ಶಿರಾ :

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂತಹುದೊಂದು ಮಹತ್ವದ ಬದಲಾವಣೆಯಾಗುತ್ತದೆ ಅನ್ನುವ ಸಣ್ಣದೊಂದು ನಿರೀಕ್ಷೆಯೂ ಕೂಡ ಯಾರಲ್ಲೂ ಇರಲಿಲ್ಲ. ಕಳೆದ 1957 ರ ಚುನಾವಣೆಯಿಂದಲೂ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರವೀಗ ಕೇಸರಿ ಪಾಳೆಯದ ಪಾಲಾಗಿದ್ದು, ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಬಹುಮತಗಳಿಂದ ಆಯ್ಕೆಯಾಗುವ ಮೂಲಕ ಒಂದು ಇತಿಹಾಸವೆ ಈ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿಯ ವ್ಯಾಪಕ ಅಭಿಮಾನದ ಅಲೆ ಇದ್ದಾಗಲೂ ಕೇವಲ ಎರಡೂವರೆ ವರ್ಷಗಳ ಹಿಂದಿನ ಚುನಾವಣೆಯಲ್ಲೂ ಕೂಡ ಠೇವಣಿ ಕಳೆದುಕೊಂಡಿದ್ದ ಬಿ.ಜೆ.ಪಿ. ಪಕ್ಷ, ಇಂದು ಈ ಕ್ಷೇತ್ರದಲ್ಲಿ ವಿಜಯದ ಬಾಗಿಲನ್ನು ತಟ್ಟುವ ಮೂಲಕ ಮತದಾರರು ಹೊಸದೊಂದು ಇತಿಹಾಸವನ್ನೆ ಮೆರೆದಿದ್ದಾರೆ.
ಕಳೆದ ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಶಿರಾ ಕ್ಷೇತ್ರವು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಭದ್ರಕೋಟೆಯಂತಿದ್ದು, ಸದರಿ ಭದ್ರಕೋಟೆಯನ್ನು ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಭೇದಿಸಿರುವುದು ನಿಜಕ್ಕೂ ಒಂದು ಸಾಹಸವೇ ಸರಿ. ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ತನ್ನ ಪಾರಮ್ಯ ಮೆರೆಯಲು ಸಾದ್ಯವಿಲ್ಲ ಅಂದುಕೊಂಡಿದ್ದ ವಿರೋಧ ಪಕ್ಷಗಳ ಕನಸು ಕೂಡ ನುಚ್ಚು ನೂರಾಗುವಂತಹ ಫಲಿತಾಂಶ ಇದೀಗ ಹೊರಬಿದ್ದಿದೆ.
ಒಂದು ಕಾಲದಲ್ಲಿ ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್‍ನ್ನು ಯಾರಿಗೆ ನೀಡಬೇಕೆಂದು ಆ ಪಕ್ಷದ ವರಿಷ್ಠರು ಅಭ್ಯರ್ಥಿಯನ್ನು ಹುಡುಕುವಂತಹ ಕಾಲವೂ ಇತ್ತು. ಯಾರಾದರೂ ಸರಿ ಸದ್ಯಕ್ಕೆ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್ ಪಡೆದರೆ ಸಾಕೆಂಬ ಹಂಬಲವೂ ಆ ಪಕ್ಷದ ವರಿಷ್ಠರಲ್ಲಿತ್ತು.
ಈವರೆಗೆ ಪಕ್ಷದಿಂದ ಟಿಕೆಟ್ ಪಡೆದಿದ್ದ ಎಲ್ಲಾ ಅಭ್ಯರ್ಥಿಗಳು ಪರಾಭವಗೊಳ್ಳುವ ಮೂಲಕ ಶಿರಾ ಕ್ಷೇತ್ರವು ಮುಂದೆಂದೂ ಕೂಡ ಬಿ.ಜೆ.ಪಿ. ಪಕ್ಷದ ಕಮಲ ಅರಳುವುದೇ ಇಲ್ಲವೆಂಬ ನಿರ್ಧಾರಕ್ಕೆ ಬರಲಾಗಿತ್ತು. ಇಂತಹ ಹಲವು ಕಷ್ಟದ ಪರಿಸ್ಥಿತಿಯಲ್ಲೂ 1989ರಲ್ಲಿ ಕೆ.ಟಿ.ಮಹಲಿಂಗಪ್ಪ ಅವರಿಗೆ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಆಗ ಮಹಾಲಿಂಗಪ್ಪ 961 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲನ್ನು ಕಂಡಿದ್ದರು.
