ತುಮಕೂರು:
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ವಿದ್ಯಾರ್ಥಿ ವೇತನ ಬಾಕಿ ಇದ್ದು ಸರ್ಕಾರ ಕೂಡಲೇ ನೀಡಿ ನೆರವಾಗಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರೋಷನ್ ನವಾಜ್, ಕಳೆದ ವರ್ಷ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಇಲಾಖೆಯು ಕ್ಷುಲ್ಲಕ ಕಾರಣ ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಇನ್ನೂ ಕೆಲವರಿಗೆ ಸ್ಕಾಲರ್‍ಶಿಪ್ ಮಂಜೂರಾದರೂ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಹೇಳಿದರು.
ಕಡಿತಗೊಳಿಸಿರುವ ಅಲ್ಪಸಂಖ್ಯಾತ ಇಲಾಖೆಯ ಪಿಎಚ್‍ಡಿ, ಎಂಫಿಲ್ ಫೆಲೋಶಿಪ್ ಮುಂದುವರೆಸಬೇಕು. ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮಾಸಿಕ 25 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ವಾರ್ಷಿಕ 10 ಸಾವಿರ ರೂ. ನಿರ್ವಹಣಾ ವೆಚ್ಚ ನೀಡಲಾಗುತ್ತಿತ್ತು. ಆದರೆ, ಸರ್ಕಾರ ದಿಢೀರ್ ಆದೇಶ ಹೊರಡಿಸಿ ಮಾಸಿಕ ಪ್ರೋತ್ಸಾಹ ಧನವನ್ನು 10 ಸಾವಿರ ರೂ.ಗಳಿಗೆ ಇಳಿಸಿ, ನಿರ್ವಹಣಾ ವೆಚ್ಚವನ್ನು ಹಿಂತೆಗೆದಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಸ್ಕಾಲರ್‍ಶಿಪ್ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು, ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ಮಂಜೂರಾಗದೆ ಬಾಕಿ ಇರುವ ಎಲ್ಲಾ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕು, ಕಡಿತಗೊಳಿಸಿರುವ ಪಿಎಚ್‍ಡಿ ಫೆಲೋಶಿಪ್ ಆದೇಶ ಹಿಂಪಡೆಯಬೇಕು, ದುರುಪಯೋಗವಾಗುತ್ತಿರುವ ವಿದ್ಯಾರ್ಥಿ ವೇತನದ ಕುರಿತು ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪದೆ ಪದೆ ಸ್ಕಾಲರ್‍ಶಿಪ್ ವಿಚಾರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ನಿವಾರಿಸಬೇಕು ಎಂದು ಒತ್ತಾಯಿಸಿದ ಅವರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರಾಜ್ಯಾದ್ಯಂತ ಸ್ಕಾಲರ್‍ಶಿಪ್ ಕೊಡಿ ಎಂಬ ವಿದ್ಯಾರ್ಥಿ ಆಂದೋಲನ ಹಮ್ಮಿಕೊಂಡು ವಿವಿಧ ಹಂತದ ಹೋರಾಟ ನಡೆಸಲಿದೆ ಎಂದು ಹೇಳಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಇಕ್ಬಾಲ್ ಪಾಷ, ಜಿಲ್ಲಾ ಕಾರ್ಯದರ್ಶಿ ಶೂಮಾನ್, ತೋಫಿಕ್ ಅಹಮದ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