ತುಮಕೂರು:
ನಗರದ ಪ್ರಮುಖ ವಾಣಿಜ್ಯ ರಸ್ತೆ ಎಂ.ಜಿ.ರಸ್ತೆಯನ್ನು ಸ್ಮಾರ್ಟ್ ಸಿಟಿ ಸಂಸ್ಥೆಯಿಂದ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶನಿವಾರದಿಂದ ಚಾಲನೆ ದೊರೆತಿದ್ದು, ಪುಟ್ಪಾತ್ ಸಮಾನಾಂತರಕ್ಕೆ 750 ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದ್ದು, ನೈಜ ಸ್ಮಾರ್ಟ್ಸಿಟಿ ರಸ್ತೆಯಾಗಿ ಅಭಿವೃದ್ಧಿಪಡಿಸುವರೇ ಕಾದು ನೋಡಬೇಕಿದೆ.
ಕಾಮಗಾರಿ ಚಾಲನೆ ನೀಡುವ ವೇಳೆ ಮಳಿಗೆಗಳಿಗೆ ನೀರು ನುಗ್ಗುವ ಸಮಸ್ಯೆ ಕಾರಣಕ್ಕೆ ಕಾಂಕ್ರೀಟ್ ರಸ್ತೆ ಬದಲಾಗಿ ಡಾಂಬರ್ ರಸ್ತೆಗೆ ಪಟ್ಟುಹಿಡಿದಿದ್ದ ಸ್ಥಳೀಯ ವರ್ತಕರು, ಪಾಲಿಕೆ ಸದಸ್ಯ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಫರೀದಾ ಬೇಗಂ ಮನವೊಲಿಕೆ ಬಳಿಕ ಕಾಂಕ್ರೀಟ್ ರಸ್ತೆಗೆ ಸಹಮತಿಸಿದ್ದು, ಪ್ರಮುಖ ವಾಣಿಜ್ಯ ರಸ್ತೆಯಾದ್ದರಿಂದ ರಸ್ತೆ ಕಾಮಗಾರಿಯನ್ನು 60 ದಿನದೊಳಗೆ ಪೂರ್ಣಗೊಳಿಸಲು ಶಾಸಕರು ಸ್ಮಾರ್ಟ್ಸಿಟಿ ಅಧಿಕಾರಿಗಳು, ಗುತ್ತಿಗೆದಾರರಿಗೆ ಗಡುವು ವಿಧಿಸಿದ್ದಾರೆ.
20 ವರ್ಷ ರಸ್ತೆ ಬಾಳಿಕೆಯ ವಿಶ್ವಾಸ:
ಕಾಮಗಾರಿ ಆರಂಭದ ಕುರಿತು ಪ್ರತಿಕ್ರಿಯಿಸಿದ ಶಾಸಕರು ಸ್ಮಾರ್ಟ್ ಸಿಟಿಯಿಂದ ನಗರದ ಅಶೋಕ ರಸ್ತೆ, ಜೆ.ಸಿ.ರಸ್ತೆ ಹಾಗೂ ಎಂ.ಜಿ.ರಸ್ತೆ ಈ ಮೂರು ವಾಣಿಜ್ಯ ರಸ್ತೆಗಳನ್ನು ಗುಣಮಟ್ಟದ ಕಾಂಕ್ರೀಟ್ ರಸ್ತೆಯಾಗಿಯೇ ಅಭಿವೃದ್ಧಿ ಪಡಿಸಲು ಈಗಾಗಲೇ ಅನುಮೋದನೆ ದೊರೆತಿದ್ದು, ಮತ್ತೆ ಅದನ್ನು ಡಾಂಬರ್ ರಸ್ತೆಯಾಗಿ ಪರಿವರ್ತಿಸಲು ನಿಯಮಾನುಸಾರ ಸಾಧ್ಯವಿಲ್ಲ. ಕಾಂಕ್ರೀಟ್ ರಸ್ತೆಯಿಂದ ಕನಿಷ್ಠ 10 ರಿಂದ 20 ವರ್ಷರಸ್ತೆ ಹಾಳಾಗುವ ಸಮಸ್ಯೆಯಿರುವುದಿಲ್ಲ. ಹಾಲಿ ಇರುವ ಫುಟ್ಪಾತ್ ಅನ್ನಾಗಲೀ, ರಸ್ತೆಯನ್ನಾಗಲೀ ವಿಸ್ತರಿಸಿ ಅಭಿವೃದ್ಧಿ ಪಡಿಸೋಲ್ಲ. ಯಥಾ ಸ್ಥಿತಿ ಫುಟ್ಪಾತ್ ಸಮಕ್ಕೆ ಕಾಂಕ್ರೀಟ್ ಹಾಕಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಅರ್ಧ ಭಾಗ ಮಾಡಿ ನಂತರ ಉಳಿದರ್ಧ ಭಾಗ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಇನ್ನೂ 60 ದಿನದೊಳಗೆ ಕಾಮಗಾರಿ ಮುಗಿಯಲಿದೆ. ಅಲ್ಲಿಯವರೆಗೆ ವರ್ತಕರು, ಪಾಲಿಕೆ ಸದಸ್ಯರು ಸಹಕರಿಸಬೇಕು ಎಂದು ಕೋರಿದ್ದಾರೆ.
ಶಿಲ್ಟ್, ತೆಗೆಸಿ ನೀರು ಸರಾಗವಾಗಿ ಹರಿಯಲು ಕ್ರಮ: ಚರಂಡಿ, ಡ್ರೈನ್ಗಳು 40 ವರ್ಷ ಹಳೆಯದಾಗಿದ್ದು, ಕಸ ಪ್ಲಾಸ್ಟಿಕ್ತ್ಯಾಜ್ಯ, ಮಣ್ಣು ತುಂಬಿ ನೀರು ಸರಾಗವಾಗಿ ಹರಿಯದಂತಾಗಿದೆ. ಚರಂಡಿಯಲ್ಲಿನ ಶಿಲ್ಟ್ ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಅಭಿವೃದ್ಧಿ ಪಡಿಸಲಾಗುವುದು. ಇದಾದ ಬಳಿಕವೂ ನೀರು ನುಗ್ಗುವ ಸಮಸ್ಯೆ ಮುಂದುವರಿದಿದ್ದರೆ ಎರಡು ಬದಿಯಲ್ಲಿ ತಡೆ ನಿರ್ಮಿಸಿ ಕ್ರಮ ವಹಿಸಲಾಗುವುದು. ಮಳಿಗೆಗಳಿಗೆ ನೀರು ನುಗ್ಗದಂತೆ ತಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ವರ್ತಕರಿಗೆ ಈ ಬಗ್ಗೆ ಆತಂಕಬೇಡ. ಕೃಷ್ಣ ಸಿನಿಮಾ ಮಂದಿರದ ಬಳಿ ಕಿರಿದಾದ ರಾಜಗಾಲುವೆಯನ್ನು ವಿಸ್ತರಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸÀಲಾಗುವುದು ಎಂದು ತಿಳಿಸಿದರು.
ಟ್ರಾಫಿಕ್, ಧೂಳಿನ ಕಿರಿಕಿರಿ ತಪ್ಪಿಸಿ:
60 ದಿನದೊಳಗೆ ಕಾಮಗಾರಿ ಮುಗಿಸಲು ಕಾಲಮಿತಿ ನೀಡಿದ್ದರೂ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕಾಮಗಾರಿ ಮುಗಿಯುವವರೆಗೆ ವ್ಯಾಪಾರ ವಹಿವಾಟುಗಳು ಬಂದ್ ಆಗಲಿದ್ದು, ರಸ್ತೆ ಕಾಮಗಾರಿ ವೇಳೆ ಉಂಟಾಗುವ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ವಹಿಸಬೇಕಿದೆ. ಅಂತೆಯೇ ರಸ್ತೆ ಕಾಮಗಾರಿ ವೇಳೆ ಏಳುವ ಧೂಳಿನ ಕಿರಿಕಿರಿ ತಪ್ಪಿಸಲು ಪ್ರತಿನಿತ್ಯ ಕಾಮಗಾರಿಗೆ ಮುನ್ನಾ ನೀರು ಹಾಕುವುದನ್ನು ಕಡ್ಡಾಯ ಮಾಡಬೇಕಿದೆ.