1994 ರಲ್ಲಿ ಡಿ.ಎಸ್.ನರಸಿಂಹಯ್ಯ ಅವರಿಗೆ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು ಆಗ ಅವರು 2954 ಮತಗಳನ್ನು ಪಡೆದು ಪರಾಜಯಗೊಂಡಿದ್ದರು. ಹೇಗಾದರೂ ಸರಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿಸಲೇಬೇಕೆಂಬ ಹಠದಿಂದ ಜೆ.ಡಿ.ಎಸ್. ಪಕ್ಷವನ್ನು ತೊರೆದಿದ್ದ ಯಾದವ ಮುಖಂಡ ಬಿ.ಕೆ.ಬಡೀರಣ್ಣ ಅವರಿಗೆ 2004ರಲ್ಲಿ ಬಿ.ಜೆ.ಪಿ. ಟಿಕೆಟ್ ಲಭ್ಯವಾದಾಗ 20,022 ಮತಗಳನ್ನು ಪಡೆಯುವ ಮೂಲಕ ಬಡೀರಣ್ಣ ಬಿ.ಜೆ.ಪಿ. ಪಕ್ಷಕ್ಕೆ ಶಕ್ತಿ ತುಂಬಿದ್ದರಾದರೂ ಜೆ.ಡಿ.ಎಸ್. ಪಕ್ಷದ ಬಿ.ಸತ್ಯನಾರಾಯಣ್ ಗೆಲುವು ಕಂಡಿದ್ದರು. ಆಗಲೂ ಕೂಡ ಕಮಲ ಅರಳಲೇ ಇಲ್ಲ.
2008ರ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿದ್ದ ಬಿ.ಕೆ.ಮಂಜುನಾಥ್ ಬಡೀರಣ್ಣ ಅವರು ಪಡೆದ ಮತಕ್ಕೂ ಹೆಚ್ಚು ಮತಗಳನ್ನು ಅಂದರೆ 24,025 ಮತ ಪಡೆದರಾದರೂ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ ಅವರ ಮುಂದೆ ಪರಾಜಯಗೊಂಡಿದ್ದರು. ಮತ್ತೊಮ್ಮೆ 2013ರ ಚುನಾವಣೆಯಲ್ಲೂ ಟಿಕೆಟ್ ಪಡೆದು ಇದೇ ಬಿ.ಜೆ.ಪಿ. ಪಕ್ಷದಿಂದಲೇ ಸ್ಪರ್ಧಿಸಿದ್ದ ಮಂಜುನಾಥ್ 18,884 ಮತ ಪಡೆದು ಮತ್ತೊಮ್ಮೆ ಜಯಚಂದ್ರ ಅವರ ವಿರುದ್ಧ ಪರಾಜಯಗೊಂಡಿದ್ದರು.
ಪದೇ ಪದೇ ಎಲ್ಲಾ ಚುನಾವಣೆಗಳಲ್ಲೂ ಸೋಲನ್ನೇ ಕಂಡ ಬಿ.ಜೆ.ಪಿ. ಪಕ್ಷವು ಪ್ರಬಲ ಕೋಮಿನ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಜಯದ ಹಾದಿ ಸುಲಭವಾಗಬಹುದೆಂದು ಜೆ.ಡಿ.ಎಸ್. ತೊರೆದು ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಕುಂಚಿಟಿಗ ಸಮುದಾಯದ ಎಸ್.ಆರ್.ಗೌಡರಿಗೆ 2018ರ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಸದರಿ ಚುನಾವಣೆಯಲ್ಲಿ ಅಭಿವೃದ್ಧಿಯ ಹರಿಕಾರರೆನಿಸಿದ್ದ ಟಿ.ಬಿ.ಜಯಚಂದ್ರ ಹಾಗೂ ಬಿ.ಸತ್ಯನಾರಾಯಣ್ ಅವರ ಅಬ್ಬರದ ಚುನಾವಣೆಯ ಮುಂದೆ ಎಸ್.ಆರ್.ಗೌಡ 16,959 ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು.
