ತುಮಕೂರು :
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಕಮಲ ಕಮಾಲ್ ಮಾಡಿದೆ. ಮಂಗಳವಾರ ಎಣಿಕೆ ಪ್ರಾರಂಭವಾಗಿ ಬುಧವಾರ ಸಂಜೆ ವೇಳೆಗೆ ಪ್ರಕಟವಾದ ಫಲಿತಾಂಶದಲ್ಲಿ ಮೂರನೇ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದಗೌಡ ವಿಜಯಶಾಲಿಯಾಗಿದ್ದಾರೆ.
ಪ್ರಥಮ ಪ್ರಾಶಸ್ತ್ಯದ 6 ಸುತ್ತಿನ ಮತ ಎಣಿಕೆ ಕೊನೆಗೊಂಡ ವೇಳೆಗೆ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ 24,217, ಜೆಡಿಎಸ್ನ ಆರ್.ಚೌಡರೆಡ್ಡಿ ತೂಪಲ್ಲಿ, 16,321, ಕಾಂಗ್ರೆಸ್ ರಮೇಶ್ಬಾಬು 8607 ಮತಗಳನ್ನು ಪಡೆದಿದ್ದು, ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಡಿ.ಟಿ.ಶ್ರೀನಿವಾಸ್ 19,146 ಮತಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಬಿಜೆಪಿಗೆ ಪ್ರಬಲ ಪೈಪೋಟಿಯೊಡ್ಡಿದ್ದರು. ಮೊದಲೆರೆಡು ಸುತ್ತಿನಲ್ಲಿ ಅತ್ಯಧಿಕ ಪ್ರಥಮ ಪ್ರಾಶಸ್ತ್ಯ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದ ಡಿ.ಟಿ.ಶ್ರೀನಿವಾಸ್ ಅವರ ಮತಗಳಿಕೆ ನೋಡಿ ಅಚ್ಚರಿಯ ಫಲಿತಾಂಶದ ಚರ್ಚೆಗೂ ನಾಂದಿಹಾಡಿತ್ತು.
ಮತ್ತೋರ್ವ ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಹಾಲನೂರು ಲೇಪಾಕ್ಷಿ 951 ಪ್ರಥಮ ಪ್ರಾಶಸ್ತ್ಯ ಮತ ಪಡೆದಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಡಾ.ಕೆ.ಎಂ.ಸುರೇಶ್ 3167, ಜಿ.ಸಿ.ಪಟೇಲ್ 56. ಟಿ.ಶ್ರೀನಿವಾಸ 598, ಎಂ.ಪಿ.ಕರಬಸಪ್ಪ 57, ಬಿ.ಕುಮಾರಸ್ವಾಮಿ 29, ಪಿ.ಆರ್.ದಾಸ್ 43, ಜಿ.ವೆಂಕಟಾಚಲಪತಿ 159, ಶಿವರಾಮಯ್ಯ 125, ಎಸ್.ಸತೀಶ್ಗೌಡ 52, ಎಚ್.ಹಾಲೇಶಪ್ಪ 40 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದಿದ್ದರು.
2,3ನೇ ಪ್ರಾಶಸ್ತ್ಯದ ಮತ ಎಣಿಕೆ:
ಅಭ್ಯರ್ಥಿಗಳಿಗೆ ಗೆಲ್ಲಲು ಅಗತ್ಯವಾದ ನಿಗದಿತ ಪ್ರಥಮ ಪ್ರಾಶಸ್ತ್ಯ ಮತಗಳ ದೊರೆಯದೇ ಇದ್ದುದರಿಂದ ಎರಡನೇ ಪ್ರಾಶಸ್ತ್ರ್ಯ ಹಾಗೂ ಮೂರನೇ ಪ್ರಾಶಸ್ತ್ಯ ಮತಗಳ ಎಣಿಕೆ ಮಾಡಿ ಕಡೆಗೆ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಸುಮಾರು 7 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆಂದು ತಿಳಿದುಬಂದಿತು. ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ನಿರಂತರ 36 ತಾಸು ನಡೆದ ಮತ ಎಣಿಕೆ ಅಭ್ಯರ್ಥಿಗಳು, ಅವರ ಬೆಂಬಲಿಗರಲ್ಲಿ ಸಾಕಷ್ಟು ಆತಂಕ, ಬೇಸರಕ್ಕೆ ಎಡೆಮಾಡಿಕೊಟ್ಟಿತು.