ಕುಸಿಯುವ ಮ್ಯಾನ್ಹೋಲ್ಗೆ ಶಾಶ್ವತ ಪರಿಹಾರ ಅಗತ್ಯ:
ಎಂ.ಜಿ.ರಸ್ತೆಯ ಪ್ರಮುಖ ಪಾಯಿಂಟ್ ಆದ ಮಹದೇವಸ್ಟೋರ್ ಜಂಕ್ಷನ್ ಬಳಿ ಆಗಾಗ್ಗೆ ಯುಜಿಡಿ ಮ್ಯಾನ್ಹೋಲ್ ಕುಸಿದು ಬೃಹತ್ ಗುಂಡಿ ಬೀಳಲಿದ್ದು, ಪದೇ ಪದೇ ಗುಂಡಿ ಬೀಳಲು ಮಣ್ಣು ಸತ್ವ ಕಳೆದುಕೊಂಡಿರುವುದೇ ಕಾರಣ ಎನ್ನಲಾಗಿದೆ. ಸ್ಮಾರ್ಟ್ ಸಿಟಿಯಿಂದ ಕಾಂಕ್ರೀಟ್ ರಸ್ತೆ ಅಭಿವೃದ್ಧಿಪಡಿಸುತ್ತಿರುವಾಗಲೇ ರಸ್ತೆ ಮಧ್ಯೆ ಬರುವ ಈ ಮ್ಯಾನ್ಹೋಲ್ ಕುಸಿಯುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ.
ಲೋಪಗಳು ಮರುಕಳಿಸದಿರಲಿ :
ತುಮಕೂರು ನಗರದ ಮೊದಲ ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಿದ ಜನರಲ್ ಕಾರಿಯಪ್ಪ ರಸ್ತೆ ಪೂರ್ಣ ಮಾದರಿಯಾಗಿ ಅಭಿವೃದ್ಧಿಯಾಗಿಲ್ಲ. ಪುಟ್ಪಾತ್ ಸ್ಲ್ಯಾಬ್ಗಳು ಕಿತ್ತುಬರುತ್ತಿವೆ. ರಸ್ತೆಯಲ್ಲೆ ಮಣ್ಣಿನ ರಾಶಿ ಬೀಳುತ್ತಿದೆ. ಹಿಂದೆ ಅಭಿವೃದ್ಧಿಪಡಿಸಲಾದ ರಸ್ತೆಯಲ್ಲಾದ ಲೋಪಗಳು ಮರುಕಳಿಸದಂತೆ ಕ್ರಮವಹಿಸಲು ಶಾಸಕರೇನೋ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿ ನೈಜ ಸ್ಮಾರ್ಟ್ರಸ್ತೆಯಾಗಿ ಎಂ.ಜಿ.ರಸ್ತೆಯನ್ನು ನಿಗದಿತ ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ. ಮಾದರಿ ಹೆಸರಲ್ಲಿ ಅರೆಬರೆ ಕಾಮಗಾರಿ ಮಾಡಿ ಬಿಟ್ಟರೆ ಸ್ಮಾರ್ಟ್ಸಿಟಿ ಆಶಯಕ್ಕೆ ಕಪ್ಪುಚುಕ್ಕೆಯಾಗಲಿದೆ.
