದ ನಿವೇಶನಗಳ ಬಗ್ಗೆ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳ ಆರೋಪಗಳ ವಿರುದ್ದ ನೂತನ ಸದಸ್ಯರು ಜನರ ಕಷ್ಟ ಸುಖಗಳಿಗೆ ಯಾವ ರೀತಿ ಸ್ಪಂದಿಸುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link