ಆಗ ಅಲ್ಪಸಂಖ್ಯಾತರ ಓಲೈಕೆಗೆ ಜಯಚಂದ್ರ ಮುಂದಾಗಿದ್ದರು ಎಂಬ ಒಂದೇ ಕಾರಣಕ್ಕೆ ಹಾಗೂ ಸೋತ ಅನುಕಂಪದ ಅಲೆಯನ್ನು ತಮ್ಮದಾಗಿಸಿಕೊಂಡಿದ್ದ ಜೆ.ಡಿ.ಎಸ್. ಪಕ್ಷದ ಬಿ.ಸತ್ಯನಾರಾಯಣ್ ಅವರನ್ನು ಮತದಾರರು ಬೆಂಬಲಿಸಿದ ಪರಿಣಾಮ ಕಳೆದ ಚುನಾವಣೆಯಲ್ಲೂ ಬಿ.ಜೆ.ಪಿ. ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆಯು ಎದುರಾಗುತ್ತದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲವಾದರೂ ಶಾಸಕ ಸ್ಥಾನ ಅಲಂಕರಿಸಿದ ಕೇವಲ ಎರಡೂವರೆ ವರ್ಷದೊಳಗೆ ಬಿ.ಸತ್ಯನಾರಾಯಣ್ ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಪರಿಣಾಮ ಉಪ ಚುನಾವಣೆ ಎದುರಾಯಿತು. ಎಂದೂ ಕೂಡ ಉಪ ಚುನಾವಣೆಯನ್ನು ಕಾಣದ ಮತದಾರರು ಉಪ ಚುನಾವಣೆಯ ಅಬ್ಬರವನ್ನೂ ಕಣ್ಣಿಂದ ನೋಡಬೇಕಾಯಿತು.
ಬಿ.ಸತ್ಯನಾರಾಯಣ್ ಮೃತಪಟ್ಟ ಕೂಡಲೆ ಇಡೀ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ ಆಯ್ಕೆಯಾಗುವುದು ಖಚಿತ ಎಂಬ ಭಾವನೆ ಮತದಾರರಲ್ಲೂ ವ್ಯಕ್ತವಾಯಿತು. ಹಿಂದಿನ ಎರಡು ಅವಧಿಯಲ್ಲಿ ಜಯಚಂದ್ರ ಕ್ಷೇತ್ರದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಮತ್ತೊಮ್ಮೆ ಅವರ ಆಯ್ಕೆಗೆ ನೆರವಾಗುತ್ತವೆ ಎಂಬ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗಿತ್ತು. ಆದರೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ರಣ ತಂತ್ರದಡಿಯಲ್ಲಿ ನಡೆದದ್ದೇ ಬೇರೆ.
ಸದರಿ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್‍ಗಾಗಿ ಹಣಾಹಣಿಯೇ ನಡೆಯಿತು. ಈ ಹಿಂದೆ ಪಕ್ಷದಿಂದ ಟಿಕೆಟ್ ಪಡೆದು ಪರಾಜಯಗೊಂಡಿದ್ದ ಎಸ್.ಆರ್.ಗೌಡ ಹಾಗೂ ಬಿ.ಕೆ.ಮಂಜುನಾಥ್ ಟಿಕೆಟ್‍ಗಾಗಿ ಸಾಕಷ್ಟು ಪ್ರಯತ್ನಪಟ್ಟದ್ದೂ ಉಂಟು. ಒಂದು ಕಾಲದಲ್ಲಿ ಬಿ.ಜೆ.ಪಿ. ಪಕ್ಷವು 330 ಮತಗಟ್ಟೆಗಳಲ್ಲಿ ಒಂದಂಕಿಯನ್ನೂ ದಾಟದ ಸಂದರ್ಭದಲ್ಲಿ ಟಿಕೆಟ್ ಪಡೆದು ಪಕ್ಷದ ಬಾವುಟ ಹಾರುವಂತೆ ಮಾಡಿದವರು ದಿ.ಬಿ.ಕೆ.ಬಡೀರಣ್ಣ, ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಎಂಬುದು ಅಕ್ಷರಶಃ ಸತ್ಯ.
