ಎಂ ಎನ್ ಕೋಟೆ :
ಶತಮಾನಕ್ಕೊಮ್ಮೆ ಭೀಕರ ಪರಿಸ್ಥಿತಿ ಎದುರಾಗುವುದು ಮಾನವೀಯ ಧರ್ಮಗಳ ಪುನಶ್ಚೇತಗೊಳಿಸಲು ಎಂಬ ಅರಿವು ಪ್ರಸ್ತುತ ದಿನದಲ್ಲಿನ ಕರೋನಾ ದುಸ್ಥಿತಿಯೇ ಜೀವಂತ ಉದಾಹರಣೆಯಾಗಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ಶಿವಯೋಗೀಶ್ವರ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಬಸವಾಪಟ್ಟಣ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕರಿಯಮ್ಮದೇವಿ ದೇವಾಲಯದ ರಾಜಗೋಪುರ ಶಿಲಾನ್ಯಾಸ ಹಾಗೂ ಮಹಾದ್ವಾರ ಸ್ಥಾಪನೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ ವೈರಸ್ಗೆ ಇಂದಿಗೂ ಔಷಧಿ ದೊರೆಕಿಲ್ಲ. ಸಾವಿನ ಸಂಖ್ಯೆ ಲೆಕ್ಕವಿಲ್ಲವಾಗಿದ್ದು, ಧರ್ಮದ ಆಚರಣೆಯ ಲೋಪವನ್ನು ಈ ರೀತಿ ಪ್ರಕೃತಿಯೇ ನೀಡಿರುವುದು ಅರಿತುಕೊಳ್ಳುವ ಕೆಲಸ ಜನರಿಂದ ಆಗಬೇಕಿದೆ ಎಂದರು.
ತಂದೆ ತಾಯಿಗಳಿಗೆ ಅನ್ನ ಹಾಕುವ ಮಕ್ಕಳಿಲ್ಲದಿರುವುದು ವಿಪರ್ಯಾಸ ಎನಿಸಿದೆ. ವೃದ್ದಾಶ್ರಮಗಳು ಗ್ರಾಮೀಣ ಭಾಗದಲ್ಲೂ ಹುಟ್ಟುಕೊಳ್ಳುವ ಕೆಟ್ಟ ಪರಿಸ್ಥಿತಿ ಕಾಣಲಾಗುತ್ತಿದೆ. ಧರ್ಮಪಾಲನೆಯನ್ನು ಮರೆತು ಸ್ವೇಚ್ಛಾಚಾರಕ್ಕೆ ತಿರುಗಿದ ಕಾಲಕ್ಕೆ ಪ್ರಕೃತಿಯೇ ಬುದ್ದಿ ಕಲಿಸಲಿದೆ. 60 ಸಂವತ್ಸರಗಳಿಗೊಮ್ಮೆ ಧರ್ಮದ ಮರುಹುಟ್ಟು ಭೀಕರ ಸಾವು ನೋವುಗಳ ಮೂಲಕ ಅಗಿರುವ ನಿದರ್ಶನ ಸಾಕಷ್ಟಿದೆ. ಈ ಹಿಂದೆ ಪ್ಲೇಗ್, ಕಾಲರಾ ಹೀಗೆ ಅನೇಕ ರೋಗಗಳು ಮನುಷ್ಯನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಬರುತಿತ್ತು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಯುವಕರು ಧರ್ಮದ ಆಚರಣೆಗೆ ಒತ್ತು ನೀಡಬೇಕು ಎಂದ ಅವರು, ವೀರಶೈವ ಧರ್ಮ ಶ್ರೇಷ್ಠ ಎನಿಸಿದೆ. ಮನುಕುಲದ ಉದ್ದಾರಕ್ಕೆ ಈ ಧರ್ಮ ಪ್ರಚಲಿತಗೊಳ್ಳುತ್ತಿದೆ. ಇದರ ಪಾಲನೆಗೆ ಯುವಕರು ಮುಂದಾಗಬೇಕು ಎಂದರು.
