ತುಮಕೂರು:
ಸಿದ್ಧಗಂಗಾ ಮಠಕ್ಕೆ ಸಂಪರ್ಕ ಬೆಸೆಯುವ ಕ್ಯಾತ್ಸಂದ್ರ ರೈಲ್ವೆಗೇಟ್ ಅಂಡರ್ಪಾಸ್ ಕಾಮಗಾರಿ ಆರಂಭಗೊಂಡು ಎರಡೂವರೆ ತಿಂಗಳು ಸಮೀಪಿಸುತ್ತಿದ್ದು, ರೈಲ್ವೆ ಇಲಾಖೆ ಹಳಿಯ ಕೆಳಗೆ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯೆನೋ ಭರದಿಂದ ಸಾಗುತ್ತಿದೆ. ಆದರೆ ರಾಜ್ಯ ಸರಕಾರದಿಂದ ಕಾಮಗಾರಿಗೆ ಅಗತ್ಯವಾದ ಭೂಸ್ವಾಧೀನಕ್ಕೆ ಇನ್ನೂ ತ್ವರಿತ ಕ್ರಮವಾಗದಿರುವುದು ಅಂಡರ್ಪಾಸ್ ಕಾಮಗಾರಿ ವಿಳಂಬದ ಸ್ಪಷ್ಟ ಲಕ್ಷಣಗಳು ಗೋಚರಿಸಿದೆ.
2.3 ಕೋಟಿ ವೆಚ್ಚದಲ್ಲಿ ಮೂರು ತಿಂಗಳ ಕಾಲಮಿತಿ ಹಾಕಿಕೊಂಡು ಕಾಮಗಾರಿ ಮುಗಿಸುವ ಗುರಿ ಹಾಕಿಕೊಳ್ಳಲಾಗಿತ್ತಾದರೂ, ಸರ್ವೀಸ್ ರಸ್ತೆ, ಅಂಡರ್ಪಾಸ್ ರಸ್ತೆ ಆರಂಭದಲ್ಲಿ(ಕ್ಯಾತ್ಸಂದ್ರದ ಮೂಲಕ ಪ್ರವೇಶ ಪಡೆಯುವ ಸ್ಥಳ) ಕಾಮಗಾರಿಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ. ಇದನ್ನು ನೋಡಿದರೆ ಮಹಾಶಿವರಾತ್ರಿ ಸಂದರ್ಭದ ಸಿದ್ಧಗಂಗೆ ಜಾತ್ರೆ ವೇಳೆಗೂ ಅಂಡರ್ಪಾಸ್ ಸಿದ್ದವಾಗುವುದು ಅನುಮಾನ ಮೂಡಿಸಿದೆ.
ಸದ್ಯ ರೈಲ್ವೇ ನಿಲ್ದಾಣದ ಸಂಪರ್ಕ ಕಲ್ಪಿಸುವ ಭಾಗದಲ್ಲಿ ಅಂಡರ್ಪಾಸ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಹಳಿಯ ಕೆಳಗೆ 24.36 ಮೀ ಉದ್ದ, 3 ಮೀಟರ್ ಆಳ ಹಾಗೂ 6 ಮೀಟರ್ ಅಗಲದ ಕಾಂಕ್ರೀಟ್ ಸೇತುವೆಯೇನೋ ನಿರ್ಮಾಣ ಹಂತದಲ್ಲಿದೆ. ಆದರೆ ಕ್ಯಾತ್ಸಂದ್ರ ಕಡೆಯಿಂದ ರೈಲ್ವೇ ಬ್ರಿಡ್ಜ್ ಪ್ರವೇಶಿಸುವ ಭಾಗದಲ್ಲೇ ಅಗತ್ಯ ಭೂಮಿ ಲಭ್ಯವಿಲ್ಲದೇ ಮಠದ ಭಾಗದ ಕಾಮಗಾರಿಯಷ್ಟೇ ಚುರುಕು ಪಡೆದಿದೆ. ಬೇಗ ಭೂಮಿ ಒದಗಿಸಿಕೊಟ್ಟರೆ ನಾವು ಕಾಮಗಾರಿ ಬೇಗ ಮುಗಿಸುತ್ತೇವೆಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ಪಿಡಬ್ಲ್ಯೂಡಿ ಅಧಿಕಾರಿಗಳು ಭೂಮಿ ವಶಪಡಿಸಿಕೊಳ್ಳುವ ಸಂಬಂಧ ಕೆಲವು ತಾಂತ್ರಿಕ ಅನುಮತಿ ಬೇಕಿದ್ದವು. ಆ ಕಾರಣಕ್ಕೆ ತಡವಾಗಿದೆ ಬಿಟ್ಟರೆ ಹಣಕಾಸಿನ ತೊಂದರೆಯಿಲ್ಲ ಶೀಘ್ರ ಪ್ರಕ್ರಿಯೆ ನಡೆಯಲಿದೆ ಎನ್ನುತ್ತಿದ್ದಾರೆ.
