ಚಿಕ್ಕನಾಯಕನಹಳ್ಳಿ :
ವಿರೋಧಿಗಳನ್ನು ಬೇಕಾದರೆ ಎದುರಿಸಬಹುದು, ಜಯಿಸಬಹುದು ಆದರೆ ನಮ್ಮಲ್ಲೇ ಇರುವ ಹಿತಶತ್ರುಗಳಿಂದ ಏನನ್ನೂ ಮಾಡಲಾಗುವುದಿಲ್ಲ, ಅವರು ನಮ್ಮೊಳಗೆ ಇದ್ದು ತೊಂದರೆ ನೀಡುತ್ತಾರೆ, ಹಾಗಾಗಿ ತಾಲ್ಲೂಕಿನ ನಮ್ಮೆಲ್ಲಾ ಕಾರ್ಯಕರ್ತರು ತಮ್ಮ, ತಮ್ಮ ಊರುಗಳಲ್ಲಿರುವ ಭಿನ್ನಾಭಿಪ್ರಾಯ ಬದಿಗಿಡಿ, ಒಟ್ಟಾಗಿ ಸಂಘಟನೆ ಮಾಡಿ ನಮ್ಮ ಗುಂಪನ್ನು ಬಲಪಡಿಸಿ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಗೋಡೆಕೆರೆ, ಜೆ.ಸಿ.ಪುರ, ಹೊನ್ನೆಬಾಗಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಚುನಾವಣೆಗೆ ಗ್ರಾಮ ಪಂಚಾಯಿತಿ ಚುನಾವಣೆಯೇ ಅಡಿಗಲ್ಲು, ಪಂಚಾಯ್ತಿ ವ್ಯಾಪ್ತಿಯಲ್ಲಿ ಪಕ್ಷ ಬಲಪಡಿಸಿದರೆ ನಾವು ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಕ್ಷೇತ್ರಗಳನ್ನು ಭರ್ಜರಿಯಾಗಿ ಗೆಲ್ಲಬಹುದು, ನಾನು ವಿಧಾನಸಭೆ ಚುನಾವಣೆಗೆ ಯಾವ ರೀತಿ ಸಮರ್ಪಣೆ ನೀಡುತ್ತೇನೋ ಅದೇ ರೀತಿ ಈಗಿನ ಗ್ರಾಮ ಪಂಚಾಯಿತಿ ಚುನಾವಣೆಗೂ ಪಕ್ಷ ಬಲಪಡಿಸಲು, ಸಂಘಟನೆ ಮಾಡಲು ನನ್ನನ್ನು ತೊಡಗಿಸಿಕೊಂಡಿದ್ದೇನೆ, ಮುಂದೆಯೋ ಪಕ್ಷ ಬಲಪಡಿಸಲು ನನ್ನ ಜೊತೆ ಎಲ್ಲರ ಸಹಕಾರ ಅಗತ್ಯ ಎಂದರು.
ಗ್ರಾಮ ಪಂಚಾಯ್ತಿ ಚುನಾವಣೆಯ ಮೂಲಕ ಹೆಚ್ಚಿನ ಜನರನ್ನು ಪಕ್ಷದಿಂದ ಗುರುತಿಸಲು ಸಾಧ್ಯ, ತಳಮಟ್ಟದಲ್ಲಿ ಜನಗಳ ಸೇವೆ ಮಾಡಲು ಗ್ರಾಮ ಪಂಚಾಯಿತಿ ಸೇವೆ ಅಗತ್ಯ, ನಮ್ಮ ಪಕ್ಷದಲ್ಲಿ ಎಲ್ಲಾ ವರ್ಗದವರಿಗೂ ಆಧ್ಯತೆ ನೀಡುತ್ತೇವೆ ಅವರೆಲ್ಲರಿಗಾಗಿ ಪ್ರಚಾರವನ್ನೂ ಮಾಡುತ್ತೇವೆ, ಚುನಾವಣೆಯಲ್ಲಿ ನಮಗೆ ಗೆಲುವೇ ಮಾನದಂಡವಾಗಬೇಕು ಎಂದರು.