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕೇವಲ ಆಸೆಗಳಿಗೆ ಮಾತ್ರ ಸೀಮಿತ ಬದುಕು ಕಟ್ಟಿಕೊಂಡು ಸಂಬಂಧಗಳಿಗೆ ಗೌರವ ನೀಡದೆ ಸಂಕುಚಿತ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಗುಣ ಗ್ರಾಮೀಣ ಭಾಗದಲ್ಲೂ ಕಾಣಿಸಿಕೊಳ್ಳುತ್ತಿರುವುದು ದೌರ್ಭಾಗ್ಯ. ದುಡಿಮೆಯೇ ದೇವರು ಎಂಬ ಮಾತಿನಂತೆ ಬಾಳಲು ಮುಂದಾಗಿ ಹಣ ಸಂಪಾದನೆಯೇ ಸಕಲ ಎಂಬ ದುರಾಸೆ ಬುದ್ದಿಯಿಂದ ಹೊರ ಬರಬೇಕಿದೆ. ಒಟ್ಟು ಕುಟುಂಬ ಬದುಕಿಗೆ ಅರ್ಥ ಕೊಡುತ್ತದೆ. ವಿಭಕ್ತತನ ಬಿಟ್ಟು ಒಗ್ಗೂಡಿ ಧರ್ಮಪಾಲನೆ ಜತೆ ಸಹೋದರತ್ವ ಬೆರಸಿ ಬದುಕು ಸಾಗಿಸುವ ಗುಣ ಬೆಳೆಸಿಕೊಳ್ಳಬೇಕು. ನಗರ ಪ್ರದೇಶದಲ್ಲಿ ಈ ಬದುಕು ಕಾಣುವುದಿಲ್ಲ. ಗ್ರಾಮೀಣ ಶೈಲಿಯಲ್ಲಿ ಉತ್ತಮ ಆರೋಗ್ಯ ಸಮಾಜ ಕಾಣಸಿಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ, ಜಾತ್ಯಾತೀತವಾಗಿ ಧಾರ್ಮಿಕಾಚರಣೆ ನಡೆಸುವ ಬಸವಾಪಟ್ಟಣ ಗ್ರಾಮದಲ್ಲಿ ಕರೋನಾ ಜಾಗೃತಿಯ ನಡುವೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪುರಾತನ ಕರಿಯಮ್ಮದೇವಿ ದೇವಾಲಯ ಜೀರ್ಣೋದ್ದಾರ ಕಾರ್ಯಕ್ಕೆ ಸುತ್ತಲಿನ ಗ್ರಾಮಸ್ಥರ ಸಹಕಾರ ಸಿಕ್ಕಿದೆ. ಸತ್ಯ ನಿಷ್ಠೆಯಲ್ಲಿ ಭಕ್ತರು ಈ ದೇವಿಯ ಆರಾಧನೆ ಮಾಡುತ್ತಾರೆ. ದೇಣಿಗೆ ಸಂಗ್ರಹ ನಡೆಸಲಾಗಿದೆ. ಈ ನಿಟ್ಟಿನಲ್ಲಿ ನೂತನ ದೇವಾಲಯಕ್ಕೆ ಭೂಮಿಪೂಜೆ ಶುಭ ಸಂಕೇತವಾಗಿದೆ.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನಾ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆಗಮಿಸಿ ಪೂಜೆ ಸಲ್ಲಿಸಿ ತೆರಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಡಾ.ನವ್ಯಾಬಾಬು, ಸಾಹಿತಿ ಪ್ರೊ.ಡಿ.ಚಂದ್ರಪ್ಪ, ಮುಖಂಡರಾದ ಎಸ್.ಡಿ.ದಿಲೀಪ್ಕುಮಾರ್, ಮಹೇಶ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಅಭಿವೃದ್ದಿ ಸಮಿತಿ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷ ಶಿವರುದ್ರಯ್ಯ, ಕಾರ್ಯದರ್ಶಿ ಪಾಲಯ್ಯ, ಖಜಾಂಚಿ ಗಂಗಾಧರ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