ಈ ಕಾರಣದಿದಲೆ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಿ ಎಂದು ಮಂಜುನಾಥ್, ಎಸ್.ಆರ್.ಗೌಡ ಪಟ್ಟು ಹಿಡಿದು ಕೂತಿದ್ದರು. ಪಕ್ಷದಲ್ಲಿ ಈ ಇಬ್ಬರೂ ಕೂಡ ಒಂದಷ್ಟು ಪ್ರಬಲರಾಗಿರುವುದನ್ನು ಕಂಡ ಬಿ.ಜೆ.ಪಿ. ಪಕ್ಷದ ವರಿಷ್ಠರು ಬಿ.ಸತ್ಯನಾರಾಯಣ್ ಅವರ ನಿಧನದ ಮಾರನೆಯ ದಿನದಿಂದಲೂ ಈರ್ವರನ್ನೂ ಸಂಭಾಳಿಸಿಕೊಂಡೆ ಬಂದರು. ಇವರೀರ್ವರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ ಎಂದು ಹೇಳುತ್ತಲೇ ಬಂದ ಪಕ್ಷದ ವರಿಷ್ಠರು ಪರ್ಯಾಯವಾಗಿ ಪ್ರಬಲ ಅಭ್ಯರ್ಥಿಗೆ ಮಣೆ ಹಾಕಲು ತೆರೆ ಮರೆಯ ಕಸರತ್ತು ನಡೆಸುತ್ತಲೆ ಬಂದರಲ್ಲ, ಶಿರಾ ಕ್ಷೇತ್ರದ ಬರಡು ನೆಲದಲ್ಲಿ ಕೆಸರಿನ ಕಮಲವನ್ನು ಅರಳಿಸಲೆಬೇಕೆಂಬ ನಿರ್ಧಾರಲ್ಲಿದ್ದರು.
ನೆಲೆಯೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಬಾವುಟ ಹಾರಿಸುವ ರಣತಂತ್ರ ಹೂಡುವಲ್ಲಿ ಕೊನೆಗೂ ಬಿ.ಜೆ.ಪಿ. ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಫಲರಾಗಿದ್ದಾರೆ. ವಿಜಯೇಂದ್ರ ಅವರ ನೆರಳಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುರೇಶ್‍ಗೌಡ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಎ.ನಾರಾಯಣಸ್ವಾಮಿ ಸೇರಿದಂತೆ ಈ ಪಂಚ ಪಾಂಡವರ ತಂತ್ರಗಾರಿಕೆಗಳು ಬಿ.ಸತ್ಯನಾರಾಯಣ್ ಅವರ ನಿಧನರಾದ ಮಾರನೆಯ ದಿನದಿಂದಲೆ ಆರಂಭಗೊಂಡಿದ್ದವು.