ಇಂದು ರಾಜಕೀಯ ಶಕ್ತಿ ಎಲ್ಲರಿಗೂ ಬೇಕು, ಪ್ರತಿ ಸಮುದಾಯದವರೂ ಬೆಳೆಯಬೇಕು, ಕಾರ್ಯಕರ್ತರು ನಿಮ್ಮ ಭಿನ್ನಾಭಿಪ್ರಾಯಗಳನ್ನು ತೊರೆಯಿರಿ, ಪಂಚಾಯ್ತಿ ಅಧಿಕಾರ ಹಿಡಿಯಲು ಶ್ರಮಿಸೋಣ, ಪ್ರತಿಷ್ಠೆ ಬದಿಗಿಡೋಣ, ಮುಕ್ತವಾದ ಮನಸ್ಸಿನಿಂದ ಪಕ್ಷದಲ್ಲಿ ತೊಡಗಿಕೊಳ್ಳೋಣ ಎಂದು ಹೇಳಿದರು.
ತಮ್ಮ ಪಂಚಾಯ್ತಿಗೆ ಯಾವ ವ್ಯಕ್ತಿ ಸೂಕ್ತ, ಯಾರು ಸ್ಪರ್ಧಿಸಿದರೆ ಪಂಚಾಯ್ತಿ ಅಭಿವೃದ್ದಿಯಾಗುತ್ತದೆ, ಜನರ ಕಷ್ಟಕ್ಕೆ ಸ್ಪಂದಿಸುವವರು ಯಾರು ಎಂಬುದನ್ನು ಗ್ರಾಮಸ್ಥರೇ ಒಟ್ಟಾಗಿ ಕೂತ ಒಮ್ಮತ ಅಭ್ಯರ್ಥಿಯನ್ನು ನಮ್ಮ ಪಕ್ಷದ ಪರವಾಗಿ ಸ್ಪರ್ಧಿಸಲು ಅವಕಾಶ ನೀಡಿ ಗೆಲುವು ನಮ್ಮದಾಗುತ್ತದೆ, ಪಂಚಾಯ್ತಿ ಅಧಿಕಾರ ಪಡೆದವರು ಗ್ರಾಮ ಅಭಿವೃದ್ದಿ ಮಾಡಲು ಶ್ರಮಿಸಬೇಕು ಎಂದು ಹೇಳಿದ ಅವರು ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನೀರಿನ ಸಮಸ್ಯೆ ಬಗೆಹರಿಸಲು, ಬೋರ್ ವೆಲ್ ಹಾಕಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರ ಇದೆ, ಕಾರ್ಯಕರ್ತರು ಗ್ರಾ.ಪಂ.ಅಧಿಕಾರ ಪಡೆದು ಜನರ ಸೇವೆ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿ ಹೇಳಿದರು.
ಸಭೆಯಲ್ಲಿ ಜಿ.ಪಂ.ಸದಸ್ಯ ಕಲ್ಲೇಶ್, ತಾ.ಪಂ.ಸದ್ಯ ಸಚಿನ್, ಮುಖಂಡ ಶೇಷಯ್ಯ, ಶಿವಾನಂದ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ತಮ್ಮ ಪಂಚಾಯ್ತಿಗೆ ಯಾವ ವ್ಯಕ್ತಿ ಸೂಕ್ತ, ಯಾರು ಸ್ಪರ್ಧಿಸಿದರೆ ಪಂಚಾಯ್ತಿ ಅಭಿವೃದ್ದಿಯಾಗುತ್ತದೆ, ಜನರ ಕಷ್ಠಕ್ಕೆ ಸ್ಪಂದಿಸುವವರು ಯಾರು ಎಂಬುದನ್ನು ಗ್ರಾಮಸ್ಥರೇ ಒಟ್ಟಾಗಿ ಕೂತ ಒಮ್ಮತ ಅಭ್ಯರ್ಥಿಯನ್ನು ನಮ್ಮ ಪಕ್ಷದ ಪರವಾಗಿ ಸ್ಪರ್ಧಿಸಲು ಅವಕಾಶ ನೀಡಿ ಗೆಲುವು ನಮ್ಮದಾಗುತ್ತದೆ, ಪಂಚಾಯ್ತಿ ಅಧಿಕಾರ ಪಡೆದವರು ಗ್ರಾಮ ಅಭಿವೃದ್ದಿ ಮಾಡಲು ಶ್ರಮಿಸಬೇಕು.
-ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರು. ಚಿ.ನಾ.ಹಳ್ಳಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