ಕೊರಟಗೆರೆ: ಹಂದಿ- ನಾಯಿ ಹಾವಳಿಗೆ ಪ.ಪಂ ಸಭೆಯಲ್ಲಿ ಆಕ್ರೋಶ!!

ಕೊರಟಗೆರೆ: 

     ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಹಂದಿ ನಾಯಿಗಳ ಹಾವಳಿ, ರಸ್ತೆ ಬದಿ, ಪಾದಚಾರಿ ರಸ್ತೆ, ಬಸ್ಟ್ಯಾಂಡ್ ಪ್ರಮುಖ ವೃತ್ತದಲ್ಲಿ ಅನದಿಕೃತವಾಗಿ ತಲೆ ಎತ್ತಿರುವ ಅಂಗಡಿಗಳ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ.ಪಂ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.

      ಪಟ್ಟಣದ ಪ.ಪಂ ಸಭಾಂಗಣದಲ್ಲಿ ಶುಕ್ರವಾರದಂದು ಅಧ್ಯಕ್ಷೆ ಮಂಜುಳ ಸತ್ಯನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಹಲವು ತಿಂಗಳಿನಿಂದ ಹಂದಿ ಮತ್ತು ನಾಯಿಗಳ ಹಾವಳಿ ಹೆಚ್ಚಾಗಿದೆ. ಹಾಗೂ ಪಟ್ಟಣದ ಪ್ರಮುಖ ರಸ್ತೆಯ ಪಾದಚಾರಿ ಹಾಗೂ ಚರಂಡಿಗಳ ಮೇಲೆ ಅನದಿಕೃತವಾಗಿ ನೂರಾರು ಪೆಟ್ಟಿಗೆ ಅಂಗಡಿಗಳು ತಲೆಎತ್ತಿವೆ. ಆದರೂ ಆರೋಗ್ಯ ನಿರೀಕ್ಷಕ ಸುಧಾಸುಮ್ಮನೆ ಪಟ್ಟಣ ಪಂಚಾಯ್ತಿಗೆ ಬಂದು ಕಾಲಹರಣ ಮಾಡಿಕೊಂಡು ಹೋಗುತ್ತಿದ್ದು, ಇದರಬಗ್ಗೆ ಮುಖ್ಯಾಧಿಕಾರಿ ಗಮನಹರಿಸಬೇಕು ಎಂದು ಪ.ಪಂ ಸದಸ್ಯರ ಎ.ಡಿ ಬಲರಾಮಯ್ಯ ಹರಿಹಾಯ್ದರು. ಇದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ದ್ವನಿಗೂಡಿಸಿದರು. ಇದಲ್ಲದೇ ಬಸ್‍ಸ್ಟಾಂಡ್ ವೃತ್ತ ಸೇರಿದಂತೆ ಸಜ್ಜನರ ಬೀದಿಗೆ ಹೋಗುವ ದಾರಿಯನ್ನು ಮುಕ್ಕಾಲು ಭಾಗ ಪೆಟ್ಟಿಗೆ ಅಂಗಡಿಗಳು, ತಳ್ಳುವ ಗಾಡಿಗಳು ರಸ್ತೆಯನ್ನು ಅತೀಕ್ರಮ ಮಾಡಿಕೊಂಡು ಸಾರ್ವಜನಿಕರಿಗೆ ಅತ್ಯಂತ ಕಷ್ಟ ಮತ್ತು ನೋವಿನ ಸಂಗತಿಯಾಗಿರುತ್ತದೆ. ಅಲ್ಲಿನ ಕೆಲವು ಸುತ್ತ ಮುತ್ತಲ ಅಂಗಡಿ ಮಾಲೀಕರು ಪ.ಪಂ ಜಾಗವನ್ನು ವ್ಯಾಪಾರಿಗಳಿಗೆ ನೀಡಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ಈ ಮಧ್ಯೆ ಪಟ್ಟಣ ಪಂಚಾಯ್ತಿಗೆ ವಾರ್ಷಿಕದ 75 ಲಕ್ಷ, ಅಂಗಡಿ ಮಳಿಗೆಗಳ 33 ಲಕ್ಷ ರೂಗಳ ಕಂದಾಯ ಬಾಕಿಯಲ್ಲಿ 37.1 ಲಕ್ಷ ರೂಗಳು ವಾರ್ಷಿಕ 19 ಲಕ್ಷ ಅಂಗಡಿ ಬಾಡಿಗೆ ವಸೂಲಾಗಿದ್ದು, ಬಾಕಿ ಹಣ ವಸೂಲಾಗದೇ ಇರುವುದರಿಂದ ಪಂಚಾಯ್ತಿಯು ಆರ್ಥಿಕ ಕೊರತೆ ಉಂಟಾಗಿದೆ. ಕೂಡಲೇ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಂದಾಯ ನಿರೀಕ್ಷಕರಿಗೆ ತಿಳಿಸಲಾಯಿತು.

      ಸಭೆಗೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಎಇಇ ಉಮಾಮಹೇಶ್ವರ್ ಪಟ್ಟಣ ಪಂಚಾಯ್ತಿಯ ಮುಖ್ಯ ರಸ್ತೆಗೆ 9.5 ಕೋಟಿ ರೂಗಳಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಮಂಜೂರಾಗಿದೆ. ಕಾಮಗಾರಿಯ ಅಂದಾಜು ಪಟ್ಟಿ ಪ್ರಕಾರ ಪಟ್ಟಣದ ಮುಖ್ಯರಸ್ತೆ 14 ಮೀಟರ್ ಅಗಲದ ವೈಟ್ ಟ್ಯಾಪಿಂಗ್ ರಸ್ತೆಯನ್ನು ಮಾಡಲಾಗುವುದು. ಮಧ್ಯದಲ್ಲಿ 1 ಮೀಟರ್ ಅಗಲದ ಡಿವೈಡರ್ ಬಿಟ್ಟು ಮಾಡಲಾಗುವುದು. ಹಾಗೂ 2 ಮೀಟರ್‍ಗಳ ಅಗಲ ಪಾದಚಾರಿ ರಸ್ತೆಯನ್ನು ಸಹ ನಿರ್ಮಿಸಲಾಗುವುದು. ಆದ್ದರಿಂದ ಮುಖ್ಯರಸ್ತೆಯಲ್ಲಿ ಪಾದಚಾರಿ ರಸ್ತೆ ಸೇರಿದಂತೆ ಚರಂಡಿ ಮೇಲೆ ಅನೇಕ ಅಂಗಡಿಗಳು ಮತ್ತು ಅನದಿಕೃತವಾಗಿ ತಲೆಎತ್ತಿವೆ. ಹಾಗೂ ಕೆಲವು ಅಂಗಡಿಗಳ ಮಾಲೀಕರು ಅದನ್ನು ಮುಚ್ಚು ಹಾಕಿಕೊಂಡು ರಸ್ತೆಗೆ ಬಂದ್ದಿದ್ದಾರೆ. ಇದನ್ನು ಪ.ಪಂ ಖಾಲಿಮಾಡಿಸಿಕೊಟ್ಟರೆ ಕಾಮಗಾರಿ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಸಭೆಯಲ್ಲಿ ಪ.ಪಂ ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ತೆರವು ಕಾರ್ಯವನ್ನು ಮಾಡುವುದಾಗಿ ಅವರಿಗೆ ಭರವಸೆ ನೀಡಿದರು. ಇದರೊಂದಿಗೆ ಪಟ್ಟಣ ಪಂಚಾಯತಿಯ ವಿವಿಧ ಅಭಿವೃದ್ದಿ ಕೆಲಸಗಳನ್ನು ಚರ್ಚಿಸಲಾಯಿತು.

      ಸಭೆಯಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಯ್ಯ, ಕೆ.ಆರ್ ಓಬಳರಾಜು, ಲಕ್ಷ್ಮೀನಾರಾಯಣ, ಪುಟ್ಟನರಸಪ್ಪ, ಪ್ರದೀಪ್‍ಕುಮಾರ್, ನಟರಾಜು ಕೆ.ಎನ್, ನಾಗರಾಜು, ಭಾಗ್ಯಮ್ಮ ಗಣೇಶ್, ಕಾವ್ಯಶ್ರೀ ರಮೇಶ್, ಹೇಮಲತ ಮಂಜುನಾಥ್, ಅನಿತಾ, ಹುಸ್ನಾಫರೀಯಾ ಖಲೀಂ, ಕಂದಾಯ ನಿರೀಕ್ಷಕ ವೀರಭದ್ರಾಚಾರ್, ಆರೋಗ್ಯ ನಿರೀಕ್ಷಕ ರೈಸ್‍ಅಹಮದ್, ಸಿಬ್ಬಂದಿಗಳಾದ ಮಹೇಶ್, ಶೈಲೇಂದ್ರ, ಸಾವಿತ್ರಮ್ಮ, ನಾಗರತ್ನಮ್ಮ, ವೆಂಕಟಪತಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link