ಬಿ.ಜೆ.ಪಿ. ಪಕ್ಷಕ್ಕೆ ಶಿರಾ ಕ್ಷೇತ್ರದಲ್ಲಿ ಮತ ಹಾಕುವ ಮತದಾರರಿದ್ದರೂ ಪ್ರಬಲ ಅಭ್ಯರ್ಥಿಯು ಕಣದಲ್ಲಿ ಯಾವ ಚುನಾವಣೆಯಲ್ಲೂ ನಿಲ್ಲದ ಪರಿಣಾಮ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷಗಳ ಅಭ್ಯರ್ಥಿಯನ್ನೇ ತಿರುವಿ ಹಾಕಿಕೊಂಡು ಮತ ಚಲಾಯಿಸಿ ಕೈ ಚೆಲ್ಲಿ ಕೂರುತ್ತಿದ್ದ ಮತದಾರರಿಗೆ ಹೊಸದೊಂದು ಮುಖದ ಅಗತ್ಯ ಈ ಪಕ್ಷದಿಂದ ಇತ್ತು. ಹೀಗಾಗಿಯೇ ಹೊಸ ಮುಖದೊಟ್ಟಿಗೆ ಪ್ರಬಲ ಕುಂಚಿಟಿಗ ಸಮುದಾಯದ ಅಭ್ಯರ್ಥಿಗಾಗಿ ಪಂಚ ಪಾಂಡವರೆನಿಸಿಕೊಂಡಿದ್ದ ಬಿ.ಜೆ.ಪಿ. ಪಕ್ಷದ ವರಿಷ್ಠರು ಹೊಸ ಮುಖದ ಅಭ್ಯರ್ಥಿಗೆ ಗಾಳ ಬೀಸಿದ್ದರು.
ಇಡೀ ಕ್ಷೇತ್ರದಲ್ಲಿ ಉಪ ಚುನಾವಣೆಯ ದಿನಾಂಕ ಪ್ರಕಟಗೊಳ್ಳುವ ಎರಡು ತಿಂಗಳ ಮುನ್ನವೇ ಪಕ್ಷದ ಪ್ರಬಲ ಮುಖಂಡರೆನಿಸಿದ್ದ ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡರನ್ನು ಬೆಂಬಿಡದೆ ಅವರನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರತಿಯೊಂದು ಮತಗಟ್ಟೆಯಲ್ಲೂ ಸಂಘಟನೆಯಲ್ಲಿ ತೊಡಗಿದ ವಿಜಯೇಂದ್ರ ಒಳಗೊಳಗೆ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲೂ ತೊಡಗಿದ್ದರು.
ಕಳೆದ ನಾಲ್ಕೈದು ವರ್ಷಗಳಿಂದಲೂ ಸಮಾಜ ಸೇವೆ ಮಾಡಿಕೊಂಡು ಒಂದಷ್ಟು ಒಳ್ಳೆಯ ಹೆಸರನ್ನೂ ಸಂಪಾದನೆ ಮಾಡಿಕೊಂಡಿದ್ದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ.ಸಿ.ಎಂ.ರಾಜೇಶ್‍ಗೌಡರನ್ನು ಕಣದಲ್ಲಿ ನಿಲ್ಲಿಸಿ ಶಿರಾದಲ್ಲಿ ಕಮಲ ಅರಳಿಸುವ ತಂತ್ರಗಾರಿಕೆಗೆ ಹೊಸದೊಂದು ಮಾರ್ಗ ಹುಡುಕಿಕೊಳ್ಳಲಾಯಿತು.
ಕಾಂಗ್ರೆಸ್ ಪಕ್ಷದಿಂದ ಟಿ.ಬಿ.ಜಯಚಂದ್ರ, ಜೆ.ಡಿ.ಎಸ್. ಪಕ್ಷದಿಂದ ಅಮ್ಮಾಜಮ್ಮ ಅವರ ಹೆಸರನ್ನು ಘೋಷಣೆ ಮಾಡಿದ್ದರೂ ಕೂಡ ಅಂತಿಮ ಕ್ಷಣದವರೆಗೂ ಬಿ.ಜೆ.ಪಿ. ಪಕ್ಷ ತನ್ನ ಅಭ್ಯರ್ಥಿಯ ಘೋಷಣೆ ಮಾಡಲೇ ಇಲ್ಲ. ಟಿಕೆಟ್‍ಗಾಗಿ ಪಕ್ಷದಲ್ಲಿದ್ದ ಅಸಮಾಧಾನದ ಹೊಗೆಯನ್ನು ದಿನ ದಿನಕ್ಕೂ ಶಮನ ಮಾಡುತ್ತಾ ಬಂದ ಪಕ್ಷದ ವರಿಷ್ಠರು, ಅಂತಿಮವಾಗಿ ಡಾ.ಸಿ.ಎಂ.ರಾಜೇಶ್‍ಗೌಡ ಅವರನ್ನು ಪ್ರಕಟಿಸಿದ ನಂತರ ಇಡೀ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನವೇ ಹೊಸದೊಂದು ಅಲೆಯೆ ಆರಂಭಗೊಂಡಿತ್ತು.