ಸ್ವಾಧೀನ ಪ್ರಕ್ರಿಯೆಗೆ 5 ಕೋಟಿ ಮಂಜೂರು:
ಕ್ಯಾತ್ಸಂದ್ರ ರೈಲ್ವೇ ಅಂಡರ್ಪಾಸ್, ಹಾಗೂ ರೈಲ್ವೇ ಫ್ಲೈ ಓವರ್ ಬ್ರಿಡ್ಜ್ ಕಾಮಗಾರಿಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆಗೆಂದೇ ರಾಜ್ಯ ಸರಕಾರ 5 ಕೋಟಿ ಮಂಜೂರು ಮಾಡಿ ಎರಡು ತಿಂಗಳು ಕಳೆದಿದೆ. ಎರಡು ಕಾಮಗಾರಿಗೆ ಸುಮಾರು 18ಮಂದಿ ಸಂತ್ರಸ್ತರಿಗೆ ಪರಿಹಾರ ನೀಡಿ ಭೂಮಿ ಪಡೆಯಬೇಕಿದ್ದು, ಮೊದಲಿಗೆ ಮಾಲೀಕರೊಡನೆ ಒಪ್ಪಿಸಿ ಭೂಮಿ ಖರೀದಿ ಇಲ್ಲವೇ ಭೂ ಸ್ವಾಧೀನ ಪ್ರಕಟಣೆ ಹೊರಡಿಸಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಈ ಸಂಬಂಧ ಪಿಡಬ್ಲ್ಯೂಡಿ ಇಲಾಖೆಯ ಪ್ರಸ್ತಾವನೆ ಡಿಸಿ, ಎಸಿ ಅಂಗಳದಲ್ಲಿದ್ದು, ಜಾಗದ ಮಾಲೀಕರಿಗೆ ಈ ಸಂಬಂಧ ಪಿಡಬ್ಲ್ಯೂಡಿ ಇಲಾಖೆಯಿಂದ ಲಿಖಿತ ಪೂರ್ವ ಸಮ್ಮತಿ ಘೋಷಣೆ ನಮೂನೆ ಪತ್ರ ನೀಡಿ ಭೂ ಸ್ವಾಧೀನ ಪತ್ರಕ್ಕೆ ಒಪ್ಪಗೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲು ಸೂಚಿಸಲಾಗಿದೆ. ಆದರೆ ಕೊಟ್ಟಿರುವ ಘೋಷಣಾ ಪತ್ರದಲ್ಲಿ ಇಲಾಖೆ ಹೆಸರಗಲೀ, ಅಧಿಕಾರಿಗಳ ಪದನಾಮವಾಗಲೀ ಇಲ್ಲದಿರುವುದು ಜಾಗದ ಮಾಲೀಕರನ್ನು ಗೊಂದಲಕ್ಕೀಡುಮಾಡಿದೆ.