ಪ್ರಮುಖಾಂಶಗಳು
- ಎಂ.ಜಿ.ರಸ್ತೆಯಲ್ಲಿ ಡಾಂಬರ್ ರಸ್ತೆಗೆ ವರ್ತಕರ ಪಟ್ಟು, ಕಾಂಕ್ರೀಟ್ ರಸ್ತೆಗೆ ಶಾಸಕರ ಮನವೊಲಿಕೆ
- ಗಾಯತ್ರಿ ಟಾಕೀಸ್ ಮುಂಭಾಗದಿಂದ –ಗುಂಚಿಚೌಕದವರೆಗೆ 750 ಮೀಟರ್ ರಸ್ತೆ ಅಭಿವೃದ್ಧಿ
- ಚರಂಡಿ ಅಭಿವೃದ್ಧಿಪಡಿಸಿ ನೀರು ಸರಾಗವಾಗಿ ಹರಿಸುವ ಭರವಸೆ
- ಕಾಮಗಾರಿ ಮುಗಿಸಲು 60 ದಿನಗಳ ಕಾಲಮಿತಿ.
- ಕೃಷ್ಣ ಥಿಯೇಟರ್ ಬಳಿ ರಾಜಗಾಲುವೆ ವಿಸ್ತರಿಸಲು ಕ್ರಮ.
ಎಂ.ಜಿ.ರಸ್ತೆ ಜಿಲ್ಲಾ ಕೇಂದ್ರದ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದು, 20 ವರ್ಷ ಸುದೀರ್ಘ ಬಾಳಿಕೆ ಬರಬೇಕೆಂದು ಸ್ಮಾರ್ಟ್ ಸಿಟಿಯಿಂದ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನೇ ಕೈಗೆತ್ತಿಕೊಂಡಿದ್ದು, 60 ದಿನದೊಳಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಬೇಕು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣಕ್ಕೆ ಮಳೆ ಬಂದಾಗ ನೀರು ನುಗ್ಗುವ ಸಮಸ್ಯೆಯನ್ನು ವರ್ತಕರು ಎದುರಿಸುತ್ತಿದ್ದು, ಚರಂಡಿ ದುರಸ್ತಿಗೊಳಿಸಿ ನೀರು ನುಗ್ಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ಹಿಂದೆ ಅಭಿವೃದ್ಧಿಪಡಿಸಲಾದ ರಸ್ತೆಗಳಲ್ಲಾದ ಲೋಪ ಇಲ್ಲಿ ಮರುಕಳಿಸಬಾರದೆಂದು ಎಚ್ಚರವಹಿಸಲು ಸೂಚಿಸಲಾಗಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಮೆನ್ ಹಾಕಲು ಸೂಚಿಸಿರುವೆ.
– ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ.
5 ಇಂಚು ಕಾಂಕ್ರೀಟ್ ರಸ್ತೆ ಪುಟ್ಪಾತ್ ಸಮಾನಾಂತರಕ್ಕೆ ನಿರ್ಮಿಸುವುದರಿಂದ ವರ್ತಕರಲ್ಲಿ ನೀರು ನುಗ್ಗುವ ಆತಂಕವಿದೆ. ಅದನ್ನು ನಿವಾರಿಸುವುದಾಗಿ ಶಾಸಕರು, ಮೇಯರ್ ಹೇಳಿದ್ದಾರೆ. ನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರವಾಗಬೇಕು ಹಾಗೂ ಕಾಲಮಿತಿಯೊಳಗೆ ಕೆಲಸ ಪೂರ್ಣವಾಗಬೇಕು. ನಾಲ್ಕು ಜನ ಕೆಲಸಗಾರರನ್ನು ಇಟ್ಟುಕೊಂಡು ಕಾಮಗಾರಿ ಮುಗಿಸುತ್ತೇವೆಂದರೆ ಆಗೋಲ್ಲ. ಪ್ರಮುಖ ವಾಣಿಜ್ಯ ರಸ್ತೆ ಎಂ.ಜಿ.ರಸ್ತೆಯಾಗಿರುವುದರಿಂದ ಗುಣಮಟ್ಟದ ಕಾಮಗಾರಿ ಬೇಗ ಆಗಬೇಕೆಂಬುದು ಸ್ಥಳೀಯರು ಹಾಗೂ ನಮ್ಮ ಆಗ್ರಹವಾಗಿದೆ.
-ಮಹೇಶ್, ಪಾಲಿಕೆ ಸದಸ್ಯರು.