ಡಾ.ಸಿ.ಎಂ.ರಾಜೇಶ್‍ಗೌಡ ಅವರಿಗೆ ಅಧಿಕೃತವಾಗಿ ಪಕ್ಷದಿಂದ ಟಿಕೆಟ್ ನೀಡಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಂತೆಯೇ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಗೆಲುವಿನ ವಾತಾವರಣ ಮತದಾನಕ್ಕೂ ಮುನ್ನವೇ ಸೃಷ್ಟಿಯಾಗಿತ್ತು. ಕಳೆದ ತಮ್ಮ ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಿದರೆ, ಇತ್ತ ಜೆ.ಡಿ.ಎಸ್. ಪಕ್ಷವು ದಿವಂಗತ ಬಿ.ಸತ್ಯನಾರಾಯಣ್ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಶಾಸಕರು ನಿಧನರಾದ ಅನುಕಂಕಪದ ಅಲೆಯನ್ನು ಮುಂದಿಟ್ಟುಕೊಂಡು ಅಮ್ಮಾಜಮ್ಮ ಅವರ ಪರ ಜೆ.ಡಿ.ಎಸ್. ಪಕ್ಷದಿಂದ ಅಬ್ಬರದ ಪ್ರಚಾರ ನಡೆಸಲಾಯಿತು.
ಇಡೀ ಕ್ಷೇತ್ರದಲ್ಲಿ ಮೂರು ಪಕ್ಷಗಳ ನೇರ ನೇರ ಹಣಾಹಣಿ ಸೃಷ್ಟಿಯಾಗಿ ತ್ರಿಕೋನ ಸ್ಪರ್ಧೆ ನಡೆದು ಮತದಾನದ ನಂತರ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆದದ್ದೂ ಉಂಟು. ಮತದಾನದ ನಂತರವೂ ಮೂರೂ ಪಕ್ಷದ ಅಭ್ಯರ್ಥಿಗಳಲ್ಲಿ ಹಾಗೂ ಕಾರ್ಯಕರ್ತ, ಮುಖಂಡರಲ್ಲಿ ಮತ ಎಣಿಕೆಯವರೆಗೂ ಆತಂಕದ ಗೆರೆಗಳಿದ್ದವಾದರೂ ಕ್ಷೇತ್ರದ ಮತದಾರ ಕೊನೆಗೂ ಕಮಲವನ್ನು ಅರಳಿಸುವ ಮೂಲಕ ಕ್ಷೇತ್ರದ ಬಲವಾದ ಇತಿಹಾಸನ್ನೇ ಬುಡಮೇಲು ಮಾಡಿದ್ದಾನೆ.
ಚುನಾವಣೆಗೂ ಮುನ್ನ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು, ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಭರವಸೆ, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಸ್ಥಾಪನೆ, ಕುಂಚಿಟಿಗ ಸಮಾಜಕ್ಕೆ ಪ್ರವರ್ಗ-1 ರ ಮೀಸಲಾತಿ, ಕೇಂದ್ರದಲ್ಲಿ ಓಬಿಸಿ ಮೀಸಲು ನೀಡುವ ಘೋಷಣೆ ಮಾಡುವ ಹತ್ತು ಹಲವು ಭರವಸೆಗಳಿಂದ ಬಿ.ಜೆ.ಪಿ. ಶಿರಾ ಕ್ಷೇತ್ರದಲ್ಲಿ ಪಾರಮ್ಯ ಮೆರೆಯಲು ಕಾರಣವಾಗಿದೆ.