ನಮ್ಮನ್ನು ಕರೆದು ಮಾತಾಡಿಸಬೇಕಲ್ಲವೇ?: ಕಾಮಗಾರಿ ನಡೆಸಲು ನಮ್ಮ ಅಭ್ಯಂತರವಿಲ್ಲ. ಆದರೆ ಇದು ನಮ್ಮ ಪೂರ್ವಿಕರ ಆಸ್ತಿ. ಟೀ ಅಂಗಡಿ, ಪೆಟ್ಟಿಗೆ ಅಂಗಡಿಗಳನ್ನು ಇಟ್ಟು ಜೀವನ ಸಾಗಿಸುತ್ತಿದ್ದೇವೆ. 15 ದಿನದ ಹಿಂದೆ ಒಂದು ಪತ್ರ ನೀಡಿ ನಿಮ್ಮ ಮಾಹಿತಿ ಒಪ್ಪಿಗೆ ಇದೆಯೇ ಇಲ್ಲವೇ ಎಂದು ತಿಳಿಸಿ ಎಂದು ಹೋದವರು ಇನ್ನೂ ವಾಪಸ್ ತೆಗೆದುಕೊಂಡಿಲ್ಲ. ನಮ್ಮ ಭೂಮಿಗೆ ಏನು ದರ ಕೊಡುತ್ತಾರೆ. ಇವೆಲ್ಲದರ ಬಗ್ಗೆ ನಮ್ಮನ್ನು ಕರೆಸಿ ಸಮಾಲೋಚಿಸಬೇಕು. ಇದೇನು ಮಾಡದೇ ಕಾಮಗಾರಿ ಹತ್ತಿರಕ್ಕೆ ಬಂದಾಗ ಜಾಗ ಬಿಟ್ಟುಕೊಡಿ ಎಂದರೆ ನಾವ್ಯಾರು ಸುಮ್ಮನಿರುವುದಿಲ್ಲ ಎಂದು ಜಾಗದ ಮಾಲೀಕರುಗಳು ಪ್ರತಿಕ್ರಿಯಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆಯ ತೊಡಕು ನಿವಾರಿಸಿಸಿ ಅಂಡರ್ಪಾಸ್ ಓವರ್ಬ್ರಿಡ್ಜ್ ಕಾಮಗಾರಿ ಬೇಗ ಪೂರ್ಣಗೊಳಿಸದಿದ್ದರೆ, ಇನ್ನಷ್ಟು ತಿಂಗಳುಗಳ ಕಾಲ ಮಠದ ನೇರ ಪ್ರವೇಶ ಬಂದ್ ಆಗಲಿದೆಯಲ್ಲದೆ ಬಸವೇಶ್ವರ ಬಡಾವಣೆ, ಬಸವಾಪಟ್ಟಣ, ಬಂಡೇಪಾಳ್ಯ, ಶ್ರೀನಗರ, ಮಾರನಾಯ್ಕನಪಾಳ್ಯದ ನಿವಾಸಿಗಳು ಅಗ್ನಿಶಾಮಕದಳ ದಳದ ಪಕ್ಕದಲ್ಲಿ ಹೋಗುವ ರಸ್ತೆಯನ್ನು(ಎಚ್ಎಂಟಿ ಎಲ್ಸಿ ಗೇಟ್ ನಂಬರ್ 38ರಲ್ಲಿ) ಬಳಸುವುದು ಅನಿವಾರ್ಯವಾಗಲಿದೆ. ಇದು ಬಹಳ ದೂರ, ಸುತ್ತಿಬಳಸಿ ಬರಬೇಕೆಂಬುದು ನಾಗರಿಕರ ದೂರಾಗಿದೆ.
ಭೂಸ್ವಾಧೀನಕ್ಕೆ ಏನಾದರೂ ಸಮಸ್ಯೆಯೇ?