ಕ್ಷೇತ್ರದಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಬಿಜೆಪಿ:
ತುಮಕೂರು, ಚಿಕ್ಕಬಳ್ಳಾಪುರ ಕೋಲಾರ, ದಾವಣಗೆರೆ, ಚಿತ್ರದುರ್ಗವನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹಿಂದಿನಿಂದಲೂ ಜನಸಂಘ, ಬಿಜೆಪಿಯವರೇ ಪ್ರಾಬಲ್ಯ ಮೆರೆಯುತ್ತಿದ್ದು, ಕಳೆದ ಅವಧಿಯಲ್ಲಿ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದ ಕ್ಷೇತ್ರವನ್ನು ಈ ಬಾರಿ ಮತ್ತೆ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ. ಮರು ಆಯ್ಕೆ ಬಯಸಿದ್ದ ಜೆಡಿಎಸ್ ಅಭ್ಯರ್ಥಿ ಆರ್.ಚೌಡರೆಡ್ಡಿ ತೂಪಲ್ಲಿ ದ್ವಿತೀಯ, ಮೂರನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಪೈಪೋಟಿಯೊಡ್ಡಿದ್ದರೂ ಗೆಲುವಿನ ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ಬಾಬು 8500ಕ್ಕೂ ಅಧಿಕ ಪ್ರಾಶಸ್ತ್ಯ ಮತಗಳನ್ನು ಪಡೆದು ಕ್ಷೇತ್ರದಲ್ಲಿ ಅಸ್ಥಿತ್ವವೇ ಕಾಣದಿದ್ದ ಕಾಂಗ್ರೆಸ್ಗೆ ಪ್ರಾತಿನಿಧ್ಯ ಕಲ್ಪಿಸಿಕೊಟ್ಟಿದ್ದಾರೆ. ಪಕ್ಷೇತರರಾದ ಡಿ.ಟಿ.ಶ್ರೀನಿವಾಸ್. ಹಾಲನೂರು ಲೇಪಾಕ್ಷಿ, ಡಾ.ಕೆ.ಎಂ.ಸುರೇಶ್ ಅವ ಮತಗಳಿಕೆಪ್ರಮಾಣ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಪ್ರಯಾಸದ ಗೆಲುವು ತಂದುಕೊಟ್ಟಿದೆ.
ಪ್ರಜ್ಞಾವಂತ ಮತದಾರರ 8199 ಮತ ತಿರಸ್ಕೃತ :
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಲಾವಣೆಯಾಗಿದ್ದ 81,767 ಮತಗಳಲ್ಲಿ ಶೇ.10ರಷ್ಟು 8199 ಪದವೀಧರ ಪ್ರಜ್ಞಾವಂತ ಮತಗಳೇ ತಿರಸ್ಕøತಗೊಂಡಿದ್ದು, ಮೊದಲ ಪ್ರಾಶಸ್ತ್ಯ ಮತವನ್ನು ಸರಿಯಾಗಿ ನಮೂದಿಸಲು ಪದವೀಧರ ಮತದಾರರಿಗೆ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಈ ಮತಗಳು ಪಕ್ಕಾ ಆಗಿದ್ದರೆ ಫಲಿತಾಂಶವೇ ಬೇರೆತರನಾಗುತ್ತಿತ್ತು ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ತುಮಕೂರಿನಲ್ಲಿ ವಿಜಯೋತ್ಸವ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಚಿದಾನಂದಗೌಡ ವಿಜಯಶಾಲಿಯಾದ ಹಿನ್ನೆಲೆಯಲ್ಲಿ ನಗರದ ಬಿಜಿಎಸ್ ವೃತ್ತದಲ್ಲಿ ಬಿಜೆಪಿ ನಗರ ಸಮಿತಿಯಿಂದ ವಿಜಯೋತ್ಸವ ಆಚರಿಸಲಾಯಿತು.ನಗರಾಧ್ಯಕ್ಷ ಹನುಮಂತರಾಜು, ಪಾಲಿಕೆಸದಸ್ಯರುಗಳಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನಯ್ಯ, ವಿಷ್ಣುವರ್ದನ್, ಟೂಡಾ ಸದಸ್ಯ ಜಗದೀಶ್, ಆಶ್ರಯ ಸಮಿತಿ ಸದಸ್ಯ ವಿನಯ್ಜೈನ್, ವೇದಮೂರ್ತಿ, ರಾಜೀವ್ ಆಚಾರ್, ತರಕಾರಿ ಮಹೇಶ್, ಕಾವ್ಯ ಮತ್ತಿತರರು ಪಾಲ್ಗೊಂಡು ಜಯಘೋಷ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
