ತಿಪಟೂರು :
ಹೊನ್ನವಳ್ಳಿ ಭಾಗಕ್ಕೆ ಶಾಶ್ವತ ಕುಡಿಯುವ ನೀರಿಲ್ಲವೆಂದು ಈಗ ಬಿ.ಜೆ.ಪಿಯಲ್ಲಿರುವ ಲೋಕೇಶ್ವರ್ ಹಿಂದೆ ಜೆ.ಡಿ.ಎಸ್ನಲ್ಲಿದ್ದಾಗ ಒಂದು ಬಾರಿ ಮತ್ತು ಬಿ.ಜೆ.ಪಿ ಮುಖಂಡ ಕೆ.ಟಿ.ಶಾಂತಕುಮಾರ್ ಒಂದು ಬಾರಿ ಪಾದಯಾತ್ರೆಯನ್ನು ಮಾಡಿದ್ದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ನವೆಂಬರ್ 2ರಂದು ನಡೆದ ಒಂದು ಪಾದಯಾತ್ರೆಯು ಎತ್ತಿನಹೊಳೆ ಹೋರಾಟ ಸಮಿತಿ, ರೈತಸಂಘ, ಹಸಿರುಸೇನೆ, ದಲಿತ ಸಂಘಗಳು, ಜನಸ್ಪಂದನ ಟ್ರಸ್ಟ್, ಕನ್ನಡ ಪರ ಸಂಘಟನೆ, ಆರ್.ಕೆ.ಎಸ್ನ ನೇತೃತ್ವದಲ್ಲಿ ನೀರುಕೊಡಿ-ಭೂಮಿ ಕೇಳಿ, ಪರಿಹಾರಕೊಡಿ-ಕೆಲಸಮಾಡಿ ಎಂದು ಹಮ್ಮಿಕೊಂಡಿದ್ದ ಜಾಥಾ ರೈತರಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸಿದೆ.
ಎತ್ತಿನಹೊಳೆ ಕಾಲುವೆಯು ಹಾದುಹೋಗುವ ತಿಪಟೂರಿನ ಹೊನ್ನವಳ್ಳಿ, ಕಸಬಾ ಮತ್ತು ಕಿಬ್ಬನಹಳ್ಳಿ ಹೋಬಳಿಗಳ ಭಾಗಕ್ಕೆ ನೀರಿನ ಮೂಲವಿಲ್ಲದೆ ಬರದ ಬೀಡಾಗಿದೆ ನೀರಾವರಿ ವಿಷಯ ಇಟ್ಟುಕೊಂಡು ಗೆದ್ದು ಬರುವ ಜನಪ್ರತಿನಿಧಿಗಳು ಗೆದ್ದ ನಂತರ ತಿರುಗಿ ನೋಡುತ್ತಿಲ್ಲವೆಂದು ನವೆಂಬರ್-2ರಂದು ತಾಲೂಕಿನ ಹೊನ್ನವಳ್ಳಿ ಹೋಬಳಿಯ ನಾಗತಿಹಳ್ಳಿ ಗ್ರಾಮದಿಂದ ನಗರದ ಉಪವಿಭಾಗಧಿಕಾರಿ ಕಚೇರಿಯವರೆಗೆ ತಾಲೂಕಿನ ರೈತರು, ರೈತ ಸಂಘದವರು ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರು ತಾಲೂಕಿಗೆ ನೀರಿನ ಹಂಚಿಕೆ, ಭೂಸಂತ್ರಸ್ತರಿಗೆ ನ್ಯಾಯಯುತ ಭೂ ಪರಿಹಾರ ಹಾಗೂ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ಜಾಥ ನಡೆಸುವ ಸಂದರ್ಭದಲ್ಲಿ ಬಿದರೆಗುಡಿಯ ಹತ್ತಿರವೇ ತಹಸೀಲ್ದಾರ್ ರೈತರ ಮನವೊಲಿಸಲು ಯಶಸ್ವಿಯಾಗಿ ಕಾಲ್ನೆಡಿಗೆ ಜಾಥಾವನ್ನುಅಲ್ಲಿಗೆ ಮುಕ್ತಾಯಗೊಳಿಸಿ ನವೆಂಬರ್ 3ರಂದು ಸಭೆ ನಡೆಸುವುದಾಗಿ ತಿಳಿಸಿದ್ದರು.
ಇದರ ಅಂಗವಾಗಿ ಮಂಗಳವಾರ ನಡೆದ ಸಭೆಯಲ್ಲಿ ತುಮಕೂರು ಜಿಲ್ಲೆಗೆ 1.575 ಟಿ.ಎಂ.ಸಿ ನೀರು ನಿಗದಿಯಾಗಿದೆ. ಇದರಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ಹಾಗೂ ಗುಬ್ಬಿಗೆ 1.22 ಟಿ.ಎಂ.ಸಿ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ತಿಪಟೂರಿಗೆ ಎಷ್ಟು ಎಂದು ತಿಳಿಸಬೇಕು.
ಇದೇ ಸಭೆಯಲ್ಲಿ ಭಾಗವಹಿಸಿದ ಇಂಜಿನಿಯರ್ಗಳು ತಿಳಿಸಿದಂತೆ ಎತ್ತಿನ ಹೊಳೆ ಹಾದುಹೋಗಿರುವ ಭಾಗದಲ್ಲಿ ಅಂದರೆ ಬಿದರೆಗುಡಿಯ ಹತ್ತಿರ ಒಂದು ಮತ್ತು ಬೆನ್ನಾಯಕನಹಳ್ಳಿ ಹತ್ತಿರ ಒಂದು ಲಿಫ್ಟ್ ಇರಿಗೇಶನ್ ಮಾಡಲಾಗುವುದು ಹಾಗೂ 6 ಕಡೆಗೇಟ್ ವಾಲ್ ಅಳವಡಿಸಲಾಗುವುದು ಈ ಗೇಟ್ವಾಲ್ನಲ್ಲಿ ಹಳ್ಳಗಳಿಗೆ ನೀರನ್ನು ಬಿಡಲಾಗುವುದು ಮತ್ತು ಬಿಟ್ಟಿರುವ ಕೆರೆಗಳನ್ನು ಎಂ.ಐ ಇಲಾಖೆಗೆ ಮನವಿ ಸಲ್ಲಿಸಿದರೆ ತುಂಬಿಸುವುದಾಗಿ ತಿಳಿಸಿದರು.