ಕ್ಯಾತ್ಸಂದ್ರ ರೈಲ್ವೆ ಕೆಳಸೇತುವೆ, ಮೇಲ್ಸುತೆವೆ ಕಾಮಗಾರಿಗೆ ಅಗತ್ಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 15 ರಿಂದ 18 ಮಂದಿ ಫಲಾನುಭವಿಗಳ ಪಟ್ಟಿ ಮಾಡಿದ್ದು, ಅವಶ್ಯಕವಾದ ಜಾಗದ ಸರ್ವೆ ಮಾಡಿ ಗುರುತು ಹಾಕಲಾಗಿದೆ ಎನ್ನುವ ಪಿಡಬ್ಲ್ಯೂಡಿ ಅಧಿಕಾರಿಗಳು ಈ ಸಂಬಂಧ ರಾಜ್ಯ ಸರಕಾರದಿಂದ ಅನುದಾನವೂ ಮಂಜೂರಾಗಿದೆ. ಕ್ಯಾತ್ಸಂದ್ರದ ಮೂಲಕವೇ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆರು ಪಥದ ಹೆದ್ದಾರಿ ಸಹ ನಿರ್ಮಾಣವಾಗುವುದರಿಂದ ಕ್ಯಾತ್ಸಂದ್ರ ಭಾಗದ ಮಠದ ಕಡೆಯಲ್ಲೇ ಹೆದ್ದಾರಿಯ ಮೇಲ್ಸುತೆವೆ ಹಾದು ಹೋಗಲಿದೆ. ನಾವು ಸಹ ಕ್ಯಾತ್ಸಂದ್ರ ಮಠದ ಪ್ರವೇಶರಸ್ತೆಯಿಂದಲೇ ರೈಲ್ವೇ ಓವರ್ ಬ್ರಿಡ್ಜ್ ಪ್ರಾರಂಭಿಸಲಿದ್ದು, ಮುಂದೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಪ್ರಾಧಿಕಾರದವರೊಡನೆಯೂ ಸಮಾಲೋಚಿಸಿ ಅನುಮತಿಗಾಗಿ ಕಾದಿದ್ದೇವು.ಈಗ ಅನುಮತಿ ಸಿಕ್ಕಿದ್ದು. ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಖರೀದಿಸಬೇಕೆ? ಇಲ್ಲವೇ ಸ್ವಾಧೀನ ಪಡಿಸಿಕೊಳ್ಳಬೇಕೆ ಎಂಬುದರ ಕಡತ ಉಪವಿಭಾಗಾಧಿಕಾರಿಗಳ ಹಂತದಲ್ಲಿದ್ದು, ಶೀಘ್ರ ಭೂಮಿ ವಶಕ್ಕೆ ಪಡೆದು ಕಾಮಗಾರಿ ಮುಗಿಸಲು ಅನವು ಮಾಡಿಕೊಡಲಾಗುತ್ತದೆ ಎಂದು ಪಿಡಬ್ಲ್ಯೂಡಿ ಎಇಇ ಶಂಭು ಅವರು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ನಮಗೆ ಪಿಡಬ್ಲ್ಯೂಡಿ ಇಲಾಖೆಯವರು 15 ದಿನಗಳ ಹಿಂದೆು ಒಂದು ಬಿಳಿ ಕಾಗದದಲ್ಲಿ ನೀವು ಮಾಹಿತಿ ಕೊಡಿ ಮೂರು ದಿನ ಬಿಟ್ಟು ಬರುತ್ತೇವೆ ಎಂದು ಹೇಳಿ ಹೋದವರು ಇನ್ನೂ ವಾಪಸ್ ಪಡೆದಿಲ್ಲ. ಈ ಪತ್ರದಲ್ಲಿ ಇಲಾಖೆಯ ಯಾವುದೇ ಅಧಿಕೃತ ಮೊಹರಿಲ್ಲ. ನಮಗೆ ಗೊಂದಲವಿದೆ. ನಮ್ಮನ್ನು ಕರೆಸಿ ಮಾತನಾಡಿಸಬೇಕು. ಪರಿಹಾರದ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ನೋಟಿಸ್ ಸಹ ನೀಡಿಲ್ಲ. ಇದ್ಯಾವುದನ್ನು ಮಾಡದೇ ಮುಂದೆ ಏಕಾಏಕಿ ಬಂದು ಅಂಗಡಿ ತೆಗೆಯಿರಿ, ಜಾಗ ಖಾಲಿ ಮಾಡಿ ಎಂದು ಹೇಳಿದರೆ ನಮ್ಮಿಂದ ಸಾಧ್ಯವಿಲ್ಲ.
-ಕಾಂತರಾಜು, ಜಾಗದ ಮಾಲೀಕರು.