ಶಿರಾ ಕ್ಷೇತ್ರದ ಮತದಾರ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲು ಪ್ರಮುಖ ಕಾರಣವೆ ಮದಲೂರು ಕೆರೆ. ಇಂಗಿ ಬಸವಳಿದ ಮದಲೂರು ಕೆರೆ ಹೇಮಾವತಿ ನೀರಿನಿಂದ ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ಸತ್ಯ ಸಂಗತಿ ಅರಿತ ಮತದಾರರು ಈವರೆಗೆ ಎರಡು ಬಾರಿ ಜಯಚಂದ್ರ ಅವರನ್ನು ಬೆಂಬಲಿಸುತ್ತಲೆ ಬಂದಿದ್ದರು. ಕೊನೆಗೂ ಕೆರೆ ಭರ್ತಿಯಾಗಲೇ ಇಲ್ಲ. ಮದಲೂರು ಬಳಿ ಬಂದು ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಹೇಮಾವತಿ ಹರಿಸಿ ತುಂಬಿಸುವ ಭರವಸೆ ನೀಡಿದ ಒಂದೇ ಮಾತಿನಿಂದ ಕ್ಷೇತ್ರದ ಬಹುಪಾಲು ಮತದಾರರು ಈ ಬಾರಿ ಬಿ.ಜೆ.ಪಿ. ಬೆಂಬಲಿಸಲು ಕಾರಣವಾಯಿತು.
ಕ್ಷೇತ್ರದ ಮತದಾರರನ್ನು ಒಲಿಸಿಕೊಳ್ಳಲು ಇಡೀ ರಾಜ್ಯ ಸರ್ಕಾರದ ಮಂತ್ರಿವರ್ಯರು, ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಪರ ವ್ಯಾಪಕ ಪ್ರಚಾರ ನಡೆಸಿದ್ದರು. ಇನ್ನು ಕಾಂಗ್ರೆಸ್ ಪಕ್ಷದಿಂದಲೂ ಮಾಜಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷದ ಸಮಿತಿಯೇ ಕ್ಷೇತ್ರದಲ್ಲಿ ನೆಲೆಯೂರಿತು. ಇನ್ನು ಜೆ.ಡಿ.ಎಸ್. ಅಭ್ಯರ್ಥಿಯ ಗೆಲುವಿಗಾಗಿ ಮಾಜಿ ಪ್ರಧಾನಿಗಳ ಇಡೀ ಕುಟುಂಬವೇ ಠಿಕಾಣಿ ಹೂಡಿ ಮತ ಯಾಚನೆ ಮಾಡಿತು.
ಈ ಎಲ್ಲಾ ಪ್ರಚಾರಗಳು, ಭರವಸೆಗಳು ಮತದಾರನ ಓಲೈಕೆಗೆ ನಡೆದ ನಂತರ ನ. 10 ರಂದು ನಡೆದ ಮತ ಎಣಿಕೆಯಲ್ಲಿ ಮತದಾರನ ಅಭಿಪ್ರಾಯವಂತೂ ನಿಚ್ಚಳವಾಗಿ ಲಭ್ಯವಾಗಿದೆ. ಬಿ.ಜೆ.ಪಿ. ಪಕ್ಷದ ಡಾ.ಸಿ.ಎಂ.ರಾಜೇಶ್‍ಗೌಡ 74,522, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ 61,573 ಹಾಗೂ ಜೆ.ಡಿ.ಎಸ್. ಪಕ್ಷದ ಅಮ್ಮಾಜಮ್ಮ 35,982 ಮತಗಳನ್ನು ಪಡೆದಿದ್ದು ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರಿಗಿಂತಲೂ 12,949 ಹೆಚ್ಚು ಮತಗಳನ್ನು ಪಡೆದ ಡಾ.ರಾಜೇಶ್‍ಗೌಡ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಪಕ್ಷದ ಜಯಚಂದ್ರ ಎರಡನೇ ಸ್ಥಾನ ಪಡೆದು ತೃಪ್ತಿ ಪಡುವಂತಾಗಿದ್ದು ಜೆ.ಡಿ.ಎಸ್. ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಫಲಿಸಿದ ಪಂಚ ಪಾಂಡವರ ತಂತ್ರ…..!
ಬಿ.ಜೆ.ಪಿ. ಪಕ್ಷಕ್ಕೆ ಶಿರಾ ಕ್ಷೇತ್ರದಲ್ಲಿ ಮತ ಹಾಕುವ ಮತದಾರರಿದ್ದರೂ ಪ್ರಬಲ ಅಭ್ಯರ್ಥಿಯು ಯಾವ ಚುನಾವಣೆಯಲ್ಲೂ ಕಣದಲ್ಲಿ ನಿಲ್ಲದ ಪರಿಣಾಮ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷಗಳ ಅಭ್ಯರ್ಥಿಯನ್ನೇ ತಿರುವಿ ಹಾಕಿಕೊಂಡು ಮತ ಚಲಾಯಿಸಿ ಕೈ ಚೆಲ್ಲಿ ಕೂರುತ್ತಿದ್ದ ಮತದಾರರಿಗೆ ಹೊಸದೊಂದು ಮುಖದ ಅಗತ್ಯ ಈ ಪಕ್ಷದಿಂದ ಇತ್ತು. ಹೀಗಾಗಿಯೇ ಹೊಸ ಮುಖದೊಟ್ಟಿಗೆ ಪ್ರಬಲ ಕುಂಚಿಟಿಗ ಸಮುದಾಯದ ಅಭ್ಯರ್ಥಿಗಾಗಿ ಪಂಚ ಪಾಂಡವರೆನಿಸಿಕೊಂಡಿದ್ದ ಬಿ.ಜೆ.ಪಿ. ಪಕ್ಷದ ವರಿಷ್ಠರು ಹೊಸ ಮುಖದ ಅಭ್ಯರ್ಥಿಗೆ ಗಾಳ ಬೀಸಿದ್ದರು.
ಚುನಾವಣೆಗೂ ಮುನ್ನ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು, ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಭರವಸೆ, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಸ್ಥಾಪನೆ, ಕುಂಚಿಟಿಗ ಸಮಾಜಕ್ಕೆ ಪ್ರವರ್ಗ-1 ರ ಮೀಸಲಾತಿ, ಕೇಂದ್ರದಲ್ಲಿ ಓಬಿಸಿ ಮೀಸಲು ನೀಡುವ ಘೋಷಣೆ ಮಾಡುವ ಹತ್ತು ಹಲವು ಭರವಸೆಗಳಿಂದ ಬಿ.ಜೆ.ಪಿ. ಶಿರಾ ಕ್ಷೇತ್ರದಲ್ಲಿ ಪಾರಮ್ಯ ಮೆರೆಯಲು ಕಾರಣವಾಗಿದೆ
ಶಿರಾ ಕ್ಷೇತ್ರದ ಮತದಾರ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯನ್ನು ಕೈ ಹಿಡಿಯಲು ಪ್ರಮುಖ ಕಾರಣವೇ ಮದಲೂರು ಕೆರೆ. ಇಂಗಿ ಬಸವಳಿದ ಮದಲೂರು ಕೆರೆ ಹೇಮಾವತಿ ನೀರಿನಿಂದ ತುಂಬಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ಸತ್ಯ ಸಂಗತಿ ಅರಿತ ಮತದಾರರು ಈವರೆಗೆ ಎರಡು ಬಾರಿ ಜಯಚಂದ್ರ ಅವರನ್ನು ಬೆಂಬಲಿಸುತ್ತಲೆ ಬಂದಿದ್ದರು. ಕೊನೆಗೂ ಕೆರೆ ಭರ್ತಿಯಾಗಲೇ ಇಲ್ಲ. ಮದಲೂರು ಬಳಿ ಬಂದು ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿಗಳು ಹೇಮಾವತಿ ಹರಿಸಿ ತುಂಬಿಸುವ ಭರವಸೆ ನೀಡಿದ ಒಂದೇ ಮಾತಿನಿಂದ ಕ್ಷೇತ್ರದ ಬಹುಪಾಲು ಮತದಾರರು ಈ ಬಾರಿ ಬಿ.ಜೆ.ಪಿ. ಬೆಂಬಲಿಸಲು ಕಾರಣವಾಯಿತು.
-ಬರಗೂರು ವಿರೂಪಾಕ್ಷಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








